ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸುಸಜ್ಜಿತಗೊಳಿಸಲು ಶಾಸಕರು ಮುತುವರ್ಜಿ ವಹಿಸಿದ್ದು, 1. 6 ಕೋಟಿ ರು. ವೆಚ್ಚದ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರು ತಿಳಿಸಿದ್ದಾರೆ.ಪ್ರತಿ ಸೋಮವಾರ 8 ರಿಂದ 9 ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿದ್ದು, ರೋಗಿಗಳಿಗೆ ಔಷಧಿ ಮಾತ್ರೆಗಳನ್ನು ಆಸ್ಪತ್ರೆಯಲ್ಲಿಯೇ ವಿತರಣೆ ಮಾಡಲಾಗುತ್ತಿದೆ ಎಂದು ಸಮಿತಿ ಸದಸ್ಯೆ ಮಂಜುಳಾ ಹರೀಶ್ ಬುಧವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಆಸ್ಪತ್ರೆಯಲ್ಲಿ 17 ಲಕ್ಷ ರು. ನಷ್ಟು ಔಷಧಿ, ಮಾತ್ರೆಗಳು ಹಾಗು ಹೈಟೆಕ್ ರಕ್ತ ಪರೀಕ್ಷಾ ಘಟಕಕ್ಕೆ ಬೇಕಾದ ರಾಸಾಯನಿಕಗಳನ್ನು ಖರೀದಿ ಮಾಡಲಾಗಿದೆ. ರೋಗಿಗಳಿಗೆ ಎಲ್ಲ ರೀತಿಯ ಪರೀಕ್ಷೆಗಳು ಆಸ್ಪತ್ರೆಯಲ್ಲೇ ನಡೆಸಲಾಗುತ್ತದೆ. ಎಲ್ಲಾ ಔಷಧಿ, ಮಾತ್ರೆಗಳು ಲಭ್ಯವಿದೆ ಎಂದು ಹೇಳಿದರು.ಆಸ್ಪತ್ರೆಯಲ್ಲಿ ಒಟ್ಟು 8 ಮಂದಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ಒಂದು ವಾರದೊಳಗೆ ಮಕ್ಕಳ ತಜ್ಞರ ಸೇವೆ ಸಿಗಲಿದೆ. ಶಸ್ತ್ರ ಚಿಕಿತ್ಸಕರು, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು, ಇಎನ್‌ಟಿ, ಫಿಜಿಷಿಯನ್, ದಂತ ವೈದ್ಯರು ಲಭ್ಯವಿರುತ್ತಾರೆ. ಕೀಲು ಮತ್ತು ಮೂಳೆ ತಜ್ಞರು ಸೋಮವಾರ, ಗುರುವಾರ, ಶನಿವಾರ, ಭಾನುವಾರ ಇರುತ್ತಾರೆ.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಸೋಮವಾರದಂದು ನೇತ್ರ ತಜ್ಞ, ಶ್ವಾಸಕೋಶ ತಜ್ಞ, ಮಕ್ಕಳ ತಜ್ಞರು ಲಭ್ಯವಿರುತ್ತಾರೆ. ವಾರದಲ್ಲಿ ಎರಡು ದಿನ ಅರವಳಿಗೆ ತಜ್ಞರು ಲಭ್ಯವಿದ್ದು, ಎಲ್ಲ ರೀತಿಯ ಶಸ್ತ್ರ ಚಿಕಿತ್ಸೆಗಳು ನಡೆಯುತ್ತವೆ ಎಂದು ಮಾಹಿತಿ ನೀಡಿದರು.ಸದಸ್ಯ ಕೆ.ಪಿ. ರವೀಶ್ ಮಾತನಾಡಿ, ಸೋಮವಾರದಂದು 200 ರಿಂದ 300 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಡಯಾಲಿಸಿಸ್ ಘಟಕದಲ್ಲಿ 6 ಯಂತ್ರಗಳು ಕೆಲಸ ಮಾಡುತ್ತವೆ. ತಿಂಗಳಿಗೆ 400 ಡಯಾಲಿಸಿಸ್ ಸೈಕಲ್ ನಡೆಯುತ್ತದೆ. 41 ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕೋವಿಡ್ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಪಟ್ಟಂತೆ ಕೋವಿಡ್ ವಾರ್ಡ್ಗಳು, ವೆಂಟಿಲೇಟರ್, ಹಾಗು ಆಕ್ಷಿಜನ್ ಕಾನ್ಸಂಟ್ರೇಟರ್ ಲಭ್ಯವಿರುತ್ತವೆ. ಸಿಬಿ ನ್ಯಾಟ್ ಹೊಸ ಯಂತೋಪಕರಣ ಲಭ್ಯವಿದ್ದು, ಟಿ.ಬಿ.ಕಾಯಿಲೆಯನ್ನು ಅತೀ ಜರೂರಾಗಿ ಕಂಡು ಹಿಡಿಯಬಹುದಾಗಿದೆ. ಅನಸ್ತೇಷಿಯಾ ವರ್ಕ್ ಸ್ಟೇಷನ್ ಕೆಲಸ ನಿರ್ವಹಿಸುತ್ತಿದೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ 3 ಅಂಬ್ಯುಲೆನ್ಸ್ ವಾಹನ ಲಭ್ಯವಿದೆ. ಜೂನ್ 27ರಂದು ಡಿಎಚ್‌ಒ ಕಚೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳ ಆಯ್ಕೆ ಕೌನ್ಸಿಲಿಂಗ್ ನಡೆಯಲಿದ್ದು, ಸೋಮವಾರಪೇಟೆ ಆಸ್ಪತ್ರೆಯಲ್ಲಿನ ಖಾಲಿ ಹುದ್ದೆಗಳು ಭರ್ತಿಯಾಗುತ್ತವೆ ಎಂದು ಹೇಳಿದರು.ಗೋಷ್ಠಿಯಲ್ಲಿ ಎನ್.ಎನ್.ರಮೇಶ್, ಎಚ್.ಕೆ.ಲೋಕೇಶ್, ಜೇಕಬ್ ಸೈಮನ್ ಇದ್ದರು.