ನಾಲ್ವಡಿ, ನಾಡಪ್ರಭು, ಕೆವಿಎಸ್ ಇಂದಿನ ರಾಜಕಾರಣಿಗಳಿಗೆ ಮಾದರಿ: ಎಚ್.ಆರ್.ಅರವಿಂದ್

| Published : Jun 30 2025, 12:34 AM IST

ನಾಲ್ವಡಿ, ನಾಡಪ್ರಭು, ಕೆವಿಎಸ್ ಇಂದಿನ ರಾಜಕಾರಣಿಗಳಿಗೆ ಮಾದರಿ: ಎಚ್.ಆರ್.ಅರವಿಂದ್
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ವಿದ್ಯಾರ್ಥಿಗಳಿಗೆ ಸಾಧನೆ ತೊಡಕಾಗಬಾರದು. ಭವಿಷ್ಯಕ್ಕೆ ದಾರಿಯಾಗಬೇಕು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು 10 ವರ್ಷ ಶ್ರಮಪಟ್ಟು ಇಷ್ಟಪಟ್ಟು ಓದಿದರೆ ಭವಿಷ್ಯ ಉಜ್ವಲವಾಗಿರುತ್ತದೆ. ಸಾಧನೆ ಸುಮ್ಮನೆ ಮಾಡಲು ಸಾಧ್ಯವಿಲ್ಲ. ಪರಿಶ್ರಮದಿಂದ ಪಡೆಯುವಂತದ್ದಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ನಾಡಪ್ರಭು ಕೆಂಪೇಗೌಡ, ಕೆ.ವಿ.ಶಂಕರಗೌಡರು ಇಂದಿನ ರಾಜಕಾರಣಿಗಳಿಗೆ ಮಾದರಿ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಹೇಳಿದರು.

ನಗರದ ಸೇವಾಕಿರಣ ಸಭಾಂಗಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಘಟಕ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಂಕವೀರ ಪುರಸ್ಕಾರ ಮತ್ತು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯ ರಾಜಕಾರಣಿಗೆ ರಾಜಾಡಳಿತದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ನಾಡಪ್ರಭು ಕೆಂಪೇಗೌಡ ಅವರು ಮಾದರಿಯಾಗಲಿ. ಈ ಮಹಾನ್ ನಾಯಕರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಪ್ರಗತಿ ಸಾಧ್ಯವಿದೆ ಎಂದರು.

ಇಂದಿನ ವಿದ್ಯಾರ್ಥಿಗಳಿಗೆ ಸಾಧನೆ ತೊಡಕಾಗಬಾರದು. ಭವಿಷ್ಯಕ್ಕೆ ದಾರಿಯಾಗಬೇಕು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು 10 ವರ್ಷ ಶ್ರಮಪಟ್ಟು ಇಷ್ಟಪಟ್ಟು ಓದಿದರೆ ಭವಿಷ್ಯ ಉಜ್ವಲವಾಗಿರುತ್ತದೆ. ಸಾಧನೆ ಸುಮ್ಮನೆ ಮಾಡಲು ಸಾಧ್ಯವಿಲ್ಲ. ಪರಿಶ್ರಮದಿಂದ ಪಡೆಯುವಂತದ್ದಾಗಿದೆ ಎಂದು ಸಲಹೆ ನೀಡಿದರು.

ವಕೀಲ ಎಂ.ಗುರುಪ್ರಸಾದ್, ಸಮಾಜ ನಮಗೆನು ಕೊಡುತ್ತಿದೆ ಎನ್ನುವುದಕ್ಕಿಂತ ಸಮಾಜ ನಮ್ಮ ಕೊಡಿಗೆ ಎನು ಎನ್ನುವವರು ಸಾಧನೆ ಮಾಡುತ್ತಾರೆ, ಸಮಾಜದ ಋಣ ತೀರಿಸಲು ಎಲ್ಲರೂ ಶ್ರಮಿಸಬೇಕು ಎಂದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಂಕವೀರ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನವನ್ನು ಗಣ್ಯರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸೇವಾಕಿರಣ ವೃದ್ಧಾಶ್ರಮದ ಕಾರ್ಯದರ್ಶಿ ಜಿ.ವಿ.ನಾಗರಾಜು, ಕಸಿವೇ ರಾಜ್ಯಾಧ್ಯಕ್ಷ ಪೋತೇರ ಮಹದೇವು, ವೈದ್ಯ ಡಾ. ಎಚ್.ಸಿ.ಆನಂದ್, ಎಂ.ಸಿ.ಚೊಂದಮ್ಮ ಪೂಣಚ್ಚ, ಮಿಮ್ಸ್ ಪ್ರಸೂತಿ ತಜ್ಞ ಡಾ.ಮನೋಹರ್, ಜಾನಪದ ತಜ್ಞ ಕೀಲಾರ ಕೆ.ಪಿ.ವೀರಪ್ಪ, ಮಂಜುಳಾ, ಸುಧಾ ಮತ್ತಿತರರಿದ್ದರು.

ಇದೇ ವೇಳೆ ಮಾಜಿ ಸಚಿವ ಲೇಹೌಟ್ ಕೃಷ್ಣಪ್ಪರ ಹುಟ್ಟುಹಬ್ಬದ ಪ್ರಯುಕ್ತ ಸಿಹಿ ವಿತರಣೆ ಮಾಡಲಾಯಿತು. ಕೃಷ್ಣಪ್ಪರಿಗೆ ಆಯುಸ್ಸು ಆರೋಗ್ಯ ಲಭ್ಯತೆಗಾಗಿ ಹಿರಿಯರು ಆಶೀರ್ವಾದ ಮಾಡಿ ಅವರ ಕೊಡುಗೆ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಅನಾಥ, ವಯೋವೃದ್ಧ ಆಶ್ರಮಗಳಿಗೆ ಅನ್ನದಾಸೋಹ ಕಾರ್ಯ ಮಾಡಲಾಗುವುದು ಎಂದರು.

ದಿ.ಆರ್.ಧ್ರುವನಾರಾಯಣರ ಪತ್ನಿ ವೀಣಾ ಹುಟ್ಟುಹಬ್ಬ ಆಚರಣೆ

ಮಳವಳ್ಳಿ:

ಚಾಮರಾಜನಗರ ಮಾಜಿ ಸಂಸದ ದಿ.ಆರ್.ಧ್ರುವನಾರಾಯಣರ ಪತ್ನಿ ವೀಣಾ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಆರ್.ಧ್ರುವನಾರಾಯಣ ಅಭಿಮಾನಿಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.

ಯುವ ಮುಖಂಡ ಬಸಂತ್ ನೇತೃತ್ವದಲ್ಲಿ ಹತ್ತಾರು ಅಭಿಮಾನಿಗಳು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿದರು.

ಯುವ ಮುಖಂಡ ಬಸಂತ್ ಮಾತನಾಡಿ, ಶಾಸಕ, ಸಂಸದರಾಗಿ ಅನೇಕ ಜನಪರ ಕಾರ್ಯಗಳ ನಾಡಿನ ಗಮನ ಸೆಳೆದಿದ್ದ ದಿ.ಆರ್.ಧ್ರುವನಾರಾಯಣ ಅವರು ಯುವ ರಾಜಕರಣಿಗಳಿಗೆ ಸ್ಪೂರ್ತಿಯಾಗಿದ್ದರು. ಅವರ ನಡೆ ನುಡಿ ಎಲ್ಲರಿಗೂ ಮಾದರಿಯಾಗಿತ್ತು. ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿದ್ದ ಅವರಿಗೆ ಪತ್ನಿ ವೀಣಾ ಅವರು ಶಕ್ತಿಯಾಗಿದ್ದರು ಎಂದು ಹೇಳಿದರು.

ಮುಖಂಡ ಹಾಡ್ಲಿ ಸುರೇಶ್ ಮಾತನಾಡಿ, ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ ಅವರಿಗೆ ಶಕ್ತಿಯಾಗಿದ್ದ ವೀಣಾ ಅವರು ಅನೇಕ ಸಮಾಜಮುಖಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು ಎಂದು ಹೇಳಿದರು.

ಈ ವೇಳೆ ಡಾ.ಶಿವಸ್ವಾಮಿ, ಮುಖಂಡರಾದ ಯತೀಶ್, ಜಗದೀಶ್, ಜೀವನ್, ವೀರೇಶ್, ಸಿದ್ದಪ್ಪ ಪಾಲ್ಗೊಂಡಿದ್ದರು.