ಸಾರಾಂಶ
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಹಾಲೇಕಲ್ಲು ಗ್ರಾಮ ಪಂಚಾಯಿತಿ ಪಿಡಿಒ ನಂದಿಲಿಂಗೇಶ್ವರ ಅವರು ಹಾಲೇಕಲ್ಲು ಗ್ರಾಮ ಪಂಚಾಯಿತಿಗೆ ಕರ್ತವ್ಯದ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದ ಗ್ರಾಮಸ್ಥರು, ಸಾರ್ವಜನಿಕರಿಗೆ ಕೆಲಸಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ೧೫ನೇ ಹಣಕಾಸಿನ ಸ್ವಚ್ಛತಾ ಕಾರ್ಯಕ್ಕಾಗಿ ಮೀಸಲಿಟ್ಟಿರುವ ಹಣ ದುರ್ಬಳಕೆ ಮಾಡಿದ್ದಾರೆ. ಪಿಡಿಒ ಭ್ರಷ್ಟಾಚಾರಗಳ ವಿರುದ್ಧ ತನಿಖೆಯಾಗಬೇಕು ಎಂದು ಹಾಲೇಕಲ್ಲು ಗ್ರಾಪಂ ೨ನೇ ವಾರ್ಡ್ ಸದಸ್ಯ ಟಿ.ಜಿ.ನಾಗರಾಜ್ ಆರೋಪಿಸಿದ್ದಾರೆ.ಕಳೆದ ಯುಗಾದಿ ಹಬ್ಬಕ್ಕೆ ಗ್ರಾಮದ ಸ್ವಚ್ಛತಾ ಕಾರ್ಯಕ್ಕೆ ₹೧.೪೦ ಲಕ್ಷ ಬಿಡುಗಡೆಯಲ್ಲಿ ಎಸ್‌ಸಿ ಕಾಲೋನಿಗೆ ₹೫೦ ಸಾವಿರ, ಸಾಮಾನ್ಯ ವರ್ಗದ ವಾಸಿಸುವ ಕಾಲೋನಿಗೆ ₹೯೦ ಸಾವಿರ, ೧೫ನೇ ಹಣಕಾಸಿನಲ್ಲಿ ಸ್ವಚ್ಛತೆಗಾಗಿ ಬಿಡುಗಡೆ ಮಾಡಲು ಅಧ್ಯಕ್ಷರಾದ ಪಿ.ಕಲ್ಲಮ್ಮ ಸಮ್ಮುಖ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೆ ಪಿಡಿಒ ನಂದಿಲಿಂಗೇಶ್ವರ್ ತಮಗೆ ಬೇಕಾದ ವ್ಯಕ್ತಿಗೆ ಗುತ್ತಿಗೆ ಮಾಡಿಕೊಂಡು ಸ್ವಚ್ಛತಾ ಹಣದಲ್ಲಿ ₹೭೧ ಸಾವಿರ ಮಾತ್ರ ನೀಡಿದ್ದಾರೆ. ಉಳಿದ ₹೬೯ ಸಾವಿರ ಎಲ್ಲಿ ಎಂದು ಕೇಳಿದರೆ ಜಿಎಸ್‌ಟಿ, ರಾಯಲ್ಟಿ ಮತ್ತಿತರೆ ಶಾಸನಬದ್ಧ ಕಟಾವಣೆಗಳಾಗಿವೆ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಇಷ್ಟೇ ಅಲ್ಲದೇ, ಪಿಡಿಒ ನಂದಿಲಿಂಗೇಶ್ವರ್ ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶೌಚಾಲಯ ಮತ್ತು ಬಾಲಕಿಯರ ಶೌಚಾಲಯ ನಿರ್ಮಾಣದಲ್ಲೂ ಅಕ್ರಮ ಎಸಗಿದ್ದಾರೆ. ಶೌಚಾಲಯ ನಿರ್ಮಾಣಕ್ಕೆ ₹೪ ಲಕ್ಷ ಬಿಡುಗಡೆಯಾಗಿತ್ತು. ಕಾಮಗಾರಿ ಮಾರ್ಚ್‌ನಲ್ಲಿಯೇ ಮುಕ್ತಾಯವಾಗಿದೆ. ಆದರೆ, ಅದರಲ್ಲಿ ಶೇ.೫೨ರಷ್ಟು ಜಿಎಸ್‌ಟಿ, ಕಮಿಷನ್, ರಾಯಲ್ಟಿ ಮತ್ತಿತರೆ ಎಂದು ಹಣ ಕಡಿತಗೊಳಿಸಿದ್ದಾರೆ. ಹೀಗಾದರೆ ಗುಣಮಟ್ಟದ ಕಾಮಗಾರಿ ಸಾಧ್ಯವೇ? ಸಾರ್ವಜನಿಕ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದ ಪಿಡಿಒ ವಿರುದ್ಧ ತಾಪಂ ಇಒ ಕೆಂಚಪ್ಪ ಅವರಿಗೂ ತಿಳಿಸಲಾಗಿದೆ. ಆದರೆ, ಏನು ಕ್ರಮ ಕೈಗೊಂಡಿಲ್ಲ ಎಂದು ನಾಗರಾಜ್ ಪತ್ರಕರ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಕರ್ತರು ಗ್ರಾಪಂ ಸದಸ್ಯ ನಾಗರಾಜ್ ಆರೋಪದ ಬಗ್ಗೆ ಪ್ರತಿಕ್ರಿಯೆ ಕೇಳಲು ಪಿಡಿಒ ಅವರಿಗೆ ಕರೆ ಮಾಡಿದಾಗ, ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅಧ್ಯಕ್ಷೆ ಪಿ.ಕಲ್ಲಮ್ಮ ಪ್ರತಿಕ್ರಿಯಿಸಿ, ಪಿಡಿಒ ₹೮೬ ಸಾವಿರ ನೀಡಿದ್ದಾರೆ. ಉಳಿದಿದ್ದು ಜಿಎಸ್‌ಟಿ, ಗುತ್ತಿಗೆ ಎಂದು ಹೇಳುತ್ತಿದ್ದಾರೆ. ಆ ಪಿಡಿಒ ನಮ್ಮ ಕೈಗೂ ಸಿಗುತ್ತಿಲ್ಲ ಎಂದು ದೂರಿದ್ದಾರೆ.
ಪಿಡಿಒ ಭ್ರಷ್ಟಾಚಾರ ನಡೆಸಿರುವ ಬಗ್ಗೆ ಗ್ರಾಮಸ್ಥ ಬಸವರಾಜ್ ತಾಪಂ ಇಒ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಸ್ವಚ್ಛತಾ ಕಾರ್ಯಕ್ಕೆ ಬಿಡುಗಡೆಯಾದ ಹಣದಲ್ಲಿ ಶೇ.೧೮ರಷ್ಟು ಜಿಎಸ್‌ಟಿ ಮತ್ತು ಶಾಸನಬದ್ಧ ಕಟಾವಣೆಗಳಾಗುತ್ತವೆ. ಉಳಿದ ಹಣ ವೆಂಡರ್ ಮೂಲಕ ಅಕೌಂಟ್‌ಗೆ ವರ್ಗಾವಣೆಯಾಗಿ ಸ್ವಚ್ಛತಾ ಕಾರ್ಯಕ್ಕೆ ಬಿಡುಗಡೆ ಆಗುತ್ತದೆ. ಅಲ್ಲಿ ಏನು ಆಗಿದೆ ಎಂದು ತಿಳಿದಿಲ್ಲ. ಪಿಡಿಒ ನಂದಿಲಿಂಗೇಶ್ವರ ಅವರನ್ನು ಕರೆದು ವಿಚಾರಿಸಿ, ಕ್ರಮ ಜರುಗಿಸುತ್ತೇನೆ.- ಕೆಂಚಪ್ಪ, ಇಒ, ಜಗಳೂರು ತಾಪಂ.