ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಾಂಡವಪುರ ರೈಲ್ವೆ ನಿಲ್ದಾಣದ ವೃತ್ತಕ್ಕೆ ಪಿಎಸ್‌ಎಸ್‌ಕೆ (ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ) ಸಂಸ್ಥಾಪಕ ಅಧ್ಯಕ್ಷ ಮಾಜಿ ಶಾಸಕ ಬಿ.ವೈ.ನೀಲೇಗೌಡರ ಹೆಸರನ್ನು ನಾಮಕರಣ ಮಾಡಬೇಕು ಎಂದು ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ತಾಲೂಕು ಶಾಖೆ ಆಗ್ರಹಿಸಿತು.ತಾಲೂಕಿನ ಕೆನ್ನಾಳು ಗ್ರಾಪಂಗೆ ಟ್ರಸ್ಟ್‌ನ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್ ಅವರ ನೇತೃತ್ವದಲ್ಲಿ ತೆರಳಿದ ಪದಾಧಿಕಾರಿಗಳು, ಗ್ರಾಪಂ ಅಧ್ಯಕ್ಷ ವಿ.ಪ್ರಕಾಶ್ ಅವರಿಗೆ ಈ ಕುರಿತು ಮನವಿ ಸಲ್ಲಿಸಿ ಸಾಮಾನ್ಯ ಸಭೆಯಲ್ಲಿ ಪಾಂಡವಪುರ ರೈಲ್ವೆ ನಿಲ್ದಾಣದ ವೃತ್ತಕ್ಕೆ ಬಿ.ವೈ.ನೀಲೇಗೌಡರ ಹೆಸರನ್ನು ನಾಮಕರಣ ಮಾಡುವಂತೆ ನಿರ್ಣಯ ಅಂಗೀಕರಿಸುವಂತೆ ಒತ್ತಾಯಿಸಿದರು.
ಈ ವೇಳೆ ಮನವಿ ಸ್ವೀಕರಿಸಿದ ಕೆನ್ನಾಳು ಗ್ರಾಪಂ ಅಧ್ಯಕ್ಷ ವಿ.ಪ್ರಕಾಶ್, ಜುಲೈ 29ರಂದು ಪಂಚಾಯ್ತಿ ಸಾಮಾನ್ಯ ಸಭೆ ಕರೆಯಲಾಗಿದೆ. ಸಭೆಯಲ್ಲಿ ಈ ವಿಚಾರ ಮಂಡಿಸುವುದಾಗಿ ತಿಳಿಸಿದರು.ಈ ವೇಳೆ ಟ್ರಸ್ಟ್ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್ ಮಾತನಾಡಿ, ಪಿಎಸ್‌ಎಸ್‌ಕೆ ಕಾರ್ಖಾನೆ ಇಡೀ ರಾಜ್ಯದಲ್ಲಿಯೇ ಅತ್ಯುತ್ತಮ ಸಕ್ಕರೆ ಕಾರ್ಖಾನೆ ಎಂಬುದಾಗಿ ಪ್ರಸಿದ್ಧಿ ಪಡೆದಿತ್ತು. ಈ ಕಾರ್ಖಾನೆ ಸ್ಥಾಪನೆಗೆ ಪ್ರಮುಖ ಕಾರಣಕರ್ತರಾದ ಬಿ.ವೈ.ನೀಲೇಗೌಡರು ಪಾಂಡವಪುರ ವಿಧಾನಸಭಾ ಕ್ಷೇತ್ರದ ಪ್ರಪ್ರಥಮ ಶಾಸಕರಾಗಿದ್ದರು ಎಂದರು.
ಇಂತಹ ನಿಸ್ವಾರ್ಥ ರಾಜಕೀಯ ಮುತ್ಸದ್ದಿಯನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಜತೆಗೆ ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕಿನ ರೈತರ ಜೀವನಾಡಿಯಾದ ಪಿಎಸ್‌ಎಸ್‌ಕೆ ಸಂಸ್ಥಾಪನೆಗೆ ಕಾರಣರಾದ ಬಿ.ವೈ.ನೀಲೇಗೌಡರ ಹೆಸರನ್ನು ಮುಂದಿನ ಪೀಳಿಗೆಗೆ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಬೇಕಾಗಿದೆ ಎಂದರು.ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಮೈಸೂರಿನಿಂದ ಕೆ.ಆರ್.ಪೇಟೆ, ಪಾಂಡವಪುರ ಮತ್ತು ನಾಗಮಂಗಲಕ್ಕೆ ಸಂಪರ್ಕ ಕಲ್ಪಿಸುವ ವೃತ್ತಕ್ಕೆ ಬಿ.ವೈ.ನೀಲೇಗೌಡ ವೃತ್ತ ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ಇದೇ ವೇಳೆ ತಾಪಂ ಇಒಗೂ ಬಿ.ವೈ.ನೀಲೇಗೌಡರ ಹೆಸರನ್ನು ವೃತ್ತಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಪತ್ರ ಸಲ್ಲಿಸಲಾಯಿತು.
ಟ್ರಸ್ಟ್‌ನ ಗೌರವಾಧ್ಯಕ್ಷ ಎಸ್.ಮಲ್ಲಿಕಾರ್ಜುನೇಗೌಡ, ಖಜಾಂಚಿ ರೈಟರ್ ಸ್ವಾಮಿಗೌಡ, ಪದಾಧಿಕಾರಿಗಳಾದ ಬಿ.ಎಸ್.ಜಯರಾಂ, ಚಂದ್ರಶೇಖರಯ್ಯ, ಕೆ.ಕುಬೇರ್, ಎಂ.ರಾಜೀವ್, ಎಚ್.ಕೆ.ಜನಾರ್ಧನ್, ಕೋ.ಪು.ಗುಣಶೇಖರ್, ಗ್ರಾ.ಪಂ ಸದಸ್ಯ ಕೆನ್ನಾಳುಕಾಂತರಾಜು, ಆಟೋ ಕೃಷ್ಣ ಇತರರಿದ್ದರು.