ಕನ್ನಡಪ್ರಭ ವಾರ್ತೆ ವಿಜಯಪುರ

ತೂಕದಲ್ಲಿ ಮೋಸ, ಆಕ್ಷನ್ ನೆಪದಲ್ಲಿ ತೂರಾಟ ನಡೆಸಿ ಅನಾವಶ್ಯಕವಾಗಿ ರೈತರ ಉತ್ಪನ್ನ ಹಾಳಾಗುವುದನ್ನು ತಪ್ಪಿಸಲು ಹಾಗೂ ಪಾರದರ್ಶಕ ವಹಿವಾಟಿಗಾಗಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆಗೆ ಮೊದಲ ಆದ್ಯತೆ ನೀಡಬೇಕು. ಹೀಗಾಗಿ ಕಡ್ಡಾಯವಾಗಿ ವಾರದಲ್ಲಿ ಎರಡು ಬಾರಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆಯಲ್ಲೇ ಒಣ ದ್ರಾಕ್ಷಿ ವಹಿವಾಟು ನಡೆಸಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಎಪಿಎಂಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ವಿಜಯಪುರ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಎಪಿಎಂಸಿ ಆಡಳಿತಾಧಿಕಾರಿ ಮತ್ತು ಕಾರ್ಯದರ್ಶಿಗಳ ಸಮ್ಮುಖದಲ್ಲಿ ನಡೆಸಿದ ದ್ರಾಕ್ಷಿ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ದ್ರಾಕ್ಷಿ ಬೆಳೆಗಾರರ ಅನುಕೂಲಕ್ಕಾಗಿ ನಗರದಲ್ಲಿ ಆನಲೈನ್ ಮಾರುಕಟ್ಟೆ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು. ತಾತ್ಕಾಲಿಕವಾಗಿ ವಾರದಲ್ಲಿ ಒಮ್ಮೆ ಮಾತ್ರ ಆಫಲೈನ್ ಮೂಲಕ ವಹಿವಾಟು ನಡೆಯಲಿ. ಆದರೆ, ಕಡ್ಡಾಯವಾಗಿ ಆನಲೈನ್ ಟ್ರೇಡಿಂಗ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ಪಾಲಿಸುವ ಮಾರ್ಗಸೂಚಿಗಳು ಮತ್ತು ನಿಯಮಗಳನ್ನೇ ಪಾಲಿಸಬೇಕು. ಇದರ ಸಾಧಕ-ಬಾಧಕ ನೋಡಿ ಮುಂದುವರೆಸಬೇಕೋ ಬೇಡವೋ ಎನ್ನುವುದರ ಬಗ್ಗೆ ತೀರ್ಮಾನ ಮಾಡೋಣ ಎಂದು ಸಭೆಗೆ ತಿಳಿಸಿದರು.

ಆನಲೈನ್ ಮಾರುಕಟ್ಟೆಯಿಂದ ರೈತರಿಗೆ ಯಾವುದೇ ರೀತಿಯ ಮೋಸ ಆಗುವುದಿಲ್ಲ. ಆಫಲೈನ್ ವ್ಯವಸ್ಥೆ ವರ್ತಕರಿಗೆ ಈವರೆಗೆ ರೈತರು ನೀಡುತ್ತಿದ್ದ ಶೇ.2ರಷ್ಟು ಕಮಿಷನ್ ಸಹ ಉಳಿಯಲಿದೆ. ಹೀಗಾಗಿ ರೈತ ವಿರೋಧಿ ಮತ್ತು ವರ್ತಕರ ವಿರೋಧಿಯಾದ ಖಾಸಗಿ ಅಸೋಸಿಯೇಷನ್ ನಿಯಮ ತಕ್ಷಣ ರದ್ದುಪಡಿಸಬೇಕು ಎಂದು ಸೂಚನೆ ನೀಡಿದರು. ಎಪಿಎಂಸಿ ನಿಯಮಾವಳಿ ಮತ್ತು ಅಧಿಕಾರಿಗಳ ಸಮ್ಮುಖದಲ್ಲೇ ವ್ಯಾಪಾರ ನಡೆಯುವುದರಿಂದ ವಹಿವಾಟಿನ ನಿಖರ ಮಾಹಿತಿ ಸಿಗುತ್ತದೆ. ಆಗ ಸರ್ಕಾರಕ್ಕೆ ದೊರೆಯಬೇಕಾದ ಸೆಸ್ ಮತ್ತು ಜಿ.ಎಸ್.ಟಿ ಮೂಲಕ ಹೆಚ್ಚಿನ ಆದಾಯ ದೊರೆಯಲಿದೆ. ಎಪಿಎಂಸಿಯಲ್ಲಿ ಪರವಾನಗಿ ಪಡೆಯುವ ಪ್ರತಿಯೊಬ್ಬ ವರ್ತಕರು ಆನ್ ಲೈನ್ ಮತ್ತು ಆಪಲೈನ್ ದಲ್ಲಿ ಖರೀದಿ ಮಾಡಲು ಅವಕಾಶ ಕಲ್ಪಿಸಬೇಕು. ಪರವಾನಗಿ ಕೋರಿ ಅರ್ಜಿ ಸಲ್ಲಿಸುವ ವರ್ತಕರಿಗೆ ವಿನಾಕಾರಣ ಸತಾಯಿಸದೇ ನಿಯಮಾವಳಿ ಪ್ರಕಾರ ಪರವಾನಗಿ ನೀಡಬೇಕು ಎಂದರು.

ದೇಶದ ಯಾವುದೇ ರಾಜ್ಯದ ವರ್ತಕರು ಆನಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆ ವಹಿವಾಟಿನಲ್ಲಿ ಭಾಗವಹಿಸಲು ಅವಕಾಶವಿದ್ದು, ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿಜಯಪುರ ದ್ರಾಕ್ಷಿ ಬೆಳೆಗೆ ಉತ್ತೇಜನ ನೀಡಲು ಹಾಗೂ ರೈತರಿಗೆ ಹೆಚ್ಚಿನ ಲಾಭ ದೊರಕಿಸಿ ಕೊಡಲು 140 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣ ಆಗುತ್ತಿರುವ ವೈನ್ ಪಾರ್ಕ್ ಗೆ, ಈ ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆಯ ವಹಿವಾಟು ತಳಪಾಯ ಆಗಲಿದೆ ಎಂದು ಅಭಿಪ್ರಾಯಪಟ್ಟರು.


ಸಭೆಯ ತಿರ್ಮಾನಗಳು:

ವಾರದಲ್ಲಿ ಎರಡು ಬಾರಿ ಆನಲೈನ್ ಮೂಲಕ ಮತ್ತು ತಾತ್ಕಾಲಿಕವಾಗಿ ಒಂದು ಬಾರಿ ಆಫಲೈನ್ ಮೂಲಕ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿಯಲ್ಲಿ ನಿರ್ಮಾಣ ಮಾಡಲಾದ ಆನಲೈನ್ ಟ್ರೇಡಿಂಗ್ ಮಾರುಕಟ್ಟೆ ಪ್ರಾಂಗಣದಲ್ಲೇ ಕಡ್ಡಾಯವಾಗಿ ವಹಿವಾಟು ನಡೆಸಲು ಹಾಗೂ ಕಾನೂನು ಬಾಹಿರವಾದ ಖಾಸಗಿ ಅಸೋಸಿಯೇಷನ್ ನಿಯಮಗಳನ್ನು ರದ್ದುಪಡಿಸಲು ಶಾಸಕರ ನೇತೃತ್ವದಲ್ಲಿ ಹಾಗೂ ಎಪಿಎಂಸಿ ಆಡಳಿತಾಧಿಕಾರಿ ಮತ್ತು ಕಾರ್ಯದರ್ಶಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ತಿರ್ಮಾನಿಸಿ, ಠರಾವು ಪಾಸ್ ಮಾಡಲಾಯಿತು.

ಸಭೆಯಲ್ಲಿ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಮಾಜಿ ಅಧ್ಯಕ್ಷ ಎಂ.ಎಸ್.ರುದ್ರಗೌಡರ, ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಭಯಕುಮಾರ ನಾಂದ್ರೇಕರ, ಜಿಲ್ಲಾಧ್ಯಕ್ಷ ಎಂ.ಎಸ್.ಲೋಣಿ, ಎಪಿಎಂಸಿ ಆಡಳಿತಾಧಿಕಾರಿ ಆರ್‌.ಆದಪ್ಪ, ಕಾರ್ಯದರ್ಶಿ ಅಲ್ಲಾಭಕ್ಷ ಬಿಜಾಪುರ ಸೇರಿದಂತೆ ದ್ರಾಕ್ಷಿ ಬೆಳೆಗಾರರು, ವರ್ತಕರು ಉಪಸ್ಥಿತರಿದ್ದರು.