ಕನ್ನಡಪ್ರಭ ವಾರ್ತೆ ವಿಜಯಪುರ
ಡಾ.ಫ.ಗು.ಹಳಕಟ್ಟಿ ಅವರು ಅನೇಕ ಕಷ್ಟಗಳನ್ನು ಎದುರಿಸಿ ವಚನ ಸಾಹಿತ್ಯ ಬೆಳಕಿಗೆ ತಂದ ಮಹಾತ್ಮರು. ಅವರು ಪ್ರಕಟಿಸುತ್ತಿದ್ದ ಶಿವಾನುಭವ ಪತ್ರಿಕೆಯನ್ನು ಮರುಮುದ್ರಣ ಮಾಡುವ ಕಾರ್ಯ ಯೋಜನೆ ರೂಪಿಸಲಾಗಿದ್ದು, ಈ ಕಾರ್ಯ ಪ್ರಗತಿಯಲ್ಲಿದೆ ಎಂದು ಕೈಗಾರಿಕೆ ಸಚಿವ ಹಾಗೂ ಬಿಎಲ್‌ಡಿಇ ಸಂಸ್ಥೆ ಅಧ್ಯಕ್ಷ ಡಾ.ಎಂ.ಬಿ. ಪಾಟೀಲ ತಿಳಿಸಿದರು.ನಗರದ ಬಿ.ಎಂ. ಪಾಟೀಲ ವೈದ್ಯಕೀಯ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ಚಿಂತನ-ಸಾಂಸ್ಕೃತಿಕ ಬಳಗದ ವತಿಯಿಂದ ಏರ್ಪಡಿಸಿದ್ದ ಬಿಎಲ್‌ಡಿಇ ಸಂಸ್ಥೆ ಕಟ್ಟಿ ಬೆಳೆಸಿದ ಡಾ.ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ. ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಾ.ಹಳಕಟ್ಟಿ ಅವರು ವಚನ ಸಾಹಿತ್ಯದ ಜತೆಗೆ ಕೆರೆಗಳ, ನಿರ್ಮಾಣ ಸೇರಿದಂತೆ ವಿವಿಧ ಸೇವೆಗಳನ್ನು ನಾಡಿಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಹೆಮ್ಮರವಾಗಿ ಬೆಳೆದಿರುವ ಬಿಎಲ್‌ಡಿಇ ಸಂಸ್ಥೆಯಿಂದ ಬೆಂಗಳೂರಿನಲ್ಲೂ ಬೃಹತ್ ಕ್ಯಾಂಪಸ್ ತಲೆ ಎತ್ತಿದೆ. ಆದರೆ, ಮೊದಲು ಬಿಎಲ್‌ಡಿಇ ಕಟ್ಟಿ ಬೆಳೆಸುವ ಕಾರ್ಯ ಸುಲಭವಾಗಲಿರಲಿಲ್ಲ. ನನ್ನ ತಂದೆ ದಿ.ಬಿ.ಎಂ. ಪಾಟೀಲರು ಪಟ್ಟ ಪ್ರಯಾಸ ಅಷ್ಟಿಷ್ಟಲ್ಲ. ಅಂದು ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜ್ ಮೊದಲಾದ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಬ್ಯಾಂಕ್ ಸಾಲಕ್ಕಾಗಿ ಯಾರೂ ಮುಂದೆ ಬರಲಿಲ್ಲ. ಕೊನೆಗೆ ನಮ್ಮ ತಂದೆಯವರೇ ಸ್ವಂತ ಆಸ್ತಿಯನ್ನೇ ಗ್ಯಾರಂಟಿಯಾಗಿ ನೀಡಿ ಸಹಿ ಮಾಡಿದರು. ಹೀಗಾಗಿ ಬಿಎಲ್‌ಡಿಇ ಬೆಳೆಯಲು ಸಾಧ್ಯವಾಯಿತು ಎಂದರು.ಶಿವಮೊಗ್ಗ ಬೆಕ್ಕಿನ ಕಲ್ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಕೆಎಲ್‌ಇ ವಿವಿ ಪ್ರಾಧ್ಯಾಪಕ ಡಾ.ಅವಿನಾಶ ಕವಿ ಉಪನ್ಯಾಸ ನೀಡಿದರು. ಚಿಂತನ ಸಾಂಸ್ಕೃತಿಕ ಬಳಗದ ಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ ಸ್ವಾಗತಿಸಿದರು.
ನಿಡೋಣಿ ಡಾ.ಸಿದ್ಧಲಿಂಗ ಸ್ವಾಮೀಜಿ, ಜಡೆ ಮಹಾಂತಮಠದ ಶ್ರೀಗಳು, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಹಾಗೂ ಬಿಎಲ್ ಡಿಇ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ, ಶಾಸಕ ವಿಠಲ ಕಟಕದೊಂಡ, ವಿ.ಎಸ್. ಪಾಟೀಲ, ಕರ್ನಾಟಕ ಸಾಬೂನು-ಮಾರ್ಜಕ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಕೆ.ಪ್ರಶಾಂತ, ಡಿವೈಎಸ್‌ಪಿ ಬಸವರಾಜ ಯಲಿಗಾರ ಉಪಸ್ಥಿತರಿದ್ದರು.