ವಿಜಯಪುರ ಜಿಲ್ಲೆಯಲ್ಲಿರುವ 130ಕ್ಕೂ ಅಧಿಕ ಪದವಿ ಕಾಲೇಜುಗಳನ್ನು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಿಂದ ಬಾಗಲಕೋಟೆ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿಸುವಂತೆ ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟಿಸಲಾಯಿತು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲೆಯಲ್ಲಿರುವ 130ಕ್ಕೂ ಅಧಿಕ ಪದವಿ ಕಾಲೇಜುಗಳನ್ನು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಿಂದ ಬಾಗಲಕೋಟೆ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿಜಯಪುರ ಜಿಲ್ಲಾ ಘಟಕದ ನೇತೃತ್ವದಲ್ಲಿ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಪ್ರತಿಭಟಿಸಿ ಜಿಲ್ಲಾಡಳಿತ ಕಚೇರಿವರೆಗೂ ರ್‍ಯಾಲಿ ನಡೆಸಿ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ ಮಾತನಾಡಿ, ವಿಜಯಪುರ ಜಿಲ್ಲೆಯ 130ಕ್ಕೂ ಅಧಿಕ ಪದವಿ ಕಾಲೇಜುಗಳು ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿದ್ದು, ವಿವಿಗೆ ಸಂಬಂಧಿಸಿದ ಆಡಳಿತಾತ್ಮಕ ಕಾರ್ಯಗಳು, ಪರೀಕ್ಷಾ ಪ್ರಕ್ರಿಯೆಗಳು, ಮೌಲ್ಯಮಾಪನ, ಅಂಕಪಟ್ಟಿ, ಪದವಿ ಪ್ರಮಾಣಪತ್ರ, ಹೆಸರು ತಿದ್ದುಪಡಿ ಸೇರಿ ವಿವಿಧ ಶೈಕ್ಷಣಿಕ ಸೇವೆಗಳಿಗಾಗಿ ವಿದ್ಯಾರ್ಥಿಗಳು ಬೆಳಗಾವಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ವಿಜಯಪುರದಿಂದ ಬೆಳಗಾವಿಗೆ ಪ್ರಯಾಣ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತಿದ್ದು, ದೂರದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಒಂದು ಕೆಲಸಕ್ಕಾಗಿ ಎರಡ್ಮೂರು ದಿನ ವ್ಯಯಿಸಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುವುದರ ಜೊತೆಗೆ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗುತ್ತಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಗಳು ನಿರಂತರವಾಗಿ ಈ ಸಮಸ್ಯೆ ಎದುರಿಸುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿಜಯಪುರ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳನ್ನು ಭೌಗೋಳಿಕವಾಗಿ ಸಮೀಪದಲ್ಲಿರುವ ಬಾಗಲಕೋಟೆ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ಎಬಿವಿಪಿ ರಾಜ್ಯ ಕಾರ್ಯಸಮಿತಿ ಸದಸ್ಯ ಸಂದೀಪ ಅರಳಗುಂಡಿ ಮಾತನಾಡಿ, ವಿದ್ಯಾರ್ಥಿ ಸ್ನೇಹಿ ಆಡಳಿತ ವ್ಯವಸ್ಥೆ ನಿರ್ಮಾಣವಾಗಬೇಕಾದರೆ ಭೌಗೋಳಿಕ ಅನುಕೂಲತೆ ಮತ್ತು ವಿದ್ಯಾರ್ಥಿಗಳ ಅಗತ್ಯತೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.ಹೆಚ್ಚುವರಿಯಾಗಿ, ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಡುವೆ ಉತ್ತಮ ಸಮನ್ವಯತೆ ನಿರ್ಮಾಣವಾಗಲಿದ್ದು, ಆಡಳಿತಾತ್ಮಕ ಕಾರ್ಯನಿರ್ವಹಣೆಯೂ ಇನ್ನಷ್ಟು ಪರಿಣಾಮಕಾರಿಯಾಗಲಿದೆ. ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರ ತಕ್ಷಣವೇ ವಿಜಯಪುರ ಜಿಲ್ಲೆಯ ಎಲ್ಲಾ ಪದವಿ ಕಾಲೇಜುಗಳನ್ನು ಬಾಗಲಕೋಟೆ ವಿಶ್ವವಿದ್ಯಾಲಯ ವ್ಯಾಪ್ತಿಗೆ ಸೇರಿಸುವ ಕುರಿತು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು. ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಯನ್ನು ಸರ್ಕಾರ ಶೀಘ್ರದಲ್ಲಿ ಈಡೇರಿಸದಿದ್ದರೆ ಹಂತ ಹಂತವಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಣಮಂತ ಹಳ್ಳೂರ, ರಾಜ್ಯ ಕಾನೂನು ವಿದ್ಯಾರ್ಥಿ ಪ್ರಮುಖ ಮಂಜುನಾಥ ಹಳ್ಳಿ, ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಬಾಲಾಜಿ ಬಿರಾದಾರ, ತಾಲೂಕು ಸಂಚಾಲಕ ಸಂಪತ್ತ ಉಪ್ಪಾರ, ಶಿವು ಬಿರಾದಾರ,ದುಂಡಪ್ಪ ನೆಲೋಗಿ, ಕಾರ್ತಿಕ, ಗಂಗಾಧರ, ಪ್ರವೀಣ ಮಾದರ, ಗಜಾನನ, ಲಕ್ಷ್ಮಿ, ಪೂಜಾ, ತ್ರಿವೇಣಿ, ಭಾಗ್ಯಲಕ್ಷ್ಮೀ, ಅನುರಾಧ ಹಾಗೂ ಸಾವಿರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.