ಕಂಪ್ಲಿ: ಇಲ್ಲಿನ ಷಾಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗಳ ಹಿನ್ನೆಲೆ ಪರೀಕ್ಷಾ ಅಧೀಕ್ಷಕರು ಹಾಗೂ ಮೇಲ್ವಿಚಾರಕರ ಸಭೆ ಸೋಮವಾರ ನಡೆಯಿತು.ಪರೀಕ್ಷೆಯನ್ನು ನಕಲುರಹಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸುವ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಯಿತು.ಸಭೆಯಲ್ಲಿ ಕುರುಗೋಡು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಂ. ಸಿದ್ಧಲಿಂಗಮೂರ್ತಿ ಮಾತನಾಡಿ, ಪಟ್ಟಣದ ನಾಲ್ಕು ಸೇರಿದಂತೆ ತಾಲೂಕಿನಲ್ಲಿ ಆರು ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿವೆ. ಕಂಪ್ಲಿಯ ಷಾ. ಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 293 ವಿದ್ಯಾರ್ಥಿಗಳು, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 333 ವಿದ್ಯಾರ್ಥಿಗಳು, ಓಡ್ಸೋ ಜಡೆಮ್ಮ ಗುರುಸಿದ್ದಯ್ಯ ಪ್ರೌಢಶಾಲೆಯ ಕೇಂದ್ರದಲ್ಲಿ 400 ವಿದ್ಯಾರ್ಥಿಗಳು, ವಿಜಯನಗರ ಪ್ರೌಢಶಾಲೆಯ ಕೇಂದ್ರದಲ್ಲಿ 391 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

ಇದೇ ರೀತಿಯಾಗಿ ಎಮ್ಮಿಗನೂರಿನ ಕೆಪಿಎಸ್ ಪರೀಕ್ಷಾ ಕೇಂದ್ರದಲ್ಲಿ 285 ವಿದ್ಯಾರ್ಥಿಗಳು ಹಾಗೂ ಸುಗ್ಗೇನಹಳ್ಳಿ ವಿದ್ಯಾಭಾರತಿ ಪರೀಕ್ಷಾ ಕೇಂದ್ರದಲ್ಲಿ 408 ವಿದ್ಯಾರ್ಥಿಗಳು ಸೇರಿ ಒಟ್ಟಾರೆ 2,110 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ವೆಬ್‌ಕಾಸ್ಟಿಂಗ್ ವ್ಯವಸ್ಥೆಯೊಂದಿಗೆ ಸಿಸಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ಫೋನ್ ಬಳಕೆಗೆ ಅವಕಾಶ ಇರುವುದಿಲ್ಲ. ಪರೀಕ್ಷೆಯನ್ನು ನಕಲು ಮತ್ತು ಯಾವುದೇ ಅಕ್ರಮಗಳಿಗೆ ಅವಕಾಶ ನೀಡದೇ ಕಟ್ಟುನಿಟ್ಟಾಗಿ ನಡೆಸಬೇಕು ಎಂದು ಸೂಚಿಸಿದರು.

ಪರೀಕ್ಷಾರ್ಥಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಜೊತೆಗೆ ವಿಶೇಷ ಚೇತನಾ ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕಾರ್ಯದಲ್ಲಿ ತೊಡಗಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವಲ್ಲಿ ಜಾಗ್ರತೆ ವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಪರೀಕ್ಷಾ ಮುಖ್ಯ ಅಧೀಕ್ಷಕರಾದ ಸುಜಾತ, ಬಸವರಾಜ ಪಾಟೀಲ್, ಗಾಯತ್ರಿ ದೇವಿ, ನಿರ್ಮಲ, ಗಂಗಾಧರ ಜಡಿಮಠ, ನಂದಕಿಶೋರ, ಇಸಿಒಗಳಾದ ಟಿ.ಎಂ. ಬಸವರಾಜ, ಎಂ. ರೇವಣ್ಣ ಇದ್ದರು.