ಕನ್ನಡಪ್ರಭ ವಾರ್ತೆ ಗೋಕರ್ಣ
ಗುರುಕುಲದಲ್ಲಿ ಕಲಿತ ವಿದ್ಯೆ, ಗುಣಗಳನ್ನು ಯಾವ ಕಾಲಕ್ಕೂ ಮರೆಯಬಾರದು, ಒಳ್ಳೆಯ ಸ್ವಭಾವವನ್ನು ಬೆಳೆಸಿಕೊಳ್ಳಿ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ತಿಳಿಸಿದರು.ಸೋಮವಾರ ಅಶೋಕೆಯ ಸಾರ್ವಭೌಮ ಗುರುಕುಲದ ೧೦ ಮತ್ತು ೧೨ನೇ ತರಗತಿಯ ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಶುಭಾಶಂಸನೆಯೀಯುವ ಕಾರ್ಯಕ್ರಮ ಸ್ವಸ್ತ್ಯಯನಮ್ ನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಲ್ಲಿಂದ ಸಮಾಜಕ್ಕೆ ಹೋದಾಗ ನೀವು ಗುರುಕುಲವನ್ನು ಪ್ರತಿನಿಧಿಸುವವರಾಗಿರುತ್ತೀರಿ. ಗುರುಕುಲ ಹಾಗೂ ವಿದ್ಯಾರ್ಥಿಗಳ ನಡುವಿನ ಬಂಧ ಹೆಣ್ಣು ಮಕ್ಕಳ ಮತ್ತವರ ತವರಿನ ಬಾಂಧವ್ಯದಂತೆ. ಅಷ್ಟೇ ಅಲ್ಲದೇ ಹೆಣ್ಣಿಗೆ ಹೇಗೆ ತವರುಮನೆಯ ಸಂಬಂಧ ಎಂದೂ ಕಡಿದುಹೋಗದೊ ಹಾಗೆ ಗುರುಕುಲದ ಜೊತೆ ನಿಮ್ಮ ಬಂಧ ಶಾಶ್ವತವಾಗಿರಲಿ ಎಂದು ಅನುಗ್ರಹಿಸಿದರು.ವಿದ್ಯಾರ್ಥಿಗಳಿಗೆ ಪ್ರಾಚೀನ ಗುರುಕುಲದ ಪದ್ಧತಿಯಂತೆ ಆಚಾರ್ಯೋಪದೇಶವನ್ನು ಮಾಡಿದ ವಿದ್ವಾನ್ ನರಸಿಂಹ ಭಟ್, ವಿದ್ಯೆ ಎಂದರೆ ಅಧ್ಯಾತ್ಮವಿದ್ಯೆ ಮಾತ್ರ. ಅಂತಹ ವಿದ್ಯೆ ಶಾಶ್ವತ ಎಂದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಡಳಿತಾಧಿಕಾರಿ ಡಾ. ಪ್ರಸನ್ನಕುಮಾರ್ ಮಾತನಾಡಿ, ಶ್ರೀಗಳ ಗುರಿ ಆದರ್ಶ ವಿದ್ಯಾಲಯ ಹಾಗೂ ಆದರ್ಶ ಭಾರತ. ಅದನ್ನು ಸಾಕಾರ ಮಾಡುವ ಕಡೆ ನಮ್ಮೆಲ್ಲ ಪ್ರಯತ್ನ ನಿರಂತರವಾಗಿ ಇರಲಿದೆ ಎಂದರು.
ಗುರುಕುಲದ ಆಡಳಿತ ಮಂಡಳಿಯ ಕಾರ್ಯದರ್ಶಿ ಗಣೇಶಿ ಜೋಶಿ ಮಾತನಾಡಿದರು.
ಸಭೆಗೂ ಮೊದಲು ವಿವಿಯ ಶಿವಗುರುಕುಲದ ಪ್ರಾಚಾರ್ಯ ಮಂಜುನಾಥ ಭಟ್ಟರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಮಾತಾ-ಪಿತೃಗಳ ಪಾದಪೂಜೆ ನೆರವೇರಿಸಿದರು. ಸ್ವಸ್ತಿ ಸೂಕ್ತ -ದೀಪಜ್ವಲನದಿಂದ ಸಭೆ ಆರಂಭವಾಗಿತ್ತು. ವಿದ್ವಾನ್ ಲೋಹಿತ್ ಹೆಬ್ಬಾರ್ ಮಕ್ಕಳಿಗೆ ಗುರುಕುಲದ ಪ್ರತಿಜ್ಞೆ ಮಾಡಿಸಿದರು.ಮುಖ್ಯಾಧ್ಯಾಪಕಿ ಸೌಭಾಗ್ಯಾ ಭಟ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮಂಜುನಾಥ ಭಟ್ ನಿರ್ವಹಿಸಿದರು. ಸಭೆಯ ನಂತರ ಗುರುಕುಲದ ಮಕ್ಕಳಿಂದ ಕಳರಿಪಯಟ್ ಪ್ರದರ್ಶನ ನಡೆಯಿತು. ಶುಭಾಶಂಸನೆಯ ಗೀತೆಯೊಂದಿಗೆ ೧೦ ಮತ್ತು ೧೨ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಹಸ್ತಾಕ್ಷರದ ಸವಿ ನೆನಪನ್ನು ವೃಕ್ಷ ಮತ್ತು ಫಲದ ಸಾಂಕೇತಿಕ ಚಿತ್ರದಲ್ಲಿ ಮೂಡಿಸಿದರು. ಈ ವೇಳೆ ವಿದ್ಯಾರ್ಥಿಗಳ ಪಾಲಕರು, ಅಧ್ಯಾಪಕವೃಂದ, ಕ್ಷೇಮಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.