ನರಗುಂದ: ಸಮಾಜದಲ್ಲಿ ಕುಟುಂಬ ನಿರ್ವಹಣೆ ಮಾಡುವ ಮಹಿಳೆ ಕಾನೂನುಗಳ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ನ್ಯಾಯಾಧೀಶರಾದ ಜೀನಪ್ಪ ಚೌಗಲ ತಿಳಿಸಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ತಾಲೂಕು ಕಾನೂನು ಸೇವಾ ಸಮಿತಿ, ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರ ಕಾನೂನು, ಕೌಟುಂಬಿಕ ರಕ್ಷಣೆ, ಬಾಲ್ಯವಿವಾಹ, ಸ್ತ್ರೀಸಮಾನತೆ ಬಗ್ಗೆ ಕಾನೂನುಗಳ ಬಗ್ಗೆ ಅರಿತುಕೊಳ್ಳಬೇಕು. ನೊಂದ ಮಹಿಳೆಯರಿದ್ದಲ್ಲಿ ಉಚಿತ ಕಾನೂನು ಸಲಹೆ ಪಡೆದುಕೊಂಡು ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಲು ತಿಳಿಸಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ವೆಂಕಪ್ಪ ಗಿರಿತಿಮ್ಮಣ್ಣವರ ಮಾತನಾಡಿ, ಈ ವರ್ಷದ ಮಹಿಳಾ ದಿನಾಚರಣೆ ಥೀಮ್ ಪರಸ್ಪರ ಬೆಂಬಲ ಮತ್ತು ಸಹಯೋಗ ಎಂಬುದಾಗಿದೆ. ಹೆಣ್ಣು ಮನೆಯ ನಂದಾದೀಪವಾಗಿ, ತಾಯಿಯಾಗಿ, ಮಗಳಾಗಿ, ಸೊಸೆಯಾಗಿ ಕುಟುಂಬದ ಯಜಮಾನಿಯಾಗಿ ಜೀವಿಸುತ್ತಿರುವಳು ಎಂದರು.ಸಂಪನ್ಮೂಲ ವ್ಯಕ್ತಿ ಮಂಗಳಾ ಪಾಟೀಲ ಮಾತನಾಡಿ, ಭವ್ಯ ಭಾರತದಲ್ಲಿ ಮಹಿಳೆಗೆ ಅವಳದೇ ಆದ ಗೌರವವಿದ್ದು, ಮಹಿಳೆ ಇಳೆಯು ಹೌದು ಹಾಗೂ ಮಳೆಯು ಹೌದು. ಜೀವನದ ಪ್ರತಿ ಹೆಜ್ಜೆಯಲ್ಲಿ ಮಹಿಳೆಯೇ ಶಕ್ತಿಯಾಗಿರುವಳು. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಬೇಕಿರುವುದು ಅನುಕಂಪ ಅಲ್ಲ ಅವಕಾಶ ಎಂದರು.
ಡಾ. ರೇಣುಕಾ ಕೊರವನವರ ಮಾತನಾಡಿ, ಎಚ್‌ಪಿವಿ ಲಸಿಕೆ ಬಗ್ಗೆ ತಿಳಿವಳಿಕೆ ನೀಡಿ 14 ವರ್ಷದ ಕಿಶೋರಿಯರು ಕಡ್ಡಾಯವಾಗಿ ಲಸಿಕೆ ಪಡೆಯುವುದು ಅವಶ್ಯ. ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್‌ನಂಥ ಮಾರಕ ರೋಗಗಳಿಗೆ ಬಲಿಯಾಗುತ್ತಿದ್ದು, ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಅವಶ್ಯಕ ಎಂದರು.ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಹೆಣ್ಣು ಬದುಕಿನ ಕಣ್ಣು. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆ ಅಪಾರ. ಪುರುಷರ ಸಮನಾಗಿ ಬೆಳೆಯುವ ಮಹಿಳೆಯರು ಕೂಡಾ ಇತ್ತೀಚಿನ ದಿನಗಳಲ್ಲಿ ಕಂಡಿದ್ದೇವೆ. ಮಹಿಳೆಯರನ್ನು ಗೌರವಿಸುವ ಕಡೆ ದೇವತೆಗಳು ನೆಲೆಸಿತ್ತಾರೆ ಎಂಬುದು ನಿಜವಾಗಿದೆ ಎಂದರು.ಈ ಸಂದರ್ಭದಲ್ಲಿ ತಾಪಂ ಅಧಿಕಾರಿ ಎಸ್.ಕೆ. ಇನಾಂದಾರ, ಶಿಕ್ಷಣಾಧಿಕಾರಿ ಮುತ್ತಪ್ಪ ಕಂಬಳಿ, ಸಿಪಿಐ ಮಂಜುನಾಥ ನಡುವಿನಮನಿ, ಸರ್ಕಾರಿ ಅಭಿಯೋಜಕ ಹನುಮಂತಪ್ಪ ಅರಳಿ, ನ್ಯಾಯವಾದಿ ಸಂಘದ ಅಧ್ಯಕ್ಷ ಕೆ.ಎಸ್. ಹೂಲಿ, ಮೇಲ್ವಿಚಾರಕಿ ಭಾರತಿ ಕಾಲಚೆಟ್ಟಿ, ಪರಿಮಳ ಹೂಗಾರ, ಜಗದೀಶ ಜ್ಙಾನೋಪಂತ, ಪ್ರಶಾಂತ ಹಳೇಮನಿ, ಉಮೇಶ ಕಳಸದ, ಅಬ್ದುಲ್ ತಹಶೀಲ್ದಾರ, ಮಂಜುನಾಥ ಗುಗ್ಗರಿ, ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರು ಇದ್ದರು.