ಧಾರವಾಡ:
ಪ್ರತ್ಯೇಕ ಮಹಾನಗರ ಪಾಲಿಕೆ ವಿಚಾರವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ಹಿಂದೆ ಬಿಜೆಪಿ ಪಕ್ಷವೇ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಬೇಕೆಂಬ ನಿರ್ಧಾರ ಕೈಗೊಂಡಿತ್ತು. ಬದಲಾದ ಪರಿಸ್ಥಿತಿಯಲ್ಲಿ 16ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಸಂದರ್ಭದಲ್ಲಿ ಅವಳಿ ನಗರಗಳು ಒಟ್ಟಾಗಿ ಉಳಿದರೆ ಜನಸಂಖ್ಯೆ ಆಧಾರದ ಮೇಲೆ ಕೇಂದ್ರ ಸರ್ಕಾರದ ಹೆಚ್ಚಿನ ಅನುದಾನ ದೊರೆತು, ಹೊಸ ಅಭಿವೃದ್ಧಿ ಯೋಜನೆಗಳಿಗೆ ವೇಗ ಸಿಗಬಹುದು ಎಂಬ ಉದ್ದೇಶ ಹೊಂದಲಾಗಿತ್ತು. ಮಹಾನಗರದ ಜನರ ಭಾವನೆ, ನಿರಂತರ ಹೋರಾಟ ಹಾಗೂ ಸಾರ್ವಜನಿಕ ಅಭಿಪ್ರಾಯವನ್ನು ಗೌರವಿಸಿ, ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ನೀಡುವ ನಿಲುವನ್ನು ಬಿಜೆಪಿ ಸ್ಪಷ್ಟವಾಗಿ ಪುನರುಚ್ಚರಿಸಿದೆ. ಈ ಹೋರಾಟವನ್ನು ಕಾಂಗ್ರೆಸ್ ತನ್ನ ರಾಜಕೀಯ ಅಜೆಂಡಾಕ್ಕೆ ಬಳಸಿಕೊಳ್ಳದಂತೆ ಹೋರಾಟಗಾರರು, ವಿಶೇಷವಾಗಿ ಹೋರಾಟ ಸಮಿತಿಯ ನೇತೃತ್ವ ವಹಿಸಿರುವ ಬಿ.ಡಿ ಹಿರೇಮಠ ಎಚ್ಚರಿಕೆ ವಹಿಸಬೇಕು ಎಂದು ಬೆಲ್ಲದ ಹೋರಾಟಗಾರರಿಗೆ ಎಚ್ಚರಿಸಿದ್ದಾರೆ.ಕಾಳಜಿ ಇದ್ದರೆ ಹೋರಾಟ ಮಾಡಿ
ಶಾಸಕ ಅರವಿಂದ ಬೆಲ್ಲದ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿ.ಡಿ. ಹಿರೇಮಠ, ಪ್ರತ್ಯೇಕ ಪಾಲಿಕೆ ಬಗ್ಗೆ ಶಾಸಕ ಅರವಿಂದ ಬೆಲ್ಲದ ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ, ಕೂಡಲೇ ತಮ್ಮ ಪಕ್ಷದ ಮುಖಂಡರೊಂದಿಗೆ ವೇದಿಕೆಗೆ ಬಂದು ಮಸೂದೆಗೆ ಸಹಿ ಹಾಕಲು ಹೋರಾಟ ಮಾಡಬೇಕು. ಅಂದಾಗ ಅವರು ಈ ವಿಷಯದಲ್ಲಿ ಬದ್ಥತೆ ತೋರಿದಂತಾಗುತ್ತದೆ. ಅದನ್ನು ಬಿಟ್ಟು ಬರೀ ಪತ್ರಿಕಾ ಹೇಳಿಕೆ ಬೇಡ ಎಂದರು.