ಧಾರವಾಡ:
ಧಾರವಾಡ ಪ್ರತ್ಯೇಕ ಪಾಲಿಕೆ ಭಾಗ್ಯಕ್ಕಾಗಿ ಕಳೆದ ಹದಿನೈದು ದಿನಗಳಿಂದ ತರಹೇವಾರಿ ರೂಪದ ಹೋರಾಟಗಳು ನಡೆದು, ಅದರ ಫಲವಾಗಿ ಎರಡು ಬಾರಿ ರಾಜ್ಯಪಾಲರ ಭೇಟಿ ನಂತರವೂ ಪ್ರತ್ಯೇಕ ಪಾಲಿಕೆಯ ಮಸೂದೆಗೆ ಮೀನಮೇಷ ಎಣಿಸುತ್ತಿರುವ ಹಿನ್ನೆಲೆಯಲ್ಲಿ ಹೋರಾಟಗಾರರು ಧಾರವಾಡ ಬಂದ್ ಮಾಡಲು ತೀರ್ಮಾನಿಸಿದ್ದಾರೆ.ಏಳು ದಿನಗಳೊಳಗೆ (ಮೇ 29ರೊಳಗೆ) ಮಸೂದೆಗೆ ರಾಜ್ಯಪಾಲರ ಶರಾ ಬೀಳದೇ ಇದ್ದಲ್ಲಿ ಮೇ 30ರಂದು ಧಾರವಾಡ ಬಂದ್‌ಗೆ ತೀರ್ಮಾನಿಸಲಾಗಿದೆ. ಈ ಕುರಿತು ಶುಕ್ರವಾರ ಪ್ರತ್ಯೇಕ ಪಾಲಿಕೆ ಹೋರಾಟ ವೇದಿಕೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೋರಾಟಗಾರ ಬಿ.ಡಿ. ಹಿರೇಮಠ ಹಾಗೂ ಇತರರು, ಇಡೀ ಧಾರವಾಡದ ಜನರು ಪ್ರತ್ಯೇಕ ಪಾಲಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ. ನಿತ್ಯವೂ ಹತ್ತಾರು ಸಂಘಟನೆಗಳು ಹೋರಾಟಕ್ಕೆ ಬಂಬಲ ನೀಡುತ್ತಿವೆ. ಇಷ್ಟಾಗಿಯೂ ತಾಂತ್ರಿಕ ಕಾರಣಗಳಿಂದ ಮಸೂದೆಗೆ ಸಹಿ ಹಾಕುವುದನ್ನು ಮುಂದೂಡುತ್ತಿರುವುದನ್ನು ನಾವು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪಕ್ಷಾತೀತ ಹೋರಾಟ:ಪ್ರತ್ಯೇಕ ಪಾಲಿಕೆಗೆ ವಿರೋಧಿಸಿದ್ದ ಶಾಸಕ ಅರವಿಂದ ಬೆಲ್ಲದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೇ ಹೋರಾಟಗಾರರೊಂದಿಗೆ ರಾಜ್ಯಪಾಲರನ್ನು ಭೇಟಿ ಮಾಡಿ ಮಸೂದೆಗೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ. ಆದರೆ, ಕಾನೂನು ಸಲಹೆ ಪಡೆದು ಸಹಿ ಮಾಡಿ ಸರ್ಕಾರಕ್ಕೆ ಕಳುಹಿಸುವುದಾಗಿ ರಾಜ್ಯಪಾಲರು ತಮಗೆ ತಿಳಿಸಿದ್ದಾರೆ. ವಿರೋಧ ಮಾಡಿದವರೇ ಸಹಿ ಮಾಡಲು ಮನವಿ ಮಾಡಿದರೂ ರಾಜ್ಯಪಾಲರು ಸಹಿ ಮಾಡದೇ ಇರುವುದಕ್ಕೆ ಕಾರಣ ಏನು? ಎಂದು ಹಿರೇಮಠ ಪ್ರಶ್ನಿಸಿದರು.
ಈ ಹೋರಾಟದಲ್ಲಿ ಯಾವುದೇ ರೀತಿಯ ರಾಜಕಾರಣ ನುಸುಳುವುದು ಬೇಡ. ಪಕ್ಷಾತೀತವಾಗಿ ಈ ಹೋರಾಟ ನಡೆಯುತ್ತಿದ್ದು, ಜನರ ಬೆಂಬಲದಿಂದಲೇ ನಾವು ಪ್ರತ್ಯೇಕ ಪಾಲಿಕೆಯ ಹೋರಾಟವನ್ನು ಗೆಲ್ಲಲೇಬೇಕು ಎಂದರು.
ಬಿಜೆಪಿ ಸದಸ್ಯರೇಕಿಲ್ಲ:
ಪ್ರತ್ಯೇಕ ಪಾಲಿಕೆ ವಿರೋಧ ಮಾಡಿದ್ದು ನಮ್ಮ ಕೊರಳಿಗೆ ಸುತ್ತುಕೊಳ್ಳಲಿದೆ ಎಂದರಿತು ಬಿಜೆಪಿ ಮುಖಂಡರು, ಅನಿವಾರ್ಯವಾಗಿ ರಾಜ್ಯಪಾಲರ ಭೇಟಿ ಮಾಡಿಸಿದ್ದಾರೆ. ರಾಜ್ಯಪಾಲರಿಗೆ ಬಾಯಿ ಮಾತಿನ ಮೂಲಕ ಮಸೂದೆಗೆ ಸಹಿ ಹಾಕುವಂತೆ ಹೇಳಿದ್ದಾರೆಯೇ ಹೊರತು ಪತ್ರದ ಮೂಲಕ ಪ್ರತ್ಯೇಕ ಪಾಲಿಕೆ ಪರವಾಗಿ ಅವರ ಸ್ಪಷ್ಟ ನಿಲುವು ಇನ್ನೂ ತಿಳಿಸಿಲ್ಲ. ಅಲ್ಲದೇ, ಬಿಜೆಪಿ ಮುಖಂಡರ ಭಯಕ್ಕೆ ಹೋರಾಟಕ್ಕೆ ಈ ವರೆಗೂ ಬಿಜೆಪಿ ಪಾಲಿಕೆ ಸದಸ್ಯರು ಬರದೇ ಇರುವುದು ಹೋರಾಟಕ್ಕೆ ವಿರೋಧ ಇರುವುದನ್ನು ತೋರುತ್ತದೆ ಎಂದು ಹೋರಾಟಗಾರರು ಬಿಜೆಪಿ ಮುಖಂಡರನ್ನು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡರು.ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ಗುರುರಾಜ ಹುಣಸೀಮರದ, ದಾನಪ್ಪ ಕಬ್ಬೇರ, ಮೋಹನ ಲಿಂಬಿಕಾಯಿ, ಲಕ್ಷ್ಮಣ ಬಕ್ಕಾಯಿ, ರಾಜಶೇಖರ ಕಮತಿ, ಎಂ.ಎಂ. ಬೇಪಾರಿ, ನಾಗರಾಜ ಪಟ್ಟಣಶೆಟ್ಟಿ, ಅರವಿಂದ ಏಗನಗೌಡರ ಇದ್ದರು. ಶುಕ್ರವಾರ ವೆಂಕಟೇಶ ಮಾಚಕನೂರ, ಶಿವಶಂಕರ ಹಂಪಣ್ಣವರ, ಕವಿತಾ ಕಬ್ಬೇರ, ದೀಪಾ ನೀರಲಕಟ್ಟಿ, ವಿಠ್ಠಲ ಕಮ್ಮಾರ ಉಪವಾಸ ಸತ್ಯಾಗ್ರಹ ಮಾಡಿದರು. ಇದೇ ಸಂದರ್ಭದಲ್ಲಿ ಆಟೋ ಚಾಲಕರು,ಮಾಲೀಕರ ಸಂಘ ಹಾಗೂ ಇತರರು ಬೆಂಬಲ ನೀಡಿದರು.