ಸೋಮರಡ್ಡಿ ಅಳವಂಡಿ ಕೊಪ್ಪಳ
ಕಡು ಬಡತನದಲ್ಲಿ ಬೆಂದು ಜೋಪಡಿಯಲ್ಲಿ ವಾಸಿಸುವ ಅಲೆಮಾರಿ ಜನಾಂಗದ ವಿದ್ಯಾರ್ಥಿನಿಯೋರ್ವಳು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಪಾಸಾಗಿದ್ದರೂ ಅರ್ಜಿ ಸಲ್ಲಿಸುವಾಗ ಮಾಡಿದ ಸಣ್ಣ ತಾಂತ್ರಿಕ ತಪ್ಪಿನಿಂದಾಗಿ ಇದೀಗ ಶಾಲೆಗೆ ಪ್ರವೇಶ ಪಡೆಯಲು ಸಾಧ್ಯವಾಗದೇ ಪರದಾಡುತ್ತಿದ್ದಾಳೆ.ಅರ್ಜಿ ಸಲ್ಲಿಸುವಾಗ ಯಾವ ಮೊರಾರ್ಜಿ ಶಾಲೆ ಎಂದು ನಮೂದಿಸಿರಲಿಲ್ಲ. ಅದೇ ಅವಳು ಮಾಡಿದ ತಪ್ಪು, ಇವರ ಪಾಲಕರು ಸೇರಿದಂತೆ ಮನೆಯಲ್ಲಿ ಎಲ್ಲರೂ ಅನಕ್ಷರಸ್ಥರು. ಇವಳು ತಾನಾದರೂ ಕಲಿತು ವಿದ್ಯಾವಂತಳಾಗಬೇಕೆಂದು ಓದಿ ಐದನೇ ತರಗತಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದಾಳೆ. ಮೊರಾರ್ಜಿ ಪ್ರವೇಶ ಪರೀಕ್ಷೆಯಲ್ಲೂ ಅತ್ಯುತ್ತಮ (42) ಪಡೆದಿದ್ದಾಳೆ. ಅವಳಿಗಿಂತ ಕಡಿಮೆ (39) ಅಂಕ ಪಡೆದ ಅದೇ ಸಮುದಾಯದ ವಿದ್ಯಾರ್ಥಿನಿಗೆ ಪ್ರವೇಶ ಸಿಕ್ಕಿದೆ. ಇವಳಿಗೆ ಇಲ್ಲ. ಆದರೆ ಮಾಡಿದ ಸಣ್ಣ ತಪ್ಪಿಗೆ ಈಗ ಭವಿಷ್ಯಕ್ಕೆ ಪೆಟ್ಟು ಬೀಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದು ತಿಳಿದು ಮಾಡಿದ ತಪ್ಪಲ್ಲ, ಅರಿವಿನ ಕೊರತೆಯಿಂದ ಆದ ತಪ್ಪು. ಹೇಗಾದರೂ ಮಾಡಿ ನನಗೆ ಪ್ರವೇಶ ಕಲ್ಪಿಸಿ ಎಂದು ಗೋಗರೆಯುತ್ತಿದ್ದಾಳೆ.
ಕುಷ್ಟಗಿ ಪಟ್ಟಣದ ಹೊರ ವಲಯದಲ್ಲಿ ಖಾಲಿ ಇರುವ ಯಾರದೋ ಜಾಗೆಯಲ್ಲಿ ಗಾಳಿ ಬಂದರೆ ಹಾರಿ ಹೋಗುವಂತಹ ಜೋಪಡಿ ಹಾಕಿಕೊಂಡು ಬದುಕುವ ಅಲೆಮಾರಿ ಜನಾಂಗದ ಶಂಕ್ರಮ್ಮ,ವೀರೇಶಪ್ಪ ಚನ್ನದಾಸರ ಎನ್ನುವ ದಂಪತಿಗಳ ಮಗಳು ಈರಮ್ಮನ ಗೋಳು ಇದು.ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಸರ್ಕಾರಿ ಶಾಲೆಯಲ್ಲಿ ಐದನೇ ತರಗತಿ ಅತ್ಯುತ್ತಮ ಅಂಕ ಪಡೆದು ತೇರ್ಗಡೆಯಾಗಿದ್ದಾಳೆ. ಮೊರಾರ್ಜಿ ವಸತಿ ಶಾಲೆಗೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 42 ಅಂಕ ಪಡೆದಿದ್ದಾಳೆ. ಅರ್ಜಿ ಸಲ್ಲಿಸುವಾರ ಯಾವ ಮೊರಾರ್ಜಿ ಶಾಲೆ ಬೇಕೆಂದು ನಮೂದಿಸದೇ ಇದ್ದುದರಿಂದ ಸೀಟ್‌ನಿಂದ ವಂಚಿತಳಾಗಿದ್ದಾಳೆ.
ಅಪ್ಪ,ಅಮ್ಮ ಇಬ್ಬರೂ ಅನಕ್ಷರಸ್ಥರಾಗಿದ್ದಾರೆ. ಇವರ ಸಹೋದರರು ಯಾರೂ ಓದಿಲ್ಲ. ಹೀಗಾಗಿ ಈ ಪುಟ್ಟ ಬಾಲಕಿಯೇ ನೆಟ್ ಸೆಂಟರ್‌ಗೆ ಹೋಗಿ ಅರ್ಜಿ ಹಾಕಿದ್ದಾಳೆ. ಆಗ ಗೊತ್ತಾಗದೆ ಮಾಡಿರುವ ತಪ್ಪಿನಿಂದ ಅರ್ಹತೆ ಇದ್ದರೂ ಅವಕಾಶ ಸಿಗದಂತಾಗಿದೆ. ಆದರೆ, ಬಾಲಕಿ ಈರಮ್ಮನಿಗೆ ಓದುವ ಅದಮ್ಯ ಬಯಕೆ ಇದೆ. ಹೇಗಾದರೂ ಮಾಡಿ ನನ್ನನ್ನು ಮೊರಾರ್ಜಿ ಶಾಲೆಗೆ ಸೇರಿಸಿ ಎಂದು ಬೇಡಿಕೊಳ್ಳುತ್ತಿದ್ದಾಳೆ.
ಮೊರಾರ್ಜಿ ವಸತಿ ಶಾಲೆಯಾದರೆ ಅಲ್ಲಿಯೇ ಊಟ, ಇತರೆ ಸೌಲಭ್ಯ ಹಾಗೂ ಶುಲ್ಕವಿಲ್ಲದೆ ಶಾಲೆಯ ಪ್ರವೇಶ ದೊರೆಯುತ್ತದೆ. ಆದರೆ, ನಮ್ಮ ಅಪ್ಪ -ಅಮ್ಮ ಇಬ್ಬರು ಅಲೆಮಾರಿಗಳು, ಊರೂರು ಅಲೆಯುತ್ತಾರೆ. ಈಗ ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ಜೋಪಡಿ ಹಾಕಿಕೊಡು ಜೀವನ ಮಾಡುತ್ತಿದ್ದೇವೆ. ಹೀಗಾಗಿ, ನನಗೊಂದು ಮೊರಾರ್ಜಿ ಶಾಲೆಯಲ್ಲಿ ಸೀಟ್ ಕೊಡಿಸಿದರೆ ನಾನಾದರೂ ಓದಿ, ನಮ್ಮಪ್ಪ, ಅಮ್ಮನನ್ನು ಕಷ್ಟದಿಂದ ದೂರ ಮಾಡುತ್ತೇನೆ. ಇಲ್ಲದಿದ್ದರೆ ನಾನು ಓದು ನಿಲ್ಲಿಸಬೇಕಾಗುತ್ತದೆ ಎಂದು ಅಳಲು ತೋಡಿಕೊಳ್ಳುವ ಈರಮ್ಮ ಅವರಿವರ ಸಹಾಯ ಕೇಳುತ್ತಿದ್ದಾಳೆ.
ಎಸ್ ಎಫ್ ಐ ಸಂಘಟನೆ ಮಾಜಿ ರಾಜ್ಯಾಧ್ಯಕ್ಷ ಅಮರೇಶ ಕಡಗದ ಈ ಬಾಲಕಿಗೆ ಮೊರಾರ್ಜಿ ಶಾಲೆಯಲ್ಲಿ ಪ್ರವೇಶ ಕೊಡಿಸಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಯಾರಾದರೂ ಸಹಾಯ ಮಾಡಿ ಎಂದು ಕೇಳುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ನಿರ್ಧರಿಸಿದ್ದಾರೆ.ನಾವು ಊರುರು ಅಲೆಯುತ್ತೇವೆ, ನಮ್ಮ ಮಗಳಾದರೂ ಮೊರಾರ್ಜಿ ಶಾಲೆಯಲ್ಲಿ ಓದಲಿ ಎಂದರೆ ಅದು ಸಿಗದಂತಾಗಿದೆ. ಮಾರ್ಕ್ ತಗಂಡ್ರೂ ಆಯ್ಕೆಯಾಗಿಲ್ಲವಂತೆ ನೋಡ್ರಿ.ಇರ್ಲಿ ಬಿಡಿ, ನಮ್ಮ ಜೊತೆ ಊರೂರು ಅಲೆಯಲಿ, ನಮ್ಮ ಹಣೆ ಬರಹ ಇಷ್ಟೇ ಎಂದು ಬಾಲಕಿಯ ತಾಯಿ ಶಂಕ್ರಮ್ಮ ಹೇಳಿದ್ದಾರೆ.
ಬಾಲಕಿ ಪ್ರತಿಭಾವಂತೆ ಆಗಿದ್ದಾಳೆ. ಅತ್ಯುತ್ತಮ ಮಾರ್ಕ್ಸ ಪಡೆದಿದ್ದಾಳೆ. ಆದರೂ ಆಯ್ಕೆಯಾಗಿಲ್ಲ. ವಿಶೇಷ ಪ್ರಕರಣವೆಂದು ಪರಿಗಣಿಸಿ ಬಾಲಕಿಗೆ ಮೊರಾರ್ಜಿ ಶಾಲೆಯಲ್ಲಿ ಅವಕಾಶ ನೀಡಿದರೇ ಅನುಕೂಲವಾಗುತ್ತದೆ ಎಂದು ಎಸ್ಎಫ್ ಐ ಮಾಜಿ ರಾಜ್ಯಾಧ್ಯಕ್ಷ ಅಮರೇಶ ಕಡಗದ ತಿಳಿಸಿದ್ದಾರೆ.