ಧಾರವಾಡ:

ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆರಂಭವಾಗಿದ್ದು, ಜೂನ್ ಮೊದಲ ವಾರದಲ್ಲಿ ಮುಂಗಾರು ಹಂಗಾಮು ಶುರುವಾಗಲಿದೆ. ಮುಂಗಾರು ಬಿತ್ತನೆಗೆ ಅಗತ್ಯವಿರುವ ಬೀಜ, ರಸಗೊಬ್ಬರಗಳ ದಾಸ್ತಾನಿದ್ದು, ಸಕಾಲಕ್ಕೆ ಬೀಜ, ರಸಗೊಬ್ಬರ ತಲುಪುವಂತೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮವಹಿಸಲು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಸೂಚಿಸಿದರು.

ಕಾನೂನು ಮೀರಿ ಹೆಚ್ಚಿನ ದರಕ್ಕೆ ಬೀಜ, ಗೊಬ್ಬರ ಮಾರಾಟ, ಅನಧಿಕೃತ ದಾಸ್ತಾನು, ಕೃತಕ ಅಭಾವ ಸೃಷ್ಟಿಸುವ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಚಕ್ಷಣ ದಳಗಳನ್ನು ರಚಿಸಿ, ನಿರಂತರವಾಗಿ ವರದಿ ಸಲ್ಲಿಸುವಂತೆ ತಿಳಿಸಿದರು.

ಕೃಷಿ ಇಲಾಖೆ ಅಧಿಕಾರಿಗಳು, ರಸಗೊಬ್ಬರ ಮಾರಾಟಗಾರರು ಮತ್ತು ರೈತ ಪ್ರಮುಖರೊಂದಿಗೆ ಶುಕ್ರವಾರ ವಿಡಿಯೋ ಸಂವಾದ ಸಭೆ ಜರುಗಿಸಿದ ಜಿಲ್ಲಾಧಿಕಾರಿ, ಮಾರಾಟ ಕೇಂದ್ರಗಳಿಗೆ ನಿರಂತರ ಭೇಟಿ ಮೂಲಕ ಉತ್ತಮ ಗುಣಮಟ್ಟದ ಮತ್ತು ಇಲಾಖೆ ಶಿಫಾರಸು ಮಾಡಿರುವ ಬೀಜ, ರಸಗೊಬ್ಬರ ರೈತರಿಗೆ ಲಭಿಸುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ತಕ್ಷಣ ಪರಿಶೀಲಿಸಿ, ಸೂಕ್ತ ಕ್ರಮವಹಿಸಬೇಕು ಎಂದರು.

ಪರವಾನಗಿ ರದ್ದು:


ಅಂಗಡಿಗಳ ಮುಂದೆ ರಸಗೊಬ್ಬರಗಳ ದಾಸ್ತಾನು ವಿವರ ಮತ್ತು ದರಗಳ ಕುರಿತು ಸೂಚನಾ ಫಲಕ ಅಳವಡಿಸದಿದ್ದರೆ ಮತ್ತು ಸಾರ್ವಜನಿಕರಿಂದ ರಸಗೊಬ್ಬರ ಮಾರಾಟ ಕೇಂದ್ರಗಳ ಬಗ್ಗೆ ಹಾಗೂ ಬೀಜ ವಿತರಣಾ ಕೇಂದ್ರಗಳ ಬಗ್ಗೆ ದೂರು ಬಂದಲ್ಲಿ ಅಂತಹ ಅಂಗಡಿಗಳ ಮಾರಾಟ ಪರವಾನಿ ಅಮಾನತು ಮಾಡಿ, ತಕ್ಷಣ ಆದೇಶಿಸಲಾಗುವುದು ಎಂದು ಎಚ್ಚರಿಸಿದ ಅವರು, ರಾಜ್ಯ ಸರ್ಕಾರವು ಕಡ್ಡಾಯವಾಗಿ ಫ್ರೂಟ್ ಗುರುತಿನ ಸಂಖ್ಯೆ ಹೊಂದಿರುವ ರೈತರಿಗೆ ಮಾತ್ರ ಯೂರಿಯಾ ಗೊಬ್ಬರ ವಿತರಿಸಲು ನಿರ್ದೇಶಿಸಿದೆ. ಎಲ್ಲ ರೈತರಿಗೂ ಯೂರಿಯಾ ರಸಗೊಬ್ಬರ ಬೇಡಿಕೆ ಪೂರೈಸುವ ಉದ್ದೇಶದಿಂದ ಸರ್ಕಾರವು ಪ್ರತಿ ರೈತರಿಗೆ ಅವರ ಫ್ರೂಟ್ ತಂತ್ರಾಂಶದಲ್ಲಿ ದಾಖಲಿಸಿರುವ ಭೂವಿಸ್ತೀರ್ಣಕ್ಕೆ ಅನುಗುಣವಾಗಿ ಪ್ರತಿ ಎಕರೆಗೆ ಒಂದು ಚೀಲದಂತೆ ಯೂರಿಯಾ ವಿತರಿಸಲು ಸೂಚಿಸಿದೆ ಎಂದರು.

ವಿಡಿಯೋ ಸಂವಾದದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಸ್ವಾಗತಿಸಿ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಗುರಿ, ರಸಗೊಬ್ಬರ, ಬೀಜ, ದಾಸ್ತಾನು ಮತ್ತು ಮಾರಾಟದ ಬಗ್ಗೆ ವಿವರಿಸಿದರು.

ವಿಡಿಯೋ ಸಂವಾದದಲ್ಲಿ ಕೃಷಿ ಸಹಾಯಕ ನಿರ್ದೇಶಕರು, ರೈತರಾದ ಹುಬ್ಬಳ್ಳಿಯ ಸುಭಾಷ ಬೂದಿಹಾಳ, ನವಲಗುಂದ ಸೋಮಣ್ಣ ಬಳಿಗೇರ, ಧಾರವಾಡ ಕಮಲಾಪೂರದ ಸಿದ್ದಣ್ಣ ಸಪೂರಿ, ಧಾರವಾಡ ಹಜರತ್‍ಅಲಿ, ದೇವರಹುಬ್ಬಳ್ಳಿ ಸುರೇಶಗೌಡ ಪಾಟೀಲ, ನಿಗದಿಯ ಮಲ್ಲನಗೌಡ ಪಾಟೀಲ, ಕುಂದಗೋಳದ ರಾಮಪ್ಪ ಗಂಗಾಯಿ, ಪ್ರದೀಪ ಹಾದಿಮನಿ, ಮಾಲತೇಶ ಇದ್ದರು. 7 ಕೇಂದ್ರಗಳ ಪರವಾನಗಿ ರದ್ದು..ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ರಸಗೊಬ್ಬರ ಹಾಗೂ ಬೀಜ ಮಾರಾಟವಾಗದಂತೆ ಹಾಗೂ ದಾಸ್ತಾನು ಮತ್ತು ಮಾರಾಟದಲ್ಲಿ ಸರ್ಕಾರದ ನಿಯಮಾವಳಿ ಪಾಲಿಸುತ್ತಿರುವ ಬಗ್ಗೆ ಪರಿಶೀಲಿಸಲು ಕೃಷಿ ವಿಚಕ್ಷಣ ದಳದ ಸದಸ್ಯರು ಕಾರ್ಯೋನ್ಮುಖವಾಗಿದ್ದಾರ. ಈಗಾಗಲೇ 539 ಭೇಟಿ ನೀಡಿದ್ದು, ನಿಯಮ ಮೀರಿದ 126 ಕೇಂದ್ರಗಳಿಗೆ ರಸಗೊಬ್ಬರ ಮಾರಾಟ ಮಾಡದಂತೆ ನೋಟಿಸ್ ನೀಡಲಾಗಿದೆ. 93 ಮಾರಾಟ ಕೇಂದ್ರಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಏಳು ಮಾರಾಟ ಕೇಂದ್ರಗಳ ಪರವಾನಗಿ ರದ್ದುಪಡಿಸಲಾಗಿದೆ.

ಅಗತ್ಯ ವ್ಯವಸ್ಥೆ ಇದೆ ಗೊಂದಲ ಬೇಡ...

ಮಧ್ಯಪ್ರಾಚ್ಯ ಯುದ್ಧದ ಕಾರಣಕ್ಕೆ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಬೇಡಿಕೆ ಪ್ರಮಾಣದಲ್ಲಿ ರಸಗೊಬ್ಬರಗಳ ಪೂರೈಕೆ ವಿಳಂಬವಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಹಂಗಾಮಿಗೆ ಬಿತ್ತನೆಯಾಗುವ ಪ್ರದೇಶಕ್ಕೆ ಅಗತ್ಯವಿರುವಷ್ಟು ವಿವಿಧ ಬೀಜ ಮತ್ತು ರಸಗೊಬ್ಬರಗಳು ದಾಸ್ತಾನಿದೆ. ರೈತರು ಗೊಂದಲಗಳಿಗೆ ಒಳಗಾಗದೇ ತಮ್ಮ ಕೃಷಿ ಭೂಮಿ ಇರುವ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಿಂದ ನಿಗದಿಪಡಿಸಿರುವ ಪ್ರಮಾಣದಲ್ಲಿ ಯೂರಿಯಾ ಪಡೆದುಕೊಳ್ಳಬಹುದು.

ಸ್ನೇಹಲ್‌ ಆರ್‌., ಜಿಲ್ಲಾಧಿಕಾರಿ