ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಆರೋಪ

ಕನ್ನಡಪ್ರಭ ವಾರ್ತೆ ಕೋಲಾರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಸಿಎಂನಿಂದ ಸಚಿವರು, ಶಾಸಕರ ತನಕ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ನಡೆದ ಮುಡಾ ಹಗರಣದಿಂದ ಹಿಡಿದು ಡಿ.ಕೆ.ಶಿವಕುಮಾರ್ ಸಿಎಂಯಾಗುತ್ತಲೇ ಕೈಗೆತ್ತಿಕೊಂಡ ಬಿಡದಿ ಟೌನ್‌ಶಿಪ್‌ವರೆಗಿನ ನಿದರ್ಶನ ಕೊಡಬಹುದು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದ್ದಾರೆ.

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಕಳಂಕ ಹೊತ್ತಿರುವ ಸಚಿವರಾದ ಬಿ.ನಾಗೇಂದ್ರ, ಸಂತೋಷ್ ಲಾಡ್‌ರನ್ನು ಸಂಪುಟದಿಂದ ಕೈಬಿಡಬೇಕು, ಸಿಎಂ ಡಿ.ಕೆ.ಶಿವಕುಮಾರ್ ಇವರನ್ನು ಸಂಪುಟದಿಂದ ಕೈ ಬಿಡುವ ತನಕ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಕೋಟ್ಯಂತರ ರುಪಾಯಿ ಹಗರಣ ನಡೆಸಿದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ, ಡಿಕೆಶಿ ಸಂಪುಟ ರಚನೆ, ವಿಸ್ತರಣೆ ಸಂದರ್ಭದಲ್ಲಿ ಹೈಕಮಾಂಡ್ ನಾಯಕರಿಗೆ ‘ಹಣ’ಕೊಟ್ಟವರಿಗೆ ಮಣೆ ಹಾಕಲಾಗಿದೆ. ರಾಜ್ಯದ ದಲಿತರು, ಬಡವರು, ಕೂಲಿಕಾರ್ಮಿಕರ ಹಣ ಲೂಟಿ ಮಾಡಿದವರಿಗೂ ಮಂತ್ರಿಗಿರಿ ನೀಡಿದೆ, ಇದರ ವಿರುದ್ಧ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಿದೆ, ಬರುವ ಸೋಮವಾರದಿಂದ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.


ವಾಲ್ಮೀಕಿ ನಿಗಮದಲ್ಲಿ ೧೮೭ ಕೋಟಿ ಅಕ್ರಮ ನಡೆದಿದ್ದು, ಆಗಿನ ಸಿಎಂಯಾಗಿದ್ದ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ೮೯ ಕೋಟಿ ದುರ್ಬಳಕೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ನಿಗಮದಿಂದ ಬಡವರಿಗೆ ಸೇರಬೇಕಾದ ಹಣವನ್ನು ತೆಲಂಗಾಣಕ್ಕೆ ರವಾನಿಸಿ ಬೇನಾಮಿ ಅಕೌಂಟ್‌ಗಳಿಗೆ ಹಾಕಿ ದುರುಪಯೋಗಪಡಿಸಿಕೊಳ್ಳಲಾಗಿತ್ತು. ಇದಕ್ಕೆ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ನೇರಹೊಣೆಯಾಗಿದ್ದು, ಇವರು ಈಡಿ ತನಿಖೆಗೆ ಒಳಪಟ್ಟು ಜೈಲಿಗೂ ಹೋಗಿಬಂದಿದ್ದಾರೆ. ಇಂತಹ ಕಳಂಕಿತ ವ್ಯಕ್ತಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿದರು.

ಕಾರ್ಮಿಕ ಸಚಿವರಾಗಿದ್ದ ಸಂತೋಷ್ ಲಾಡ್‌ರ ಇಲಾಖೆಯಲ್ಲಿ ಕಾರ್ಮಿಕರಿಗೆ ವಿತರಿಸುವ ಕಿಟ್‌ಗಳ ಖರೀದಿಯಲ್ಲಿ ಭಾರಿ ಅಕ್ರಮ ನಡೆಸಿದ್ದಾರೆ. ೫೦೦ ರು. ಮೌಲ್ಯದ ಕಿಟ್‌ಗಳನ್ನು ೨ ಸಾವಿರ ರು.ಗೆ ಖರೀದಿ ಮಾಡುವ ಮೂಲಕ ಭಾರಿ ಕಿಕ್‌ಬ್ಯಾಕ್ ಪಡೆದುಕೊಂಡಿದ್ದಾರೆ. ಇಂತಹ ಭ್ರಷ್ಟ ಸಚಿವರನ್ನು ಕೈಬಿಡುವ ತನಕ ಹೋರಾಟ ನಿಲ್ಲದು ಎಂದು ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.

ಮಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಮಾತನಾಡಿ, ಹೈಕಮಾಂಡ್‌ಗೆ ಕಪ್ಪಕಾಣಿಕೆ ಕೊಟ್ಟವರಿಗೆ ಮಂತ್ರಿಗಿರಿ ನೀಡಲಾಗಿದೆ. ಸಚಿವ ಬಿ.ನಾಗೇಂದ್ರ, ಸಂತೋಷ್ ಲಾಡ್ ಬಡವರ ಹಣಕ್ಕೆ ಕತ್ತರಿ ಹಾಕಿದ್ದಾರೆ. ಇವರನ್ನು ಸಂಪುಟದಿಂದ ಕೈಬಿಡುವ ತನಕ ಹೋರಾಟ ನಿಲ್ಲದು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಭ್ರಷ್ಟಾಚಾರದ ಕಳಂಕ ಹೊತ್ತ ಸಚಿವರನ್ನು ಸಂಪುಟದಿಂದ ಕೈಬಿಡಲು ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುವ ಅನಿರ್ದಿಷ್ಟ ಧರಣಿಯಲ್ಲಿ ಮಾಜಿ ಸಂಸದ, ಶಾಸಕರು, ಪಕ್ಷದ ಜಿಲ್ಲಾ ಪ್ರಮುಖರು ಭಾಗಿಯಾಗಲಿದ್ದಾರೆ. ಹಣ ಪಡೆದು ಮಂತ್ರಿಗಿರಿ ನೀಡಲಾಗಿದೆ. ಕಳಂಕಿತರನ್ನು ಕೈಬಿಡುವವರೆಗೆ ಹೋರಾಟ ನಿಲ್ಲದು ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷರಾದ ಬೆಗ್ಲಿ ಸೂರ್ಯಪ್ರಕಾಶ್, ವಿಜಯ್‌ಕುಮಾರ್, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಬಿ.ವಿ.ಮಹೇಶ್, ಅಪ್ಪಿನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ಬಾಲಾಜಿ, ತಿಮ್ಮರಾಯಪ್ಪ, ಸುರೇಶ್, ಶ್ರೀನಿವಾಸ್, ರಾಜೇಶ್‌ಸಿಂಗ್, .ಡಿ.ರಾಮಚಂದ್ರ, ಕೃಷ್ಣಮೂರ್ತಿ, ಮಹಿಳಾ ಮೋರ್ಚಾದ ಅರುಣಮ್ಮ, ಪದ್ಮಾ, ಮಮತಾ ಇದ್ದರು.