ಕಾಂಗ್ರೆಸ್ ಈಗಲೇ ಸೋಲೊಪ್ಪಿಕೊಂಡಿದೆ: ಸುನಿಲ್ ಕುಮಾರ್

| Published : Apr 04 2024, 01:02 AM IST

ಕಾಂಗ್ರೆಸ್ ಈಗಲೇ ಸೋಲೊಪ್ಪಿಕೊಂಡಿದೆ: ಸುನಿಲ್ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಚುನಾವಣಾ ಅಖಾಡಕ್ಕೆ ಇಳಿದಿದೆ. ಚೆನ್ನಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋ ಪ್ರಚಾರಕ್ಕೆ ಕಾವು ನೀಡಿದ್ದಾರೆ. ಏ.10-11ರಂದು ರಾಜ್ಯದ 58 ಸಾವಿರ ಬೂತ್‌ನಲ್ಲಿ ಕಾರ್ಯಕರ್ತರ ಸಭೆ ನಡೆಯುತ್ತದೆ ಎಂದು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಈ ಚುನಾವಣೆಯಲ್ಲಿ ಕಾಂಗ್ರೆಸ್ ಪರೋಕ್ಷವಾಗಿ ಸೋಲನ್ನು ಒಪ್ಪಿಕೊಂಡಿದೆ. ಕರ್ನಾಟಕದಲ್ಲಿ ನೆಲೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಅವರು ವರುಣಾ ಕ್ಷೇತ್ರದಲ್ಲಿ ನನ್ನ ಅಧಿಕಾರ ಹೋಗುತ್ತದೆ, ಸ್ಥಾನಕ್ಕೆ ಕುತ್ತುಬರುತ್ತದೆ ಎಂದು ಹತಾಶಾಭಾವ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಸ್ಥಾನದ ಅಭದ್ರತೆಗೆ ಕಾರಣ ಡಿ.ಕೆ. ಶಿವಕುಮಾರಾ? ಹೈಕಮಾಂಡ್ ಮೇಲೆ ನಿಮಗೆ ಭಯ ಇದೆಯೋ? ಅಸಮಾಧಾನಿತ ಶಾಸಕರ ಭಯ ನಿಮಗೆ ಇದೆಯೋ? ಲೋಕಸಭಾ ಚುನಾವಣೆಯ ನಂತರ ನನ್ನ ಸ್ಥಾನ ಇರೋದಿಲ್ಲ ಎಂಬ ಮಾತನ್ನು ಯಾಕೆ ಆಡಿದಿರಿ? ಚುನಾವಣೆ ನಂತರ ನಿವೃತ್ತಿಯನ್ನು ಘೋಷಣೆ ಮಾಡಿದ್ದು ಯಾಕೆ? ಈ ಎಲ್ಲ ಪ್ರಶ್ನೆಗಳಿಗೆ ಜನತೆಗೆ ಉತ್ತರ ನೀಡಿ ಎಂದು ಅವರು ಒತ್ತಾಯಿಸಿದರು.

* ಬಿಜೆಪಿ ಅಖಾಡಕ್ಕಿಳಿದಿದೆ

ರಾಜ್ಯದಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಚುನಾವಣಾ ಅಖಾಡಕ್ಕೆ ಇಳಿದಿದೆ. ಚೆನ್ನಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋ ಪ್ರಚಾರಕ್ಕೆ ಕಾವು ನೀಡಿದ್ದಾರೆ. ಏ.10-11ರಂದು ರಾಜ್ಯದ 58 ಸಾವಿರ ಬೂತ್‌ನಲ್ಲಿ ಕಾರ್ಯಕರ್ತರ ಸಭೆ ನಡೆಯುತ್ತದೆ. ಸಣ್ಣಸಣ್ಣ ಸಭೆಗಳನ್ನು ಮಾಡಿ ಪ್ರಚಾರ ಮಾಡುತ್ತೇವೆ. ಮನೆಮನೆ ಪ್ರಚಾರಕ್ಕೆ ವೇಗ ಕೊಡುತ್ತಿದ್ದೇವೆ. ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದವರು ಹೇಳಿದರು.

* ಆಂತರಿಕ ವ್ಯವಸ್ಥೆ ಇದೆ

ಅಸಮಾಧಾನಿತರನ್ನು ಶಮನ ಮಾಡಲು ನಮ್ಮ ಪಕ್ಷದಲ್ಲಿ ಆಂತರಿಕ ವ್ಯವಸ್ಥೆ ಇದೆ. ಕೊನೆಯ ಘಳಿಗೆ ತನಕ ಕೂಡ ಮಾತುಕತೆ ಮುಂದುವರಿಸುತ್ತೇವೆ. ಈಶ್ವರಪ್ಪನವರ ಸದ್ಯದ ನಿಲುವು ಏನು ಎಂದು ನನಗೆ ಗೊತ್ತಿಲ್ಲ. ಅವರ ಅಸಮಾಧಾನ ಸರಿ ಮಾಡುವ ಕೆಲಸ ಪಕ್ಷದೊಳಗೆ ನಡೆಯುತ್ತಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.