ಸಮಸ್ಯೆ ಪರಿಹಾರ, ಜಿಲ್ಲೆ ಅಭಿವೃದ್ಧಿಗಾಗಿ ಸ್ಪರ್ಧೆ: ಎ.ಡಿ.ಶಿವಪ್ಪ

| Published : Apr 04 2024, 01:02 AM IST

ಸಮಸ್ಯೆ ಪರಿಹಾರ, ಜಿಲ್ಲೆ ಅಭಿವೃದ್ಧಿಗಾಗಿ ಸ್ಪರ್ಧೆ: ಎ.ಡಿ.ಶಿವಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಮತದಾರರು ಬಿಎಸ್‍ಪಿಯನ್ನು ಬೆಂಬಲಿಸಬೇಕು ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಲೋಕಸಭೆ ಚುನಾವಣೆ ಅಭ್ಯರ್ಥಿ ಎ.ಡಿ.ಶಿವಪ್ಪ ಕೋರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯ ಬಗರ್‌ ಹುಕುಂ, ಅರಣ್ಯ ಕಾಯ್ದೆ, ಶರಾವತಿ ಸಂತ್ರಸ್ತರ ಸಮಸ್ಯೆ, ಕಾರ್ಖಾನೆಗಳ ಸ್ಥಗಿತ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಮತದಾರರು ಬಿಎಸ್‍ಪಿಯನ್ನು ಬೆಂಬಲಿಸಬೇಕು ಎಂದು ಬಿಎಸ್‌ಪಿ ಪಕ್ಷದ ಲೋಕಸಭೆ ಚುನಾವಣೆ ಅಭ್ಯರ್ಥಿ ಎ.ಡಿ.ಶಿವಪ್ಪ ಮನವಿ ಮಾಡಿದರು.ಇಲ್ಲಿನ ಪ್ರೆಸ್‌ ಟ್ರಸ್ಟ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತಾನು ಬಿಎಸ್‍ಪಿಯಿಂದ ಸ್ಪರ್ಧಿಸಲಿದ್ದೇನೆ. ಪಕ್ಷ ತನ್ನನ್ನು ಅಧಿಕೃತ ಉಮೇದುವಾರ ಎಂದು ಘೋಷಿಸಿದೆ. ಜೊತೆಗೆ ಕರ್ನಾಟಕದ ಎಲ್ಲಾ 28 ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಪಕ್ಷದ ಅಧ್ಯಕ್ಷೆ ಮಾಯಾವತಿ ಕಣಕ್ಕಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಸ್ಥಿತಿಗತಿ ನೋಡಿದಾಗ ಜಿಲ್ಲೆಯ ಹೆಮ್ಮೆಯ ಎರಡು ಬೃಹತ್ ಕೈಗಾರಿಕೆಗಳನ್ನು ಮುಚ್ಚಿ ಸುಮಾರು 50,000 ಕುಟುಂಬಗಳು ಬೀದಿಗೆ ಬಿದ್ದಿವೆ. ಜಿಲ್ಲೆಗೆ ದೇಶದ ಪ್ರಧಾನ ಮಂತ್ರಿ 3 ಬಾರಿ ಜಿಲ್ಲೆಗೆ ಭೇಟಿ ನೀಡಿದ್ದರೂ ಕೂಡ ಭದ್ರಾವತಿಯ ಕಾರ್ಖಾನೆಗಳ ಕಾರ್ಮಿಕರನ್ನು ಸೌಜನ್ಯಕ್ಕೂ ಭೇಟಿ ಮಾಡಿ ಅವರ ಕಷ್ಟ -ಸುಖ ವಿಚಾರಿ ಸುವ ಕನಿಷ್ಠ ಕೆಲಸ ಕೂಡ ಮಾಡಲಿಲ್ಲ. ಇದರ ಬಗ್ಗೆ ಆಗಿನ ಸಂಸದರೂ ಇದೂವರೆಗೂ ಯಾವುದೇ ತ್ವರಿತ ಕ್ರಮ ತೆಗೆದುಕೊಳ್ಳಲೇ ಇಲ್ಲ. ಸುಮಾರು 25 ಲಕ್ಷ ಬಗರ್ ಹುಕುಂ ಸಾಗುವಳಿದಾರರ ಸಮಸ್ಯೆ ಇದೆ. ರಾಜ್ಯ ಮತ್ತು ಜಿಲ್ಲೆಯಲ್ಲಿ ಸುಮಾರು 10 ಲಕ್ಷ ವಸತಿ ಸಮಸ್ಯೆ ಹಾಗೆಯೇ ಇದೆ. ಜಿಲ್ಲೆಯ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಹಾಗೆ ಇದೆ. ವಿಮಾನ ನಿಲ್ದಾಣ ಅಭಿವೃದ್ಧಿಗೆ ವಶಪಡಿಸಿಕೊಂಡ ಬಡವರ ಭೂಮಿಗೆ ಸೂಕ್ತ ಪರಿಹಾರ ಇನ್ನೂ ಸಿಕ್ಕಿಲ್ಲ ಎಂದು ದೂರಿದರು.

ಮೀಸಲಾತಿ ಮತ್ತು ಒಳ ಮೀಸಲಾತಿಗಾಗಿ ರಚಿಸಿದ ಸದಾಶಿವ ಆಯೋಗದ ವರದಿ ಹಳ್ಳ ಹಿಡಿಯುತ್ತಿದೆ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ರಚಿಸಿದ ಕಾಂತರಾಜ್ ಆಯೋಗದ ವರದಿ ಶಿಪಾರಸ್ಸುಗಳನ್ನು ಯಥಾವತ್ತಾಗಿ ಜಾರಿ ಮಾಡುವುದರಲ್ಲಿ ತಾತ್ಸಾರ, ವಿಳಂಬ ನೀತಿ, ಮಾಡಲಾಗುತ್ತಿದೆ. ಪಂಚ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಬಡವರ ಉದ್ಧಾರಕರು ಎನ್ನುತ್ತಿರುವ ರಾಜ್ಯ ಸರ್ಕಾರ, ಅವರನ್ನು ಇನ್ನಷ್ಟು ಬಡತನಕ್ಕೆ ತಳ್ಳುತ್ತಿದೆ. ಎಸ್‌ಸಿಪಿ, ಎಸ್‍ಟಿಪಿಯ 11 ಸಾವಿರ ಕೋಟಿ ಹಣವನ್ನು ಗ್ಯಾರಂಟಿಗೆ ಬಳಸಲಾಗುತ್ತಿದೆ. ಈ ಮೂಲಕ ವಂಚಿಸಲಾಗುತ್ತಿದೆ. ಇದೇ ಹಣದಲ್ಲಿ ಮನೆಕಟ್ಟಿಕೊಟ್ಟಿದ್ದರೆ, ನಿರುದ್ಯೋಗಿಗಳಿಗೆ ಉದ್ಯೋಗ ಕೊಟ್ಟಿದ್ದರೆ ಇವರು ಸ್ವಾವಲಂಬಿಗಳಾಗಿ ನೆಮ್ಮದಿಯಿಂದ ಬದುಕುತ್ತಿದ್ದರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಎ.ಡಿ.ಲಕ್ಷ್ಮೀಪತಿ, ಎಚ್.ಎನ್.ಶ್ರೀನಿವಾಸ, ಜಿ.ಸಂಗಪ್ಪ, ಮಂಜುನಾಥ, ಪಿ.ಜಿ.ರಾಜಪ್ಪ ಮತ್ತಿತರರು ಇದ್ದರು.