ಸಂಗೀತ ಮನಸ್ಸು ಹಗುರಗೊಳಿಸುವ ಸಾಧನ: ಕಾಮಣ್ಣ

| Published : Apr 04 2024, 01:02 AM IST

ಸಂಗೀತ ಮನಸ್ಸು ಹಗುರಗೊಳಿಸುವ ಸಾಧನ: ಕಾಮಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಸಂಗೀತ ಮನಸ್ಸಿಗೆ ಸಂತೋಷ ನೀಡಿ ದುಃಖ, ದುಮ್ಮಾನ, ಸಂಕಟ, ವೇದನೆ ದೂರ ಮಾಡಿ ಮನಸ್ಸನ್ನು ಹಗುರಗೊಳಿಸುತ್ತದೆ ಎಂದು ತಾಲೂಕು ಸಿದ್ದೇಶ್ವರ ಸಾಹಿತ್ಯ ವೇದಿಕೆ ಅಧ್ಯಕ್ಷ ಕಾಮಣ್ಣ ಅಭಿಪ್ರಾಯಪಟ್ಟರು.

ಹಿರಿಯೂರು: ಸಂಗೀತ ಮನಸ್ಸಿಗೆ ಸಂತೋಷ ನೀಡಿ ದುಃಖ, ದುಮ್ಮಾನ, ಸಂಕಟ, ವೇದನೆ ದೂರ ಮಾಡಿ ಮನಸ್ಸನ್ನು ಹಗುರಗೊಳಿಸುತ್ತದೆ ಎಂದು ತಾಲೂಕು ಸಿದ್ದೇಶ್ವರ ಸಾಹಿತ್ಯ ವೇದಿಕೆ ಅಧ್ಯಕ್ಷ ಕಾಮಣ್ಣ ಅಭಿಪ್ರಾಯಪಟ್ಟರು. ವೇದಾವತಿ ನಗರದ ಕೃಷ್ಣ ದೇವಸ್ಥಾನದ ಆವರಣದಲ್ಲಿ ಕಳವಿಭಾಗಿ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾ ಸಂಘ ಹಾಗೂ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂಗೀತ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಗೀತ, ಸಾಹಿತ್ಯ, ರಂಗಕಲೆ ಇವು ಮಾನವನ ಬದುಕಿನ ಅವಿಭಾಜ್ಯ ಅಂಗಗಳು. ದೇಶದ ಕಲೆ, ಸಂಸ್ಕೃತಿ ಅನಾವರಣಕ್ಕೆ ಕಾರಣವಾಗಿವೆ. ಮನುಕುಲಕ್ಕೆ ಬೇಕಾದ ನೆಮ್ಮದಿ, ಸಾಂತ್ವನ, ಸೌಹಾರ್ದತೆ, ಸಹಬಾಳ್ವೆ, ಪ್ರೀತಿ, ಕರುಣೆ, ಬಾಂಧವ್ಯ ಮತ್ತು ಮಮತೆ ತಂದುಕೊಡುತ್ತದೆ ಎಂದರು.

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಸಂಗೀತಕ್ಕೆ ಮೊದಲು ಯಾವುದೇ ರಾಗ, ತಾಳ ಇರಲಿಲ್ಲ. ಕ್ರಿಶ 8ನೇ ಶತಮಾನದಲ್ಲಿ ಬದುಕಿದ್ದ ಮಹರ್ಷಿ ಮಾತಂಗ ಮುನಿಗಳು ಹರಿಯುವ ನದಿಗಳ ಕಲರವ, ಜುಳುಜುಳು ನಾದ, ಕೋಗಿಲೆಯ ಇಂಪಾದ ಗಾನ, ಹಕ್ಕಿಗಳ ಚಿಲಿಪಿಲಿ ಗಾನ, ಸುಯ್ಯನೆ ಬೀಸುವ ತಂಗಾಳಿ ಇವುಗಳನ್ನು ಆಧರಿಸಿ ಸಂಗೀತಕ್ಕೆ ಬೇಕಾದ ಹೊಸ ರಾಗ, ತಾಳ, ಸಪ್ತ ಸ್ವರಗಳನ್ನು ಮೊದಲಿಗೆ ನೀಡಿದರು. ರಾಗ, ತಾಳಗಳನ್ನು ಅಧರಿಸಿ ಇಂದು ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಮತ್ತು ಪಾಶ್ಚಿಮಾತ್ಯ ಸಂಗೀತ ರೂಪುಗೊಂಡಿದೆ.

ಆದ ಕಾರಣ ಮಹರ್ಷಿ ಮಾತಂಗ ಮುನಿಯನ್ನು ಸಂಗೀತದ ಜನಕ ಅಥವಾ ಸಂಗೀತದ ಪಿತಾಮಹ ಎಂದು ಕರೆಯಲಾಗುತ್ತದೆ. ಸಂಗೀತಕ್ಕೆ ಮಹರ್ಷಿ ಮಾತಂಗ ಮುನಿಗಳ ಕೊಡುಗೆ ಅಪಾರವಾಗಿದೆ. ತರುವಾಯ ದಾಸ ಪರಂಪರೆಯಲ್ಲಿ ಬರುವ ಪುರಂದರದಾಸರು, ಕನಕದಾಸರು, ತ್ಯಾಗರಾಜ ಮಹಾಸ್ವಾಮಿಗಳು, ಭಾರತ ರತ್ನ ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಗದುಗಿನ ಪುಟ್ಟರಾಜ ಗವಾಯಿಗಳು, ಪಂಚಾಕ್ಷರಿ ಗವಾಯಿಗಳು, ನಾಡಿನ ಮಠಮಾನ್ಯಗಳು ಸಂಗೀತಕ್ಕೆ ತಮ್ಮದೇ ಆದ ಕೊಡುಗೆ ನೀಡಿದೆ ಎಂದರು.

ಸುಗಮ ಸಂಗೀತ, ಜೆ.ನಿಜಲಿಂಗಪ್ಪ ಮತ್ತು ತಂಡದಿಂದ ಜನಪದ ಸಂಗೀತ, ಬಿ.ಟಿ.ಶಂಕರಲಿಂಗಯ್ಯ ಮತ್ತು ತಂಡದಿಂದ ಭಕ್ತಿ ಸಂಗೀತ, ಬಾಲೇನಹಳ್ಳಿಯ ರಾಮಚಂದ್ರಪ್ಪ ಮತ್ತು ತಂಡದಿಂದ ತತ್ವಪದ ಗಾಯನ ಕಾರ್ಯಕ್ರಮಗಳು ಜರುಗಿದವು.

ಈ ಸಂದರ್ಭದಲ್ಲಿ ನಿವೃತ್ತ ಮುಖ್ಯಶಿಕ್ಷಕ ಡಿ.ದಾಸಣ್ಣ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಎಂ.ಬಿ.ಲಿಂಗಪ್ಪ, ಶಿಕ್ಷಕರಾದ ಆರ್.ರಂಗನಾಥ್, ಆರ್.ಎ.ಸ್ವಪ್ನ, ಹಾರ್ಮೋನಿಯಂ ವಾದಕ ಎಂ.ಶಿವಲಿಂಗಪ್ಪ, ತಬಲ ವಾದಕ ಅಭಿಷೇಕ್ ಅರ್ಜುನ್, ನಂದನ್, ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು.