ಕನ್ನಡಪ್ರಭ ವಾರ್ತೆ ವಿಜಯಪುರ
ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಸ್ಥಾನಮಾನ ಸಿಗಬೇಕು ಎಂದು ಪ್ರಯತ್ನಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಕನಸಿಗೆ ಸಂಸತ್ತಿನಲ್ಲಿ ಕಾಂಗ್ರೆಸ್ ವಿರೋಧಿಸುವ ಮೂಲಕ ಇಡಿ ದೇಶದ ತಾಯಂದಿರಿಗೆ ಅವಮಾನ ಮಾಡಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಆರೋಪಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ಪಾತಿನಿಧ್ಯ ಸಿಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ನಿರ್ಣಯ ಮಾಡಿದ್ದರು. ಆದರೆ ಕಾಂಗ್ರೆಸ್ ಹಾಗೂ ಅವರ ಮಿತ್ರರೆಲ್ಲ ಸೇರಿ ವಿರೋಧ ಮಾಡಿದ್ದಾರೆ. ಮಹಿಳೆಯರ ಬಗ್ಗೆ ಮಾತನಾಡುವುದು, ಕೇವಲ ಮೊಸಳೆ ಕಣ್ಣೀರು ಸುರಿಸುವುದು ಕಾಂಗ್ರೆಸ್ ಮಾಡುತ್ತಿದೆ ಎಂದು ದೂರಿದರು.ಕಾಂಗ್ರೆಸ್ ಮಾಡಿದ ವಿರೋಧದಿಂದ ಇಂದು ಇಡೀ ದೇಶದ ತಾಯಂದಿರಿಗೆ ಮಾಡಿದ ಅಪಮಾನವಾಗಿದೆ. ಅಂಬೇಡ್ಕರ, ಬಸವಣ್ಣನವರ ಮಹದಾಸೆಯಂತೆ ಮಹಿಳೆಯರು ಸಮಾನವಾಗಿ ಮುಂದೆ ಬರಬೇಕು ಎಂಬುದಕ್ಕೆ ಕಾಂಗ್ರೆಸ್‌ನವರು ತಣ್ಣೀರೆರಚಿದ್ದಾರೆ. ಕಾಂಗ್ರೆಸ್‌ನವರು ಮೊದಲಿನಿಂದಲೂ ಹೊಟ್ಟೆಕಿಚ್ಚಿನಿಂದ ಮಹಿಳೆಯರಿಗೆ ಅಪಮಾನ ಮಾಡುತ್ತಲೇ ಇದ್ದಾರೆ. ನಾವು ಒಪ್ಪಿಕೊಂಡರೆ ಪ್ರಧಾನಿ ಮೋದಿಯವರಿಗೆ ಮಹಿಳಾ ಮೀಸಲಾತಿ ನೀಡಿದ ಶ್ರೇಯಸ್ಸು ಸಿಗುತ್ತದೆ ಎಂದು ಹೀಗೆ ವಿರೋಧಿಸಿದ್ದಾರೆ. ಬಿಜೆಪಿ ಯಾವಾಗಲೂ ಮಹಿಳೆಯರ ಪರವಾಗಿಯೇ ಇದ್ದು, ಈ ಹಿಂದೆ ಯಡಿಯೂರಪ್ಪನವರು ಸಿಎಂ ಇದ್ದಾಗ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದರು. ನಾರಿ ವಂದನ, ಬೇಟಿ ಪಡಾವೋ ಬೇಟಿ ಬಚಾವೋ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದೆ ಬಿಜೆಪಿ ಎಂದರು.ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವಾಗಲಿದೆ. ಏಕೆಂದರೆ ಲಕ್ಷಾಂತರ ಬಿಜೆಪಿ ಕಾರ್ಯಕರ್ತರು, ನೂರಾರು ಬಿಜೆಪಿ ಮುಖಂಡರು ಕೆಲಸ ಮಾಡಿದ್ದಾರೆ. ಕೇವಲ ಯತ್ನಾಳ ಪ್ರಚಾರಕ್ಕೆ ಬಂದರೆ ಬಿಜೆಪಿ ಗೆಲ್ಲುತ್ತದೆ. ಬರದಿದ್ದರೆ ಸೋಲುತ್ತದೆ ಎಂಬುದೇನಿಲ್ಲ ಎಂದ ಅವರು, ದಾವಣಗೆರೆಯಲ್ಲಿ ಫಲಿತಾಂಶಕ್ಕೂ ಮೊದಲೇ ಕಾಂಗ್ರೆಸ್ ಸೋಲು ಒಪ್ಪಿಕೊಂಡಿದೆ. ಆದ್ದರಿಂದಲೇ ಅಲ್ಲಿನ ಅಲ್ಪಸಂಖ್ಯಾತರನ್ನು ಉಚ್ಚಾಟಿಸುತ್ತಿದ್ದಾರೆ ಎಂದು ದೂರಿದರು. ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸ್ವಪ್ನಾ ಕಣಮುಚನಾಳ ಮಾತನಾಡಿ, ಸಂಸತ್‌ನಲ್ಲಿ ನಾರಿಶಕ್ತಿ ಅಧಿನಿಯಮ ಕಾಯ್ದೆಯನ್ನು ವಿರೋಧ ಪಕ್ಷದವರು ಹೀನಾಯವಾಗಿ ಸೋಲಿಸಿದ್ದಾರೆ. ಇದು ಇಡೀ ದೇಶದ ಮಹಿಳೆಯರಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ಕಾಂಗ್ರೆಸ್ ನೀತಿ ಮೊದಲಿನಿಂದಲೂ ಮಹಿಳೆಯರ ವಿರೋಧಿಯಾಗಿದ್ದಾರೆ. ಮೋದಿಯವರು ಬಂದಮೇಲೆ ಮಹಿಳೆಯರಿಗಾಗಿ ಬೇಟಿ ಬಚಾವೋ ಬೇಟಿ ಪಡಾವೋದಂತಹ ಅನೇಕ ಮಹತ್ವದ ಯೋಜನೆಗಳನ್ನು ರೂಪಿಸಿದ್ದಾರೆ. ಮಹಿಳೆಯರ ಪರವಾಗಿ ಬಿಲ್ ತಂದರೆ ಕಾಂಗ್ರೆಸ್‌ನವರಿಗೆ ರಾಜಕೀಯ ಹಿನ್ನಡೆಯಾಗುತ್ತದೆ ಎಂಬ ಭಯದಿಂದ ಹೀಗೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಯಾವಾಗಲೂ ಮಹಿಳಾ ವಿರೋಧಿಯಾಗಿದ್ದು, ಅವರ ನಡೆಯನ್ನು ನಾವು ಮಹಿಳೆಯರೆಲ್ಲ ತೀವ್ರವಾಗಿ ಖಂಡಿಸುತ್ತೇವೆ ಎಂದರು.ಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ಮಾಧ್ಯಮ ವಕ್ತಾರ ವಿಜಯ ಜೋಶಿ ಇದ್ದರು.