ಕನ್ನಡಪ್ರಭ ವಾರ್ತೆ ಖಾನಾಪುರ
ತನ್ನ ಹಿಂಡಿನಿಂದ ತಪ್ಪಿಸಿಕೊಂಡ ಬಂದ 10-12 ವರ್ಷದ ಕಾಡಾನೆಯೊಂದು ಶನಿವಾರ ಪಟ್ಟಣದ ಹೊರವಲಯದ ಜನವಸತಿ ಪ್ರದೇಶಗಳಲ್ಲಿ ಪ್ರತ್ಯಕ್ಷವಾಗಿ ಸ್ಥಳೀಯ ಜನರಲ್ಲಿ ಆತಂಕ ಸೃಷ್ಟಿಸಿತ್ತು. ಶುಕ್ರವಾರ ಮಧ್ಯಾಹ್ನ ಮತ್ತು ಸಂಜೆ ಹೊತ್ತಿನಲ್ಲಿ ತಾಲೂಕಿನ ಜಾಂಬೋಟಿ ರಸ್ತೆಯ ನಾಗುರ್ಡಾ, ಮೋದೆಕೊಪ್ಪ, ಕಾನಸುಲಿ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಆನೆ ಶನಿವಾರ ನಸುಕಿನ ಜಾವ ಬಾಚೋಳಿ ಮೂಲಕ ಪಟ್ಟಣ ಪ್ರವೇಶಿಸಿ ಶಿವಾಜಿನಗರ, ಮಯೇಕರ ನಗರ, ಅಸೋಗಾ ರಸ್ತೆ, ರೈಲ್ವೆ ಸ್ಟೇಶನ್ ಪ್ರದೇಶದಲ್ಲಿ ಕಾಣಿಸಿಕೊಂಡಿತ್ತು.ಕೆಲವು ದಿನಗಳಿಂದ ತಾಲೂಕಿನ ನೀಲಾವಡೆ ಅರಣ್ಯದಲ್ಲಿ ತಂಗಿದ್ದ ಕಾಡಾನೆಗಳ ಹಿಂಡಿನಿಂದ ಬೇರ್ಪಟ್ಟಿರುವ ಈ ಆನೆ ಹಗಲು ಹೊತ್ತಿನಲ್ಲೇ ಪಟ್ಟಣದ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಂಡಿದೆ. ಕಾಡಾನೆ ಪತ್ತೆಯಾದ ಮಾಹಿತಿ ಲಭ್ಯವಾಗುತ್ತಲೇ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಧಾವಿಸಿದ್ದಾರೆ. ಅಷ್ಟರೊಳಗೆ ಆನೆ ಮಲಪ್ರಭಾ ನದಿ ದಾಟಿ ರುಮೇವಾಡಿ, ಶೇಡೇಗಾಳಿ ಗ್ರಾಮಗಳ ಮೂಲಕ ಅರಣ್ಯ ಪ್ರದೇಶವನ್ನು ಪ್ರವೇಶಿಸಿದೆ. ಆನೆಯ ಚಲನವಲನದ ಬಗ್ಗೆ ಗಮನಹರಿಸಲಾಗುತ್ತಿದೆ. ಇಲಾಖೆ ಸಿಬ್ಬಂದಿಯನ್ನು ಆನೆ ಸಾಗಿದ ಮಾರ್ಗದಲ್ಲಿ ಗಸ್ತು ನಿಯೋಜನೆ ಮಾಡಿದ್ದಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ಮಾಹಿತಿ ನೀಡಿದರು.ರುಮೇವಾಡಿ, ಕರಂಬಳ, ಶೇಡೆಗಾಳಿ ಗ್ರಾಮಗಳ ಸುತ್ತಲಿನ ಕಬ್ಬಿನ ಗದ್ದೆಗಳಲ್ಲಿ ಕೆಲಕಾಲ ತಂಗಿದ್ದ ಕಾಡಾನೆ ಮಧ್ಯಾಹ್ನದ ಬಳಿಕ ಶೇಡೆಗಾಳಿ ಬಳಿಯ ಅಕ್ಕಪಕ್ಕ ಕಾಣಿಸಿಕೊಂಡಿದೆ. ಬಳಿಕ ಹೊಣಕಲ್, ಗಂಗವಾಳಿ ಗ್ರಾಮಗಳ ಮೂಲಕ ಅರಣ್ಯದಲ್ಲಿ ಮರೆಯಾಗಿದೆ. ಈ ಸುದ್ದಿ ತಿಳಿದು ಕರಂಬಳ, ಕೌಂದಲ್, ಹೊಣಕಲ್, ರುಮೇವಾಡಿ, ಶೇಡೆಗಾಳಿ ಹಾಗೂ ಖಾನಾಪುರ ಗ್ರಾಮಗಳ ಜನತೆ ಆತಂಕಗೊಂಡಿದ್ದರು. ಬಳಿಕ ಮತ್ತೆ ಮಧ್ಯಾಹ್ನದ ಕಾಡಾನೆ ಅರಣ್ಯದಲ್ಲಿ ಮರೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಯ ಚಲನವಲನದ ಬಗ್ಗೆ ನಿಗಾ ವಹಿಸಿದ್ದಾರೆ.