ಕೇಂದ್ರ ಸರ್ಕಾರದ ನಾರಿ ಶಕ್ತಿ ವಂದನ ಮೀಸಲಾತಿ ಮಸೂದೆ ವಿರೋಧಿಸಿದ ಕಾಂಗ್ರೆಸ್‌ ನಡೆ ವಿರುದ್ಧ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕೇಂದ್ರ ಸರ್ಕಾರದ ನಾರಿ ಶಕ್ತಿ ವಂದನ ಮೀಸಲಾತಿ ಮಸೂದೆ ವಿರೋಧಿಸಿದ ಕಾಂಗ್ರೆಸ್‌ ನಡೆ ವಿರುದ್ಧ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಖಂಡನಾ ನಿರ್ಣಯ ಅಂಗೀಕರಿಸಲಾಯಿತು.

ಪಾಲಿಕೆ ಸಭಾಂಗಣದಲ್ಲಿ ಶನಿವಾರ ಮೇಯರ್‌ ಪ್ರೀತಿ ಕಾಮಕರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು. ಮೀಸಲಾತಿ ಮಸೂದೆಯನ್ನು ಸಮರ್ಥಿಸಿದ ಬಿಜೆಪಿ ಸದಸ್ಯರು ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವ ಕೇಂದ್ರದ ನಿರ್ಧಾರವನ್ನು ಕಾಂಗ್ರೆಸ್‌ ವಿರೋಧಿ ನಡೆಯನ್ನು ತೀವ್ರವಾಗಿ ಖಂಡಿಸಿದರು. ಹೀಗಾಗಿ, ಮಸೂದೆ ಕುರಿತು ಚರ್ಚೆಗೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿ ಹೊರನಡೆದರು.ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಮಾತನಾಡಿ, ನಾರಿ ಶಕ್ತಿ ವಂದನಾ ಮಸೂದೆ ಲೋಕಸಭೆಯಲ್ಲಿ ಪಾಸ್‌ ಆಗಬೇಕಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಮಹಿಳೆಯರು ರಾಜಕಾರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಒದಗಿಸುವ ಮಸೂದೆ ಜಾರಿಗೆ ಮುಂದಾಗಿದ್ದರು. ಆದರೆ, ಇದಕ್ಕೆ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದೆ. ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಬೇಕು. ಬಿಲ್‌ ಪಾಸ್‌ ಆಗಿದ್ದರೆ, ಅದು ಐತಿಹಾಸಿಕ ನಿರ್ಣಯವಾಗುತ್ತಿತ್ತು. ಈಗಾಗಲೇ ಪಾಲಿಕೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಯಲ್ಲಿದೆ. ಇದೇ ಮಾದರಿಯಲ್ಲಿ ಲೋಕಸಭೆ ಹಾಗೂ ವಿಧಾನಸಭೆಯಲ್ಲಿಯೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಉದ್ದೇಶವಿತ್ತು. ಆದರೆ, ಕಾಂಗ್ರೆಸ್‌ ಮಹಿಳೆಯರ ವಿರುದ್ಧದ ನಿಲುವು ತೋರಿಸಿದೆ ಎಂದು ಟೀಕಿಸಿದರು.ವಿಧಾನ ಪರಿಷತ್‌ ಸದಸ್ಯ ಸಾಬಣ್ಣ ತಳವಾರ ಮಾತನಾಡಿ, ದೇಶ ನಾರಿ ಶಕ್ತಿ ವಂದನಾ ಮಸೂದೆ ಪಾಸ್‌ ಆಗುವುದಕ್ಕಾಗಿ ಕಾಯುತ್ತಿತ್ತು. ಈ ಮಸೂದೆ ಜಾರಿಗೆ ಬಂದಿದ್ದರೆ, ದೀರ್ಘಕಾಲದಿಂದ ರಾಜಕೀಯದಿಂದ ದೂರ ಉಳಿದಿದ್ದ ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಗುತ್ತಿತ್ತು. ಸಂವಿಧಾನಬದ್ಧ ಹಕ್ಕಿನ ಆಧಾರದ ಮೇಲೆ ಮಹಿಳೆಯರಿಗೆ ಅಧಿಕಾರ ನೀಡಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಈ ಬಿಲ್‌ ತಂದಿದ್ದರು. ಆದರೆ, ದುರಾದೃಷ್ಟವಶಾತ್‌ ಯಾವುದೋ ತಪ್ಪು ಕಲ್ಪನೆಯಿಂದ ಪ್ರತಿಪಕ್ಷದವರು ಈ ಮಸೂದೆ ಪಾಸ್‌ ಆಗದಂತೆ ಮಾಡಿದ್ದಾರೆ.ಇಂತಹ ನಡೆಯನ್ನು ನಾವು ಸಹಿಸುವುದಿಲ್ಲ. ಪಾಲಿಕೆ ಸಭೆಯಲ್ಲಿ ಕಾಂಗ್ರೆಸ್‌ ನಡೆ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಬೇಕು ಎಂದು ಮನವಿ ಮಾಡಿದರು.ಉಪಮೇಯರ್‌ ಹನುಮಂತ ಕೊಂಗಾಲಿ, ಸದಸ್ಯರಾದ ರಾಜಶೇಖರ ಡೋಣಿ, ಸಾರಿಕಾ ಪಾಟೀಲ, ವೀಣಾ ವಿಜಾಪುರೆ, ಶ್ರೇಯಸ್‌ ನಾಕಾಡಿ ಇತರರು ಪ್ರತಿಪಕ್ಷಗಳ ನಡೆಯನ್ನು ಖಂಡಿಸಿದರು. ಸಭೆ ಆರಂಭದ ವೇಳೆ ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ ಆಶಾ ಬೋಸ್ಲೆ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಪಿಐಡಿ ಹಗರಣ ತನಿಖೆಗೆ ಆದೇಶ

ಪಿಐಡಿ ಹಗರಣಕ್ಕೆ ಸಂಬಂಧಿಸಿದಂತೆ ನಾಲ್ವರು ಸಿಬ್ಬಂದಿ ವಿರುದ್ಧ ಇಲಾಖೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಆಯುಕ್ತ ಕಾರ್ತಿಕ ಸಭೆ ಗಮನ ಸೆಳೆದರು. ಈ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮೇಯರ್‌ ಪ್ರೀತಿ ಕಾಮಕರ ಅಧಿಕಾರಿಗಳಿಗೆ ಸೂಚಿಸಿದರು. ಆಸ್ತಿ ಇ ಖಾತೆಗೆ ಸಂಬಂಧಿಸಿದಂತೆ ಸಿಬ್ಬಂದಿ ₹1 ಲಕ್ಷ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದರೂ ಈವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ವಾಣಿ ಜೋಶಿ ಆರೋಪಿಸಿದರು. ರಾಮತೀರ್ಥ ನಗರದ ಗಂಗಾಧರರಾವ್‌ ದೇಶಪಾಂಡೆ ಸ್ಮಾರಕ ಭವನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಸ್ತಾಂತರಕ್ಕೆ ನಿರ್ಣಯ ಕೈಗೊಳ್ಳಲಾಯಿತು.ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರ ಪ್ರತಿಭಟನೆ

ಪಾಲಿಕೆಯಲ್ಲಿ ಕೌನ್ಸಿಲ್‌ ಸಭೆಗಳಲ್ಲಿ ಪ್ರತಿಪಕ್ಷದ ವಿಷಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಸಭೆ ಬಹಿಷ್ಕರಿಸಿ, ಪಾಲಿಕೆ ಕಚೇರಿಯ ಆಯುಕ್ತರ ಕೊಠಡಿ ಎದುರು ಕುಳಿತು ಪ್ರತಿಭಟನೆ ನಡೆಸಿದರು.ಪಾಲಿಕೆಯಲ್ಲಿ ಸಾಮಾನ್ಯಸಭೆ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷ ಸದಸ್ಯರು ಆಡಳಿತ ಪಕ್ಷದ ವಿರುದ್ದ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕೆಲಕಾಲ ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು. ಜನ ಸಾಮಾನ್ಯರ ಬೇಡಿಕೆ, ಸಮಸ್ಯೆಗಳು, ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳನ್ನು ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳುತ್ತಿಲ್ಲ. ಆಡಳಿತ ಪಕ್ಷ ಬಿಜೆಪಿ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿದೆ. ನಾವು ಜನಪ್ರತಿನಿಧಿಗಳು. ಜನತೆಯ ಸಮಸ್ಯೆಗಳನ್ನು ಆಲಿಸಿ, ಮಂಡಿಸುವ ಹಕ್ಕು ನಮಗಿದೆ. ಆದರೆ, ನಮ್ಮ ಮಾತಿಗೆ ಬೆಲೆ ನೀಡುತ್ತಿಲ್ಲ. ನಮ್ಮ ಸಲಹೆ, ಸೂಚನೆ, ಆಕ್ಷೇಪಣೆಗೆ ಅವಕಾಶ ಇಲ್ಲವಾಗಿದೆ. ಇಂತಹ ಸಭೆಯಲ್ಲಿ ನಾವು ಪಾಲ್ಗೊಳ್ಳುವುದಕ್ಕೆ ಅರ್ಥವೇ ಇಲ್ಲ. ಪಾಲಿಕೆ ಆಡಳಿತ ಕ್ರಮ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಸಭೆ ಬಹಿಷ್ಕರಿಸಿ, ಹೊರ ನಡೆದರು. ಆಡಳಿತ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ಗದ್ದಲ ವಾತಾವರಣ ನಿರ್ಮಾಣವಾಯಿತು. ಸಭೆ ಮುಗಿಯುವವರೆಗೂ ಪ್ರತಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದರು.