ಏಳು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಇತಿಹಾಸ ಪ್ರಸಿದ್ಧ ಇಲ್ಲಿನ ಕಿಲ್ಲೆ ಮೈದಾನದ 68ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಭಾನುವಾರ ಸಂಪನ್ನಗೊಂಡಿತು.

ಪುತ್ತೂರು: ಏಳು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಇತಿಹಾಸ ಪ್ರಸಿದ್ಧ ಇಲ್ಲಿನ ಕಿಲ್ಲೆ ಮೈದಾನದ 68ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವ ಭಾನುವಾರ ಸಂಪನ್ನಗೊಂಡಿತು. ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ ನಡೆದ ಗಣೇಶೋತ್ಸವದ ಸಮಾರೋಪದ ಅಂಗವಾಗಿ ರಾತ್ರಿ ನಡೆದ ಶ್ರೀ ಮಹಾಗಣಪತಿಯ ವೈಭವದ ಶೋಭಾಯಾತ್ರೆಯು ಭಕ್ತಿ, ಸಂಸ್ಕೃತಿ ಹಾಗೂ ಜನಪದ ಕಲೆಯ ಅಪೂರ್ವ ಸಂಗಮವಾಗಿ ಗಮನ ಸೆಳೆಯಿತು.

ಶ್ರೀ ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಅವರ ನೇತೃತ್ವದಲ್ಲಿ ಏಳು ದಿನಗಳ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದವು. ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಪುರೋಹಿತ ಸುಬ್ರಹ್ಮಣ್ಯ ಹೊಳ್ಳ ವಹಿಸಿದ್ದರು. ಬೆಳಗ್ಗೆ 108 ಕಾಯಿ ಗಣಪತಿ ಹೋಮ ನಡೆಯಿತು. ಮಧ್ಯಾಹ್ನ ದೇವರ ಬಲಿ ಉತ್ಸವ ನೆರವೇರಿತು. ರಾತ್ರಿ ಸರ್ವವಾದ್ಯಗಳೊಂದಿಗೆ ಶ್ರೀ ದೇವರ ಬಲಿ ಉತ್ಸವ ನೆರವೇರಿದ ಬಳಿಕ ದರ್ಶನ ಬಲಿ ಉತ್ಸವ ನಡೆಯಿತು. ಹಂಸರೂಢ ರಥದಲ್ಲಿ ವಿರಾಜಮಾನರಾಗಿದ್ದ ಮಹಾಗಣಪತಿಗೆ ಉತ್ಸವ ಮೂರ್ತಿಯನ್ನು ಹೊತ್ತ ಬ್ರಹ್ಮವಾಹಕರು ಪ್ರದಕ್ಷಿಣೆಯೊಂದಿಗೆ ಹೆಜ್ಜೆ ಹಾಕುತ್ತಾ ದರ್ಶನಬಲಿ ನೆರವೇರಿಸಿದರು. ರಾತ್ರಿ 9.20ರ ಸುಮಾರಿಗೆ ಸ್ಥಳ ಭೂಮಿಯ ದೈವ ರಕೇಶ್ವರಿ ಹಾಗೂ ಕಾರೆಕ್ಕಾಡಿನ ಪಂಜುರ್ಲಿ ದೈವದ ಕೋಲ ನಡೆಯಿತು. ಶಶಾಂಕ್ ನೆಲ್ಲಿತ್ತಾಯ ದೈವಗಳ ಮಧ್ಯಸ್ಥರಾಗಿ ಸೇವೆ ಸಲ್ಲಿಸಿದರು. ಬಳಿಕ ಶ್ರೀ ಮಹಾಗಣಪತಿಗೆ ಮಹಾಪೂಜೆ ನೆರವೇರಿತು. ಏಳು ದಿನಗಳ ಕಾರ್ಯಕ್ರಮದಲ್ಲಿ ಸಮರ್ಪಣಾ ಭಾವದಿಂದ ಸಹಕರಿಸಿದವರಿಗೆ ಶ್ರೀ ದೇವತಾ ಸಮಿತಿ ಅಧ್ಯಕ್ಷರಿಂದ ಪ್ರಸಾದ ವಿತರಿಸಲಾಯಿತು. ಮಹಾಪೂಜೆಯ ಬಳಿಕ ಭಕ್ತರ ಕಾತರಕ್ಕೆ ತೆರೆ ಎಳೆದಂತೆ ರಾತ್ರಿ 10. 42 ರ ಸುಮಾರಿಗೆ ಶ್ರೀ ಮಹಾಗಣಪತಿಯ ವೈಭವದ ಶೋಭಾಯಾತ್ರೆ ವೇದಿಕೆಯಿಂದ ಹೊರಟಿತು. 10. 48 ರ ಸುಮಾರಿಗೆ ಮೈದಾನದ ದ್ವಾರವನ್ನು ದಾಟಿದ ಶೋಭಾಯಾತ್ರೆಗೆ ಸುಡುಮದ್ದು ಪ್ರದರ್ಶನ ವಿಶೇಷ ಮೆರುಗು ನೀಡಿತು. ಚೆಂಡೆ, ಸರ್ವವಾದ್ಯ, ತಾಸೆ, ಸ್ಯಾಕ್ಸೋಪೋನ್‌ಗಳ ನಾದದ ನಡುವೆ ಸಾಗಿದ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳ ಪ್ರದರ್ಶನಗಳು ಜನಮನ ಸೆಳೆದವು. ಮಹಾಗಣಪತಿಯ ವೈಭವದ ಶೋಭಾಯಾತ್ರೆಯು ಕೋರ್ಟ್ ರಸ್ತೆ, ದರ್ಬೆ, ಪರ್ಲಡ್ಕ, ತಾಲೂಕು ಆಫೀಸ್ ರಸ್ತೆ, ರಾಧಾಕೃಷ್ಣ ಮಂದಿರ, ಬೊಳುವಾರು, ಮಂಜಲ್ಪಡು ಕೆರೆಯಲ್ಲಿ ಶ್ರೀ ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡಿ ಸಮಾಪ್ತಿಯಾಯಿತು.