ಹುಬ್ಬಳ್ಳಿ:

ಮಾಜಿ ಪ್ರಧಾನಿಗಳಾದ ಜವಾಹರಲಾಲ್‌ ನೆಹರು ಅವರು ಎಸ್‌ಸಿ-ಎಸ್‌ಟಿ, ರಾಜೀವ್ ಗಾಂಧಿ ಒಬಿಸಿ ಮೀಸಲಾತಿ ವಿರೋಧಿಸಿದ್ದರು. ಈಗ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮಹಿಳಾ ಮೀಸಲಾತಿ ಧಿಕ್ಕರಿಸುವ ಮೂಲಕ ಕಾಂಗ್ರೆಸ್ ಮೀಸಲಾತಿ ಮತ್ತು ಮಹಿಳಾ ವಿರೋಧಿ ಎಂಬುದನ್ನು ಸಾಬೀತು ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಗಣತಿ ಆಧಾರಿತವಾಗಿ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿದರೆ ದಕ್ಷಿಣ ರಾಜ್ಯಗಳಿಗೆ, ಸಣ್ಣ ರಾಜ್ಯಗಳಿಗೆ ಅನ್ಯಾಯ ಆಗುತ್ತದೆ ಎಂಬುದು ಕಾಂಗ್ರೆಸ್‌ನ ಮೊಂಡು ವಾದವಾಗಿದೆ. ಪದೇ ಪದೇ ದಕ್ಷಿಣ ಭಾರತ, ಉತ್ತರ ಭಾರತ ಎಂದೆಣಿಸುತ್ತ, ಈಗ ಡಿಲಿಮಿಟೇಷನ್ ವಿಚಾರದಲ್ಲೂ ಅದೇ ವರ್ತನೆ ತೋರುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಮಸ್ಯೆ ಇದ್ದದ್ದೇ ನಿಜವಾದರೆ, ಬಿಬಿಎಂಪಿಯನ್ನೇಕೆ ಡಿಲಿಮಿಟೇಷನ್ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಅಲ್ಲದೆ, 2011ರ ಜನಗಣತಿ ಆಧಾರಿತವಾಗಿ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಶೇ. 33ರ ಮಹಿಳಾ ಮೀಸಲಾತಿ ಎರಡನ್ನೂ ಕೇಂದ್ರ ಸರ್ಕಾರ ಒಟ್ಟೊಟ್ಟಿಗೆ ತೆಗೆದುಕೊಂಡಿದೆ. ಆದರೆ, ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಂಡ ಭಯದಲ್ಲಿ ವಿರೋಧಿಸುತ್ತಿದೆ ಎಂದು ಆರೋಪಿಸಿದರು.

ಲೋಕಸಭೆ ಸ್ಥಾನಗಳು 543 ಇರಲಿ, 850 ಆಗಲಿ ಮತದಾರರು ಮಾತ್ರ ಅವರೇ ಇರುತ್ತಾರೆ. ಒಂದೊಂದು ಕ್ಷೇತ್ರದಲ್ಲಿ 40-50 ಲಕ್ಷ ಮತದಾರರಿದ್ದಾರೆ. ಇಷ್ಟು ಜನಸಂಖ್ಯೆಗೆ ಒಬ್ಬ ಸಂಸದರು ಎಲ್ಲರನ್ನೂ ತಲುಪಲು ಸಾಧ್ಯವಿಲ್ಲ. ಕಾಂಗ್ರೆಸ್ ಇದರ ಅರಿವಿಲ್ಲವೆ. ಇದೇನು ಹೊಸ ವಿಷಯವಲ್ಲ. ನಾಲ್ಕು ದಶಕದಿಂದ ಚರ್ಚೆಯಲ್ಲಿದ್ದ ವಿಷಯ. ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮೊದಲ ಪ್ರಯತ್ನ ನಡೆಯಿತು. ಆಗಲೂ ಬಿಜೆಪಿ ಬೆಂಬಲವಿತ್ತು. ಆಗ ಕಾಂಗ್ರೆಸ್ ಈ ವಿಧೇಯಕವನ್ನು ವಿರೋಧಿಸಿತು. ಆನಂತರ ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆ ಪಾಸಾಯಿತು. ಬಿಜೆಪಿಯಿಂದ ಬೆಂಬಲವೂ ದೊರೆತಿತ್ತು. ಆದರೆ, ವಿಧೇಯಕವನ್ನು ಲೋಕಸಭೆಗೆ ತರಲೇ ಇಲ್ಲ. ಹೀಗಾಗಿ ಕಾಂಗ್ರೆಸ್ ಸತತವಾಗಿ ಮಹಿಳೆಯರಿಗೆ ದ್ರೋಹ ಮಾಡುತ್ತಲೇ ಬಂದಿದೆ ಎಂದು ಕಿಡಿ ಕಾರಿದರು.

ಶೇ. 33ರಷ್ಟು ಮೀಸಲಾತಿಗೆ ಸಂಬಂಧಿಸಿದಂತೆ ಮಹಿಳಾ ಜಾಗೃತಿ ಉಂಟು ಮಾಡುತ್ತಿದ್ದೇವೆ. ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಯುತ್ತಿದೆ. ವಿಶೇಷ ಅವಕಾಶ ನೀಡಲು, ಮೀಸಲಾತಿ ಅವಶ್ಯ. ಡಿಲಿಮಿಟೇಷನ್ ಏನೇ ಆದರೂ ಕಾಂಗ್ರೆಸ್ ಸೋಲುವುದು ಖಚಿತ ಎಂದು ಜೋಶಿ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮೇಯರ್ ಜ್ಯೋತಿ ಪಾಟೀಲ, ಜಿಲ್ಲಾ ಅಧ್ಯಕ್ಷೆ ಸೀಮಾ ಲದ್ವಾ, ಅಕ್ಕಮ್ಮ ಹೆಗಡೆ, ಉಮಾ, ನಾಗರತ್ನ ಬಳ್ಳಾರಿ, ಶಾಂತಾ ನಿರವಣಿ ಸೇರಿದಂತೆ ಹಲವರಿದ್ದರು.

ಬಾಕ್ಸ್...

ಖರ್ಗೆ ಹೇಳಿಕೆಗೆ ಖಂಡನೆ:

ಮಲ್ಲಿಕಾರ್ಜುನ ಖರ್ಗೆ ತಮ್ಮ ಇಡೀ ರಾಜಕೀಯ ಜೀವನವನ್ನೇ ವಿಧಾನಸಭೆ, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಕಳೆದಿದ್ದಾರೆ. ಹೀಗಿದ್ದರೂ ತೀರ ಕೆಳಮಟ್ಟಕ್ಕಿಳಿದಿರುವ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಇಂತಹ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದರು,

25ಎಚ್‌ಯುಬಿ24

ಪ್ರಹ್ಲಾದ ಜೋಶಿ.