ರಾಜ್ಯ ಹೆದ್ದಾರಿ ಮರುಡಾಂಬರೀಕರಣ ಕಾಮಗಾರಿಯನ್ನು ಮುಂಗಾರು ಮಳೆ ಆರಂಭ ಆಗುವುದರೊಳಗೇ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಮಾಡಿ ಮುಗಿಸಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಗುತ್ತಿಗೆದಾರರಿಗೆ ತಾಕೀತು ಮಾಡಿದ್ದಾರೆ.

- ಚೀಲೂರಿನಲ್ಲಿ ₹9.75 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಶಾಂತನಗೌಡ ಸಲಹೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯ ಹೆದ್ದಾರಿ ಮರುಡಾಂಬರೀಕರಣ ಕಾಮಗಾರಿಯನ್ನು ಮುಂಗಾರು ಮಳೆ ಆರಂಭ ಆಗುವುದರೊಳಗೇ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಯನ್ನು ಮಾಡಿ ಮುಗಿಸಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಗುತ್ತಿಗೆದಾರರಿಗೆ ತಾಕೀತು ಮಾಡಿದರು.

ತಾಲೂಕಿನ ಚೀಲೂರು ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ₹9.75 ಕೋಟಿ ವೆಚ್ಚದಲ್ಲಿ ಮರಿಯಮ್ಮನಹಳ್ಳಿಯಿಂದ ಶಿವಮೊಗ್ಗ ರಾಜ್ಯ ಹೆದ್ದಾರಿ ರಸ್ತೆ ಮಾರ್ಗದಲ್ಲಿ ಬರುವ ಚೀಲೂರಿನಿಂದ ಹೊನ್ನಾಳಿ ಕನಕ ವೃತ್ತದವರೆಗೆ ಮರು ಡಾಂಬರೀಕರಣ ಕಾಮಗಾರಿಗೆ ಗುರುವಾರ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯ ಹೆದ್ದಾರಿ ಈ ಹಿಂದೆ ಶಿವಮೊಗ್ಗ ಗಡಿಭಾಗದಿಂದ ಹೊನ್ನಾಳಿವರೆಗಿನ ರಸ್ತೆ ಹಾಳಾಗಿ ಗುಂಡಿಗಳು ಬಿದ್ದಿದ್ದವು. ಸಾರ್ವಜನಿಕರು, ಪ್ರಯಾಣಿಕರು, ಚೀಲೂರು ಗ್ರಾಮಸ್ಥರು ಉತ್ತಮ ರಸ್ತೆ ಮಾಡಿಸಿ ಎಂದು ಹೇಳಿ ಮನವಿ ಮಾಡಿಕೊಳ್ಳುತ್ತಿದ್ದರು, ಈಗಾಗಲೇ ರಸ್ತೆ ಗುಂಡಿಗಳಿಗೆ ಪ್ಯಾಚ್‌ ವರ್ಕ್ ಮುಗಿದಿದೆ ಮೇ ತಿಂಗಳು ಕೊನೆ ವಾರದೊಳೊಗೆ ಗುಣಮಟ್ಟದ ಮರುಡಾಂಬರೀಕರಣ ಮಾಡಿಸುವುದಾಗಿ ಜನತೆಗೆ ಭರವಸೆ ನೀಡಿದರು.

ತಾಲೂಕಿನ ಟಿ.ಜಿ.ಹಳ್ಳಿಯಿಂದ ಚೀಲೂರು ಮುಸ್ಲಿಂ ಕೇರಿವರೆಗೆ ₹5 ಕೋಟಿ ವೆಚ್ಚದಲ್ಲಿ ಗುಣಮಟ್ಟದ ರಸ್ತೆ ಡಾಂಬರೀಕರಣ ಕಾಮಗಾರಿ ಮುಗಿದಿದೆ. ಚೀಲೂರು ಎ.ಕೆ. ಕಾಲೋನಿಯ ಜನರ ಮನವಿ ಮೇರೆಗೆ ₹40 ಲಕ್ಷ ವೆಚ್ಚದ ಹೊಳೆಮಟ್ಟಿಲು ನಿರ್ಮಾಣ ಕಾಮಗಾರಿ ಮುಗಿದಿದೆ. ಬಹುದಿನಗಳಿಂದ ಬೇಡಿಕೆಯಿದ್ದ ಚೀಲೂರು ಸರ್ಕಲ್‌ನಲ್ಲಿ ಬಸ್ ತಂಗುದಾಣ ಇಲ್ಲದೇ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು. ₹20 ಲಕ್ಷ ವೆಚ್ಚದಲ್ಲಿ ನೂತನ ಬಸ್‌ ತಂಗುದಾಣ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.

ಚೀಲೂರು ಆಟೋ ಚಾಲಕರ ಮನವಿ ಮೇರೆಗೆ ರಸ್ತೆ ಪಕ್ಕ ಗುಣಮಟ್ಟದ ಚರಂಡಿ ಕಾಮಗಾರಿ ಮಾಡಿಸಿಕೊಡಿ, ಚರಂಡಿ ಮೇಲೆ ಕಾಂಕ್ರೀಟ್ ಹಾಕಿಸಿದರೆ ಆ ಜಾಗದಲ್ಲಿ ಆಟೋಗಳನ್ನು ನಿಲ್ಲಿಕೊಳ್ಳುತ್ತೆವೆ ಎಂಬ ಮನವಿಗೆ ಸ್ಪಂದಿಸಿ ಶಾಸಕರು ಭರವಸೆ ಈಡೇರಿಸುವುದಾಗಿ ಹೇಳಿದರು.

ಚಿತ್ರದುರ್ಗ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಶಿವಮೊಗ್ಗ ಹರಿಹರ ರಾಜ್ಯ ಹೆದ್ದಾರಿಗೆ ಶಾಸಕ ಡಿ.ಜಿ.ಶಾಂತನಗೌಡ ₹25 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಿಸಿಕೊಡಲಿದ್ದಾರೆ. ರಾಜ್ಯ ಸರ್ಕಾರ ಗೊಂದಲದಲ್ಲಿದೆ ಎಂದು ಹೊನ್ನಾಳಿ ಮಾಜಿ ಶಾಸಕ ರೇಣುಕಾಚಾರ್ಯ ಪತ್ರಿಕೆಯಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡೇರಿ ವಿಶ್ವನಾಥ ಮಾತನಾಡಿ, ಚೀಲೂರು ಭಾಗಗಳ ಹಳ್ಳಿಗಳ ಸಮಸ್ಯೆ ಬಗ್ಗೆ ಶಾಸಕ ಶಾಂತನಗೌಡ ಅವರಿಗೆ ತಿಳಿಸಿದರು. ಕಾಂಗ್ರೆಸ್ ಮುಖಂಡ ಅಬ್ದುಲ್‌ ವಾಜೀದ್ ಮಾತನಾಡಿದರು.

ಈ ಸಂದರ್ಭ ತಾಪಂ ಮಾಜಿ ಅಧ್ಯಕ್ಷ ವಸಂತ ನಾಯ್ಕ, ಚೀಲೂರು ಗ್ರಾಮದ ಚಂದ್ರಪ್ಪ ಜಯಪ್ಪ, ಲೋಕೋಪಯೋಗಿ ಇಲಾಖೆ ಎಇಇ ಕಣುಮಪ್ಪ, ಪಿಡಿಒ ಆಶಾ, ಗ್ರಾಪಂ ಮಾಜಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಇದ್ದರು.

- - -

-24ಎಚ್.ಎಲ್.ಐ3:

ರಸ್ತೆ ಮರು ಡಾಂಬರೀಕರಣ ಕಾಮಗಾರಿಗೆ ಶಾಸಕ ಡಿ.ಜಿ.ಶಾಂತನಗೌಡ ಗುದ್ದಲಿ ಪೂಜೆ ನೆರವೇರಿಸಿದರು.