ಮನರೇಗಾ ಯೋಜನೆ ಹೆಸರಿನಲ್ಲಿ ನಡೆಯುತ್ತಿದ್ದ ಭಾರಿ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಿ ಸುಧಾರಣೆ ಮಾಡಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಎನ್‌ಡಿಎ ನೇತೃತ್ವದ ಸರ್ಕಾರವು ತಂದಿದೆ.
ಕನ್ನಡಪ್ರಭ ವಾರ್ತೆ ಕೋಲಾರಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸಿರುವುದನ್ನೆ ಕಾಂಗ್ರೆಸ್ ಪಕ್ಷವು ಬಂಡಾವಳ ಮಾಡಿಕೊಂಡು ರಾಷ್ಟ್ರದಲ್ಲಿ ದೊಡ್ಡ ಆಂದೋಲನ ಹುಟ್ಟು ಹಾಕುವ ಪ್ರಯತ್ನ ಮಾಡುತ್ತಿರುವುದು ಹಾಸ್ಯಸ್ಪದವಾಗಿದೆ, ಕಾಂಗ್ರೆಸ್ ಪಕ್ಷದವರಿಗೆ ಬಿಜೆಪಿ ವಿರುದ್ಧ ಹೋರಾಟ ಮಾಡಲು ಬೇರೆ ಯಾವುದೇ ವಿಷಯಗಳಿಲ್ಲದೆ ಇದನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗವಾಡಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ಮನರೇಗಾ ಯೋಜನೆ ಹೆಸರಿನಲ್ಲಿ ನಡೆಯುತ್ತಿದ್ದ ಭಾರಿ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಿ ಸುಧಾರಣೆ ಮಾಡಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಎನ್‌ಡಿಎ ನೇತೃತ್ವದ ಸರ್ಕಾರವು ತಂದಿದೆ ಎಂದರು.2047ರ ವಿಕಸಿತ ಭಾರತದ ಗುರಿ ತಲುಪಲು ಪೂರಕವಾಗಿದೆ, ಕಳೆದ 2005ರ ಮೂಲ ನರೇಗಾ ಕಾಯ್ದೆ ಈಗಿನ ಕಾಲಕ್ಕೆ ತಕ್ಕಂತೆ ಹಲವಾರು ಸುಧಾರಣೆಗಳನ್ನು ಮಾಡುವುದು ಅನಿವಾರ್ಯವಾಗಿತ್ತು, ಯುಪಿಎ ಆಡಳಿತಾವಧಿಯಲ್ಲಿ ಈ ಯೋಜನೆಯಡಿ ಸಾಕಷ್ಟು ಭ್ರಷ್ಟಾಚಾರಗಳಿಗೆ ಎಡೆ ಮಾಡಿಕೊಟ್ಟಿತ್ತು. ರಾಜಕೀಯದ ಹಸ್ತಕ್ಷೇಪವು ನಡೆಯುತ್ತಿತ್ತು. ಅಧಿಕಾರ ವಿಕೇಂದ್ರೀಕರಣ ಎಂಬುವುದು ಹೆಸರಿಗೆ ಮಾತ್ರ ಸೀಮಿತವಾಗಿತ್ತು, ರಾಜಕೀಯದ ತೀರ್ಮಾನಗಳೇ ಹೆಚ್ಚಾಗಿದ್ದವು ಎಂಬುವುದನ್ನು ಸಿ.ಎ.ಜಿ ವರದಿಗಳೇ ಸ್ಪಷ್ಟ ಪಡಿಸಿತ್ತು ಎಂದು ಹೇಳಿದರು.ಸುಧಾರಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ದುಡಿಯುವವರಿಗೆ ಕೆಲಸಗಳೇನೂ ಬದಲಾಗಿಲ್ಲ. ಅಭಿವೃದ್ದಿಪಡಿಸಿ ಸೋರಿಕೆಗಳಿಗೆ ಕಡಿವಾಣ ಹಾಕಿದೆ, ಮನರೇಗಾದಲ್ಲಿ 100 ದಿನದ ಕೆಲಸ ಇರುವುದನ್ನು 125 ದಿನಕ್ಕೆ ಏರಿಕೆ ಮಾಡಿದೆ, ಪರಿಶಿಷ್ಟ ವರ್ಗದವರಿಗೆ 150 ದಿನಗಳಿಗೆ ಹೆಚ್ಚಿಸಲಾಗಿದೆ, ಕೂಲಿ 340 ರು. ಇರುವುದನ್ನು 370 ರು.ಗಳಿಗೆ ಏರಿಕೆ ಮಾಡಿದೆ. 3-4 ಕಳೆದರೂ ಹಣ ಪಾವತಿಯಾಗದೆ ಇರುವುದನ್ನು 14 ದಿನದ ಒಳಗೆ ಪಾವತಿಸಬೇಕೆಂದು ಸೂಚಿಸಿದೆ. 15 ವರ್ಷದಿಂದ 80 ವರ್ಷದವರೆಗೆ ಕೂಲಿ ಮಾಡಲು ಅವಕಾಶ ಕಲ್ಪಿಸಿದೆ. ಗ್ರಾಪಂಗಳಲ್ಲಿ ಈ ಹಿಂದೆ ಮಾನವ ಕೆಲಸ ಬದಲಾಗಿ ಯಂತ್ರಗಳ ಮೂಲಕ ಮಾಡಿಸಲು ಗುತ್ತಿಗೆ ನೀಡಿ ವಂಚಿಸುವುದಕ್ಕೆ ಕಡಿವಾಣ ಹಾಕಲಾಗಿದೆ. ಜಾಬ್ ಕಾರ್ಡುಗಳೆಲ್ಲಾ ಗುತ್ತಿಗೆದಾರರ ಬಳಿ ಇದ್ದು ಅವರೇ ಬಿಲ್‌ಗಳನ್ನು ಡ್ರಾ ಮಾಡುತ್ತಿದ್ದರು ಅದಕ್ಕೆ ಕಡಿವಾಣ ಹಾಕಿ ನೇರವಾಗಿ ಕೊಲಿಯಾಳುಗಳ ಖಾತೆಗೆ ಜಮೆ ಅಗುವಂತೆ ಮಾಡಲಾಗಿದೆ ಎಂದು ತಿಳಿಸಿದರು. ಈ ಯೋಜನೆ ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುತ್ತಿತ್ತು, ರಾಜ್ಯ ಸರ್ಕಾರಗಳು ಈ ಯೋಜನೆ ಸದ್ಬಳಿಸಿಕೊಳ್ಳುವಲ್ಲಿ ವಿಫಲವಾಗಿದ್ದವು. ಈ ಹಣವನ್ನು ಸಾವಿರಾರು ಅಧಿಕಾರಿಗಳು ಲೂಟಿ ಮಾಡಿ ಎಷ್ಟು ಮಂದಿ ಅಮಾನತು ಆಗಿರುವುದುಂಟು, ಬಡಜನತೆಗೆ ಜೀವನ ರೂಪಿಸಿಕೊಳ್ಳಲು ವಿಶೇಷ ಯೋಜನೆಯ ಉದ್ದೇಶವಾಗಿತ್ತು, ಯಂತ್ರಗಳ ಮೂಲಕ ಮಾಡಿಸದೆ ಮಾನವರಿಂದಲೇ ಮಾಡಿಸಬೇಕೆಂದು ಸೂಚಿಸಲಾಗಿದೆ, ಹೆಬ್ಬೆಟ್ಟು ಒತ್ತಿದರೆ ಅವರ ಖಾತೆಗೆ ಜಮೆಯಾಗುವಂತೆ ಮಾಡಲಾಗಿದೆ, ಕಾಂಗ್ರೆಸ್ ಪಕ್ಷದವರಿಗೆ ಯಾವುದೇ ಹೊಣೆಗಾರಿಕೆ ಇರಲಿಲ್ಲ, ಈಗ ಶೇ. 60:40 ಮಾಡಿರುವುದರಿಂದ ಹೊಣೆಗಾರಿಕೆ ಬರಲಿದೆ ಎಂದರು.ನಾನು ಸಿಎಂರನ್ನು ಕೇಳುವ ಪ್ರಶ್ನೆಯೆಂದರೆ ದೇಶದಲ್ಲಿ ಇರುವುದು ಮಹಾತ್ಮಗಾಂಧಿ ಒಬ್ಬರೇ ಆದರೆ ಸ್ವಾತಂತ್ರ್ಯದ ನಂತರ ನಕಲಿ ಗಾಂಧಿಗಳು ಹೇಗೆ ಸೃಷ್ಠಿಯಾಯಿತು. ನೆಹರು ಮಗಳಾದ ಇಂದಿರಾಗೆ ಜೊತೆಗೆ ಗಾಂಧಿ ಹೆಸರು ಹೇಗೆ ಸೇರ್ಪಡೆ ಆಯಿತು. ಇಂದಿರಾ ಅವರ ಪತಿ ಫಿರೋಜ್ ಖಾನ್ ಆಗಿದ್ದು ಇಂದಿರಾ ಖಾನ್ ಎಂದು ಇರಬೇಕಾಗಿತ್ತು, ಆದರೆ ಇಂದಿರಾ ಗಾಂಧಿ ಎಂದು ಹೇಗೆ ಬಂದಿತ್ತು ಎಂಬುವುದು ನನಗೆ ಯಕ್ಷ ಪ್ರಶ್ನೆಯಾಗಿ ಕಾಡಿದೆ, ನೆಹರು ಕುಟುಂಬಕ್ಕೂ ಗಾಂಧಿ ಹೆಸರಿಗೂ ಏನು ಸಂಬಂಧ ಎಂದು ವ್ಯಂಗವಾಡಿದ ಅವರು, ಕಾಂಗ್ರೆಸ್ ಪಕ್ಷವು ಗಾಂಧಿಜೀ ಜನ್ಮದಿನ ಮತ್ತು ಪುಣ್ಯಸ್ಮರಣೆ ಎರಡು ದಿನಗಳನ್ನು ಆಚರಣೆ ಮಾಡಲು ಮಾತ್ರ ಮೀಸಲಾಗಿದೆ ಹೊರತಾಗಿ ಗಾಂಧಿಜೀ ತತ್ವಾದರ್ಶ ಮಾರ್ಗದರ್ಶನಗಳು ಯಾವುದೂ ಬೇಕಾಗಿಲ್ಲ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ, ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಜಿ.ಪಂ ಮಾಜಿ ಸದಸ್ಯ ಬಿ.ವಿ.ಮಹೇಶ್, ನಗರಸಭೆ ಮಾಜಿ ಸದಸ್ಯ ಪ್ರವೀಣ್‌ಗೌಡ, ಕೂಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ಮುಖಂಡರಾದ ಕಾಡುಗುರು ನಾಗಭೂಷಣ್, ರೋಣೂರು ಚಂದ್ರು, ಕಪಾಲಿ ಶಂಕರ್, ಗುಂಜೂರು ಶ್ರೀನಿವಾಸರೆಡ್ಡಿ, ಸಿ.ಡಿ.ರಾಮಚಂದ್ರ, ಕೆಂಬೋಡಿ ನಾರಾಯಣಸ್ವಾಮಿ, ಶಿಳ್ಳಂಗೆರೆ ಮಹೇಶ್, ರಾಜೇಶ್ ಸಿಂಗ್, ಲೋಕೇಶ್, ತಿಮ್ಮರಾಯಪ್ಪ, ವಕೀಲ ಮಂಜುನಾಥ್, ಅರುಣಮ್ಮ, ಮಮತಮ್ಮ, ಪದ್ಮ, ಸುಮ ಇದ್ದರು.