ಕಾಂಗ್ರೆಸ್ ಹಗರಣಗಳ ಸರ್ಕಾರ: ಸುನೀಲ್‌ಕುಮಾರ

| Published : Sep 15 2024, 01:47 AM IST

ಸಾರಾಂಶ

ಹಗರಣಗಳ ಮೂಲಕ ಲೋಕಸಭೆ ಚುನಾವಣೆಗಾಗಿ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು ದೇಶದಲ್ಲೇ ಪ್ರಥಮ. ತನಿಖೆಯ ಚಾರ್ಜ್‌ಶೀಟ್‌ನಲ್ಲಿ ಇದು ಬಹಿರಂಗಗೊಂಡಿದೆ ಎಂದು ಬಿಜೆಪಿ ಮುಖಂಡ ಸುನೀಲ್‌ಕುಮಾರ ಹೇಳಿದ್ದಾರೆ.

ಕುಮಟಾ: ರಾಜ್ಯದಲ್ಲಿ ಕಾಂಗ್ರೆಸ್ ಹಗರಣಗಳ ಸರ್ಕಾರವಾಗಿದೆ. ದಿನದಿಂದ ದಿನಕ್ಕೆ ಒಂದಕ್ಕಿಂತ ಒಂದು ದೊಡ್ಡ ಹಗರಣಗಳು ಹೊರ ಬರುತ್ತಿವೆ. ಇದು ರಾಜ್ಯ ಸರ್ಕಾರ ಅಧಿಕಾರ ಹಿಡಿದ ಕೇವಲ ಒಂದೂವರೆ ವರ್ಷದಲ್ಲೇ ಕಂಡಿರುವ ಅಧಃಪತನದ ದ್ಯೋತಕ ಎಂದು ಬಿಜೆಪಿ ಮುಖಂಡ ವಿ. ಸುನೀಲ್‌ಕುಮಾರ ಹೇಳಿದರು.

ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಶನಿವಾರ ಬಿಜೆಪಿ ಸದಸ್ಯತ್ವ ಅಭಿಯಾನದ ಜಿಲ್ಲಾ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದರು. ಹಗರಣಗಳ ಮೂಲಕ ಲೋಕಸಭೆ ಚುನಾವಣೆಗಾಗಿ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದು ದೇಶದಲ್ಲೇ ಪ್ರಥಮ. ತನಿಖೆಯ ಚಾರ್ಜ್‌ಶೀಟ್‌ನಲ್ಲಿ ಇದು ಬಹಿರಂಗಗೊಂಡಿದೆ. ಹೀಗಾಗಿ ಬಳ್ಳಾರಿ ಸಂಸದರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಬಿಜೆಪಿ ದೂರಿದೆ ಎಂದರು.

ಗಣೇಶನ ಹಬ್ಬದ ಬಳಿಕ ನಡೆಯುವ ವಿಸರ್ಜನೆಯ ಕಾಲಕ್ಕೆ ಸರಿಯಾಗಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರ ವಿಸರ್ಜನೆಯೂ ನಡೆಯಲಿದೆ. ನಾವು ಯಾವತ್ತೂ ಸರ್ಕಾರದ ವಿಸರ್ಜನೆ ಕೇಳಿಲ್ಲ, ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶವೂ ಇಲ್ಲ. ಸರ್ಕಾರ ಪೂರ್ಣ ೫ ವರ್ಷ ಅಧಿಕಾರ ನಡೆಸಲಿ, ಆದರೆ ಬಯಲಿಗೆ ಬಂದಿರುವ ಹಗರಣಗಳ ಹೊಣೆ ಹೊತ್ತು ನೇರವಾಗಿ ಮುಖ್ಯಮಂತ್ರಿ ಸ್ಥಾನದಿಂದ ಸಿದ್ಧರಾಮಯ್ಯ ರಾಜೀನಾಮೆ ಕೇಳಿದ್ದೇವೆ. ತಪ್ಪಿತಸ್ಥರಿಗೆ ಶಿಕ್ಷೆ ಕೇಳಿದ್ದೇವೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಸರಣಿ ಹೋರಾಟ ಮಾಡಿದ್ದೇವೆ. ಗ್ಯಾರಂಟಿಗಳ ಹೊಂದಾಣಿಕೆಯ ಕಾರಣಕ್ಕೆ ಅಭಿವೃದ್ಧಿ ಕಾರ್ಯಗಳೇ ಇಲ್ಲದಂತಾಗಿದೆ. ಸರ್ಕಾರದ ಜನವಿರೋಧಿ ನೀತಿ ಮತ್ತು ಆಡಳಿತ ವೈಫಲ್ಯ ವಿರುದ್ಧ ಅಕ್ಟೋಬರ್‌ನಲ್ಲಿ ದೊಡ್ಡ ಅಭಿಯಾನ ಮಾಡಲಿದ್ದೇವೆ ಎಂದರು.

ಕಸ್ತೂರಿ ರಂಗನ್ ವರದಿ ಜಾರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ತರಾತುರಿ ಮಾಡುತ್ತಿದೆ. ಜನಜೀವನ ಹಾಗೂ ಪರಿಸರಕ್ಕೆ ಹಾನಿಯಾಗದಂಥ ನಿಲುವನ್ನು ಸರ್ಕಾರ ತೆಗೆದುಕೊಳ್ಳಬೇಕು. ವರದಿ ಜಾರಿಗೆ ಮುನ್ನ ಗ್ರಾಮಮಟ್ಟದಲ್ಲೂ ಸಾಧಕ-ಬಾಧಕಗಳ ಕುರಿತು ಸಂವಾದಗಳಾಗಲಿ ಎಂದರು.

ಸದಸ್ಯತ್ವ ಅಭಿಯಾನದ ಮೂಲಕ ರಾಜ್ಯದಲ್ಲಿ ಕನಿಷ್ಠ ೧.೫ ಕೋಟಿ ಹೊಸ ಸದಸ್ಯತ್ವ ಸಾಧಿಸುವ ಗುರಿ ಹೊಂದಲಾಗಿದೆ. ಪ್ರತಿ ೩ ವರ್ಷಕ್ಕೊಮ್ಮೆ ಸದಸ್ಯತ್ವ ಅಭಿಯಾನ, ಕಾಲಕಾಲಕ್ಕೆ ಪದಾಧಿಕಾರಿಗಳ ನೇಮಕ ಮುಂತಾದ ಶಿಸ್ತನ್ನು ಕೇವಲ ಬಿಜೆಪಿಯಲ್ಲಿ ಮಾತ್ರ ಕಾಣಬಹುದು. ಆಂತರಿಕ ಪ್ರಜಾಪ್ರಭುತ್ವದ ಮೂಲಕ ಪಕ್ಷ ಮುನ್ನಡೆಸಲಾಗುತ್ತಿದ್ದು ಸಂಘಟನೆ, ಒಗ್ಗಟ್ಟು ಸಾಧಿಸಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಯಶಸ್ವಿ ಅಭಿಯಾನದ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹೊಸ ಸದಸ್ಯರ ನೋಂದಣಿಯಾಗಲಿ ಎಂದರು.

ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಜಿಲ್ಲೆಯಲ್ಲಿ ಈ ಹಿಂದೆ ಸದಸ್ಯತ್ವ ಅಭಿಯಾನದಡಿ ೨೦೧೮ರಲ್ಲಿ ೧.೨೦ ಲಕ್ಷ ಹಾಗೂ ೨೦೧೯ರಲ್ಲಿ ೧.೮೦ ಲಕ್ಷ ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿತ್ತು. ಈ ಬಾರಿ ಕನಿಷ್ಠ ೪ ಲಕ್ಷ ಸದಸ್ಯರ ಸೇರ್ಪಡೆಯ ಗುರಿ ಹೊಂದಲಾಗಿದೆ. ಇದಕ್ಕಾಗಿ ಮಹಾಶಕ್ತಿ ಕೇಂದ್ರಗಳು, ಶಕ್ತಿಕೇಂದ್ರಗಳು, ಬೂತ್ ಮಟ್ಟದಲ್ಲಿ ಸದಸ್ಯತಾ ಸಹಕಾರಿಗಳನ್ನು ನಿಯೋಜಿಸಲಾಗಿದೆ. ಸದಸ್ಯತ್ವ ಅಭಿಯಾನಕ್ಕೆ ವೇಗ ಮತ್ತು ಶಕ್ತಿ ತುಂಬುವುದೇ ಸಭೆಯ ಉದ್ದೇಶ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ, ಶಾಸಕ ದಿನಕರ ಶೆಟ್ಟಿ, ಹಳಿಯಾಳದ ಸುನೀಲ ಹೆಗಡೆ, ಭಟ್ಕಳದ ಸುನೀಲ ನಾಯ್ಕ, ಗಿರೀಶ ಪಾಟೀಲ, ಪದಾಧಿಕಾರಿಗಳಾದ ಕುಬೇರಪ್ಪ, ಕೆ.ಜಿ. ನಾಯ್ಕ, ಎಂ.ಜಿ. ನಾಯ್ಕ, ಹರಿಪ್ರಕಾಶ ಕೋಣೆಮನೆ, ಪ್ರಶಾಂತ ನಾಯ್ಕ, ವೆಂಕಟೇಶ ನಾಯಕ ಇನ್ನಿತರರು ಇದ್ದರು. ಗುರುಪ್ರಸಾದ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಮಂಡಲಾಧ್ಯಕ್ಷ ಜಿ.ಐ. ಹೆಗಡೆ ನಿರ್ವಹಿಸಿದರು.