25 ದಂಪತಿಗಳ ಸಂಸಾರ ಕೊಂಡಿ ಬೆಸೆದ ರಾಷ್ಟ್ರೀಯ ಲೋಕ್‌ ಅದಾಲತ್‌

| Published : Sep 15 2024, 01:47 AM IST

ಸಾರಾಂಶ

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ ಶನಿವಾರ ಒಟ್ಟು 7042 ಜಾರಿ ಪ್ರಕರಣ ಮುಕ್ತಾಯಗೊಂಡಿದ್ದು, ₹11,48,01,784 ಪರಿಹಾರವಾಗಿದೆ. 1,46,135 ವ್ಯಾಜ್ಯ ಪೂರ್ವ ಪ್ರಕರಣ ಮುಕ್ತಾಯವಾಗಿದ್ದು, ₹61,38,221 ಪರಿಹಾರವಾಗಿ ರಾಜಿ ಮೂಲಕ ಮುಕ್ತಾಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 25 ಜೋಡಿ ಗಂಡ-ಹೆಂಡತಿ ವಿವಿಧ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದವರು ಸಹ ರಾಜಿ ಮೂಲಕ ಒಂದಾಗಿದ್ದಾರೆ.

- ಆಪ್ತಮಿತ್ರರ ನಿವೇಶನ ವ್ಯಾಜ್ಯ ಸುಖಾಂತಗೊಳಿಸಿದ ನ್ಯಾಯಾಧೀಶರು

- - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಲೋಕ್ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ ಶನಿವಾರ ಒಟ್ಟು 7042 ಜಾರಿ ಪ್ರಕರಣ ಮುಕ್ತಾಯಗೊಂಡಿದ್ದು, ₹11,48,01,784 ಪರಿಹಾರವಾಗಿದೆ. 1,46,135 ವ್ಯಾಜ್ಯ ಪೂರ್ವ ಪ್ರಕರಣ ಮುಕ್ತಾಯವಾಗಿದ್ದು, ₹61,38,221 ಪರಿಹಾರವಾಗಿ ರಾಜಿ ಮೂಲಕ ಮುಕ್ತಾಯವಾಗಿದೆ. ಜಿಲ್ಲೆಯಲ್ಲಿ ಒಟ್ಟು 25 ಜೋಡಿ ಗಂಡ-ಹೆಂಡತಿ ವಿವಿಧ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ್ದವರು ಸಹ ರಾಜಿ ಮೂಲಕ ಒಂದಾಗಿದ್ದಾರೆ!

ದಾವಣಗೆರೆ ಜಿಲ್ಲಾ ನ್ಯಾಯಾಲಯದ ಲೋಕ್ ಅದಾಲತ್ ಕಾರ್ಯಕ್ರಮ ಹಲವಾರು ಭಾವನಾತ್ಮಕ ಘಟನೆಗಳಿಗೆ, ಕಳಚಿಕೊಳ್ಳುತ್ತಿದ್ದ ಸ್ನೇಹ, ವಿಶ್ವಾಸ ಮತ್ತೆ ಬೆಸೆಯಲು ವೇದಿಕೆಯಾಗಿಯಿತು.

ಎಚ್.ಎಸ್. ತಿಪ್ಪೇಸ್ವಾಮಿ, ಧನರಾಜ ಏಕಬೋಟೆ ಗೆಳೆತನಕ್ಕೆ ಹಗೆತನವಿರಲಿಲ್ಲ. 2008ರಲ್ಲಿ ಧನರಾಜ ಇಲ್ಲಿನ ಕುವೆಂಪು ನಗರದಲ್ಲಿ 47*40 ಅಡಿ ವಿಸ್ತೀರ್ಣದ ನಿವೇಶನ ಖರೀದಿಸಿದ್ದರು. ಅದೇ ಬಡಾವಣೆಯ ತಿಪ್ಪೇಸ್ವಾಮಿ ಸಹ 2010ರಲ್ಲಿ 30*40 ಅಳತೆ ನಿವೇಶನ ಖರೀದಿಸಿದರು. ಸಣ್ಣಪುಟ್ಟ ಹೋಟೆಲ್, ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರಿಗೆ ಮನೆ ಕಟ್ಟಲೆಂದು ಹೋದಾಗ ಇಬ್ಬರ ನಿವೇಶನಗಳ ಅಗಲ 77 ಇರಬೇಕಾಗಿದ್ದುದು ಕೇವಲ 41 ಅಡಿ ಮಾತ್ರ ಉಳಿದು, 26 ಅಡಿ ಅಗಲದ ನಿವೇಶನ ಮಂಗಮಾಯವಾಗಿತ್ತು. ಇದರಿಂದ ಎರಡೂ ಕುಟುಂಬಗಳಲ್ಲೂ ತಳಮಳ ಉಂಟಾಯಿತು. 2010ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಬೇಕಾಯಿತು. ಅಲ್ಲಿವರೆಗೂ ಆಪ್ತಮಿತ್ರರಂತಿದ್ದ ಇಬ್ಬರೂ ನ್ಯಾಯಾಲಯದ ಮುಂದೆ ವಾದಿ-ಪ್ರತಿವಾದಿಗಳಾಗಿ ನಿಲ್ಲಬೇಕಾಯಿತು.

ಪ್ರಧಾನ ಜಿಲ್ಲಾ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಈ ಪ್ರಕರಣವನ್ನು ಲೋಕ್ ಅದಾಲತ್‌ನಲ್ಲಿ ಬಗೆಹರಿಸಲು ವಿಶೇಷ ಆಸಕ್ತಿ ವಹಿಸಿದರು. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಮಹಾವೀರ ಕರೆಣ್ಣವರ ಪಕ್ಷಗಾರರನ್ನು ಮತ್ತು ವಕೀಲರನ್ನು ಸಂಪರ್ಕಿಸಿ, ನ್ಯಾಯಾಧೀಶರ ಮುಂದೆ ಕರೆ ತರುವಲ್ಲಿ ಶ್ರಮಿಸಿದರು. ಪ್ರಕರಣದ ಹಿರಿಯ ವಕೀಲರಾದ ಜೆ.ಎನ್.ವಸಂತಕುಮಾರ, ಪ್ರಕಾಶ ಪಾಟೀಲರು ಪ್ರಕರಣವನ್ನು ಸುಖಾಂತ್ಯಗೊಳಿಸಲು ಶ್ರಮಿಸಿದರು.

ಲೋಕ್‌ ಅದಾಲತ್ ಪ್ರಕ್ರಿಯೆಯ ಮಹತ್ವ ಅರಿತಿದ್ದರೆ 2010ರಲ್ಲೇ ಪರಿಹರಿಸಿಕೊಳ್ಳುತ್ತಿದ್ದೆವು. 2024ರವೆಗೂ ಸುದೀರ್ಘ 14 ವರ್ಷ ವನವಾಸ, ಅಜ್ಞಾತವಾಸ ಅನುಭವಿಸುತ್ತಿರಲಿಲ್ಲ ಎಂದು ಪ್ರಕರಣದಲ್ಲಿ ರಾಜಿಯಾದ ಧನರಾಜ್ ಮತ್ತು ತಿಪ್ಪೇಸ್ವಾಮಿ ಅಭಿಪ್ರಾಯಿಸಿದರು. ಇಬ್ಬರ ಮಾತುಗಳನ್ನು ಆಲಿಸಿದ ಪ್ರಧಾನ ಜಿಲ್ಲಾ ನ್ಯಾಯಾಧೀಶರು, ಲೋಕ್ ಅದಾಲತ್ತಿನ ಪ್ರಕ್ರಿಯೆಗಳು ಇನ್ನೂ ದೊಡ್ಡ ಪ್ರಮಾಣದಲ್ಲಿ ಜನಮಾನಸ ಮುಟ್ಟಬೇಕಿದೆ ಎಂದು ತಿಳಿಸಿದರು.

ರಾಜಿ ಸಂಧಾನದ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರಾದ ಮಹಾವೀರ ಮಾ.ಕರಣ್ಣವರ, ಸಿದ್ಧರಾಜು, ಮಧ್ಯಸ್ಥಗಾರರಾಗಿ ವಕೀಲರಾದ ಭಾರತಿ, ಕೋರ್ಟ್ ಕಮೀಷನರ್ ಆಗಿ ವಕೀಲರಾದ ವಾದಿರಾಜ ಭಟ್ ಕಾರ್ಯ ನಿರ್ವಹಿಸಿದರು.

- - - -14ಕೆಡಿವಿಜಿ9:

ದಾವಣಗೆರೆ ಜಿಲ್ಲಾ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ನ್ಯಾಯಾಧೀಶರು, ವಕೀಲರು, ನ್ಯಾಯಾಂಗ ಇಲಾಖೆ ಸಿಬ್ಬಂದಿ ಹಾಗೂ ಮತ್ತೆ ಒಂದಾದ ಜೋಡಿಗಳು.