ಬಿಜೆಪಿಯ ಶ್ರೀರಾಮುಲು ಎದುರು ಕಾಂಗ್ರೆಸ್ಸಿನ ತುಕಾರಾಂ ಸ್ಪರ್ಧೆ

| Published : Mar 30 2024, 12:49 AM IST

ಸಾರಾಂಶ

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಶುಕ್ರವಾರ ಘೋಷಣೆ ಮಾಡಿದರು. ಪ್ರಚಾರ ಕಾರ್ಯ ಶುರು ಮಾಡಿಕೊಳ್ಳುವಂತೆ ಪಕ್ಷದ ಹೈಕಮಾಂಡ್ ಸೂಚನೆ ನೀಡಿದ್ದು, ಕ್ಷೇತ್ರದಾದ್ಯಂತ ಮತದಾರ ಭೇಟಿ ಕಾರ್ಯವನ್ನು ತುಕಾರಾಂ ಆರಂಭಿಸಿದ್ದಾರೆ.

ಕೆ.ಎಂ.ಮಂಜುನಾಥ್

ಕನ್ನಡಪ್ರಭ ವಾರ್ತೆ ಬಳ್ಳಾರಿಲೋಕಸಭಾ ಚುನಾವಣೆ ಅಖಾಡಕ್ಕೆ ಸಂಡೂರು ಶಾಸಕ ತುಕಾರಾಂ ಎಂಟ್ರಿ ಕೊಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ವಿರುದ್ಧ ಸೆಣಸಾಡುವ ಕೈ ನಾಯಕ ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಶುಕ್ರವಾರ ಘೋಷಣೆ ಮಾಡಿದರು. ಪ್ರಚಾರ ಕಾರ್ಯ ಶುರು ಮಾಡಿಕೊಳ್ಳುವಂತೆ ಪಕ್ಷದ ಹೈಕಮಾಂಡ್ ಸೂಚನೆ ನೀಡಿದ್ದು, ಕ್ಷೇತ್ರದಾದ್ಯಂತ ಮತದಾರ ಭೇಟಿ ಕಾರ್ಯವನ್ನು ತುಕಾರಾಂ ಆರಂಭಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ಕಾಂಗ್ರೆಸ್ ಪರ ಧ್ವನಿ ಮೊಳಗಲಿದೆ ಎಂಬ ವಿಶ್ವಾಸ ಕಾಂಗ್ರೆಸ್ ನಾಯಕರಲ್ಲಿ ಮೂಡಿದೆ.

ಹೈಕಮಾಂಡ್ ಸೂಚನೆ:

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗೆ ಭಾರೀ ಪೈಪೋಟಿಯಿತ್ತು. ಜಿಲ್ಲಾ ಸಚಿವ ಬಿ.ನಾಗೇಂದ್ರ ಅವರು ಸಹೋದರ ವೆಂಕಟೇಶ್ ಪ್ರಸಾದ್‌ಗೆ ಟಿಕೆಟ್‌ಗಾಗಿ ಪ್ರಯತ್ನಿಸಿದ್ದರು. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಬಿಜೆಪಿ ವಿರುದ್ಧ ಸೆಣಸುವ ಕಾಂಗ್ರೆಸ್ ಅಭ್ಯರ್ಥಿ ನಾನೇ ಎಂಬ ವಿಶ್ವಾಸದಲ್ಲಿದ್ದರು. ಸಂಡೂರು ಶಾಸಕ ತುಕಾರಾಂ ಪುತ್ರಿ ಚೈತನ್ಯಕುಮಾರಿ ಅವರನ್ನು ಲೋಕ ಚುನಾವಣೆ ಅಖಾಡಕ್ಕಿಳಿಸಿ, ರಾಜಕೀಯ ಭವಿಷ್ಯ ರೂಪಿಸುವ ಉತ್ಸುಕದಲ್ಲಿದ್ದರು. ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಪಕ್ಷದ ಹೈಕಮಾಂಡ್ ಹಾಗೂ ಹಿರಿಯ ನಾಯಕರು ತುಕಾರಾಂ ಅವರನ್ನೇ ಅಖಾಡಕ್ಕೆ ಇಳಿಯುವಂತೆ ಸೂಚನೆ ನೀಡಿದ್ದು ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕಾದ ಜವಾಬ್ದಾರಿಯನ್ನು ಜಿಲ್ಲಾ ಸಚಿವರು ಸೇರಿದಂತೆ ಪಕ್ಷದ ಎಲ್ಲ ಶಾಸಕರಿಗೆ ಕಟ್ಟುನಿಟ್ಟಿನ ಕಟ್ಟಪ್ಪಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಮೋದಿ ಅಲೆ-ಗ್ಯಾರಂಟಿ ಯೋಜನೆ ನಡುವೆ ಸ್ಪರ್ಧೆ:

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯು ನರೇಂದ್ರ ಮೋದಿ ಹೆಸರಲ್ಲಿ ಮತಕ್ಕೆ ಮೊರೆ ಇಡುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದ ಪರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಮತ ಪ್ರಚಾರಕ್ಕೆ ನಿರ್ಧರಿಸಿದೆ.

ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿರುವ ಬಿಜೆಪಿ, ದೇಶದ ಭದ್ರತೆ, ಸುರಕ್ಷತೆಗೆ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕಾಗಿದೆ. ಮತನೀಡಿ ದೇಶ ರಕ್ಷಿಸುವಂತೆ ಮನವಿ ಮಾಡಿಕೊಳ್ಳುತ್ತಿದೆ. ಇನ್ನು ಕಾಂಗ್ರೆಸ್ ಪಕ್ಷ ಕೇಂದ್ರದ ಜನವಿರೋಧಿ ನೀತಿಗಳನ್ನು ಪ್ರಸ್ತಾಪದ ನಡುವೆ, ಗ್ಯಾರಂಟಿ ಯೋಜನೆಗಳಿಂದ ಬಡ ಸಮುದಾಯಕ್ಕಾಗಿರುವ ಅನುಕೂಲಗಳು ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಬಡವರ ಪರವಾಗಿ ಕೈಗೊಳ್ಳುವ ನಿರ್ಧಾರಗಳ ಕುರಿತು ಮತದಾರರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದೆ.

ಉಗ್ರಪ್ಪಗೆ ನಿರಾಸೆ:

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸ್ಪರ್ಧಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಕಾಂಗ್ರೆಸ್‌ನಿಂದ ಉಗ್ರಪ್ಪ ಸ್ಪರ್ಧೆ ಖಚಿತ ಎನ್ನಲಾಗಿತ್ತು. ಹೈಕಮಾಂಡ್ ನಾಯಕರು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಕೃಪಕಟಾಕ್ಷ ಉಗ್ರಪ್ಪನವರ ಮೇಲಿದೆ ಎಂದು ಹೇಳಲಾಗಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಉಗ್ರಪ್ಪಗೆ ಟಿಕೆಟ್ ಕೈ ತಪ್ಪಿದೆ. ತುಕಾರಾಂ ಅವರೇ ಅಖಾಡದಲ್ಲುಳಿಯುವ ಕಾಂಗ್ರೆಸ್ ಅಭ್ಯರ್ಥಿ ಎಂದು ಪಕ್ಷ ಮೂಲಗಳು ಹೇಳುತ್ತಿದ್ದು, ಉಗ್ರಪ್ಪಗೆ ತೀವ್ರ ನಿರಾಸೆ ಮೂಡಿಸಿದೆ. ಕಾಂಗ್ರೆಸ್‌ ಶಾಸಕರು ಹಾಗೂ ನಾಯಕರು ಎಷ್ಟರಮಟ್ಟಿಗೆ ಒಗ್ಗೂಡಿ ಶ್ರಮಿಸುತ್ತಾರೆ ಎಂಬುದರ ಮೇಲೆ ಕೈ ಅಭ್ಯರ್ಥಿಯ ಭವಿಷ್ಯ ನಿಂತಿದೆ.

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವ ನಿರೀಕ್ಷೆಯಿತ್ತು. ನನ್ನ ಹೆಸರು ಘೋಷಣೆಯಾಗಿಲ್ಲ ಎನ್ನುತ್ತಾರೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ,.