ಆತ್ಮಹತ್ಯೆ: ಕೊಳೆತ ಶವ ಬಿದ್ದಿದ್ದ ಟ್ಯಾಂಕ್‌ ನೀರು ಕುಡಿದ ಗ್ರಾಮಸ್ಥರು

| Published : Mar 30 2024, 12:49 AM IST

ಆತ್ಮಹತ್ಯೆ: ಕೊಳೆತ ಶವ ಬಿದ್ದಿದ್ದ ಟ್ಯಾಂಕ್‌ ನೀರು ಕುಡಿದ ಗ್ರಾಮಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್ ತಾಲೂಕಿನ ಆಣದೂರ ಗ್ರಾಮದ ನೀರು ಪೂರೈಸುವ ಓವರ್‌ಹೆಡ್‌ ಟ್ಯಾಂಕ್‌ನಲ್ಲಿ ಶವ ಪತ್ತೆ, ಆರೋಗ್ಯಾಧಿಕಾರಿಗಳ ತಂಡ,ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಅಣದೂರ ಗ್ರಾಮದ ಓವರ್‌ಹೆಡ್‌ ನೀರಿನ ಟ್ಯಾಂಕ್‌ಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಸದರಿ ಶವವಿರುವ ಟ್ಯಾಂಕ್‌ನಲ್ಲಿದ್ದ ನೀರು ಸೇವಿಸಿರುವ ಗ್ರಾಮಸ್ಥರಲ್ಲಿ ಅನಾರೋಗ್ಯದ ಆತಂಕ ಎದುರಾಗಿದೆ.

ಗ್ರಾಮಕ್ಕೆ ನೀರು ಪೂರೈಸುವ ಟ್ಯಾಂಕ್‌ಗೆ ಬಿದ್ದಿರುವ ಗ್ರಾಮದ ರಾಜು ದಾಸ (30) ಎಂಬ ವ್ಯಕ್ತಿ ಬುಧವಾರದಿಂದ ಮನೆಗೆ ಆಗಮಿಸದೇ ಕಾಣೆಯಾಗಿದ್ದ. ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಪೂರೈಕೆಯಾಗಿದ್ದ ನೀರಿನಲ್ಲಿ ಕೂದಲು, ಕೊಳಕು ಸೇರಿ ಬಂದಿದ್ದು ಅಲ್ಲದೆ ಕೆಲವರಿಗೆ ವಾಂತಿ ಕೂಡ ಆಗಿದ್ದು ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿ ಟ್ಯಾಂಕ್‌ ಏರಿ ನೋಡಿದಾಗ ಒಳಗೆ ಶವವಿರುವದು ಪತ್ತೆಯಾಗಿದೆ.

ಇಬ್ಬರು ಮಕ್ಕಳನ್ನು ಹೊಂದಿರುವ ರಾಜು, ಕೆಲವು ತಿಂಗಳುಗಳಿಂದ ಕೌಟುಂಬಿಕ ಕಲಹದಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದು, ಬುಧವಾರವೇ ನೀರಿನ ಟ್ಯಾಂಕ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಹೊರ ತೆಗೆಯುವ ಕಾರ್ಯ ಮಾಡಿದ್ದು ಟ್ಯಾಂಕರ್‌ ಸ್ವಚ್ಛತಾ ಕಾರ್ಯವನ್ನು ಆರೋಗ್ಯ ಇಲಾಖೆಯ ನಿಗಾದಲ್ಲಿ ನಡೆಸಲಾಗಿದೆ.

ಕಳೆದ ಎರಡ್ಮೂರು ದಿನಗಳಿಂದ ವ್ಯಕ್ತಿಯ ಶವ ಇದ್ದ ಓವರ್‌ಹೆಡ್‌ ಟ್ಯಾಂಕ್‌ ನೀರು ಕುಡಿದ ಗ್ರಾಮಸ್ಥರಿಗೆ ಆರೋಗ್ಯದ ಸಮಸ್ಯೆಯ ಆತಂಕ ಕಾಡ ತೊಡಗಿದ್ದು ಗ್ರಾಮದಲ್ಲಿ ವೈದ್ಯರ ತಂಡ ಬಿಡಾರ ಹೂಡಿದ್ದು ಆರೋಗ್ಯ ತಪಾಸಣೆಗೆ ಮುಂದಾಗಿದ್ದಾರೆ. ಗ್ರಾಮಸ್ಥರು ಆತಂಕ ಪಡುವ ಅವಶ್ಯಕತೆಯಿಲ್ಲ, ನೀರು ಕುಡಿದ ಜನರಿಗೆ ವಾಂತಿ ಭೇದಿಯಾಗದಂತೆ, ಆರೋಗ್ಯದ ಮೇಲೆ ನೀಗಾ ಇಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜ್ಞಾನೇಶ್ವರ ನಿರಗುಡೆ ತಿಳಿಸಿದ್ದಾರೆ.

ಘಟನೆ ಕುರಿತಂತೆ ಜನವಾಡಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜಿಪಂ ಸಿಇಒ ಭೇಟಿ :

ಸ್ಥಳಕ್ಕೆ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿರೀಶ ದಿಲೀಪ್‌ ಬಡೋಲೆ ಅವರು ಭೇಟಿ ನೀಡಿ, ಗ್ರಾಮದ ಟ್ಯಾಂಕ್‌ಗೆ ತೆರಳಿ ಸುತ್ತಮುತ್ತಲಿನ ಮನೆಯವರೊಂದಿಗೆ ಚರ್ಚಿಸಿದ್ದಾರೆ. ಅಲ್ಲದೆ ಗ್ರಾಮಸ್ಥರ ಆರೋಗ್ಯದ ಬಗ್ಗೆ ನಿಗಾವಹಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಡಾ. ಗೌತಮ ಅರಳಿ ಇದ್ದರು.