ರಾಮನಗರ: ದೇಶವು ಎಷ್ಟೇ ಪ್ರಗತಿ ಸಾಧಿಸಿದ್ದರೂ ಇಂದಿಗೂ ಹಲವು ಸವಾಲುಗಳು, ಬಿಕ್ಕಟ್ಟುಗಳು ಹಾಗೂ ಸಮಸ್ಯೆಗಳಿವೆ. ಅವುಗಳಿಗೆಲ್ಲ ಸಂವಿಧಾನ ಕಾರಣವಲ್ಲ. ಅದನ್ನು ಬದಲಿಸಬೇಕು ಎಂಬುದು ತಪ್ಪು ಕಲ್ಪನೆ ಎಂದು ನಿವೃತ್ತ ನ್ಯಾ.ಎಚ್.ಎನ್. ನಾಗಮೋಹನ್‌ ದಾಸ್ ಹೇಳಿದರು.

ನಗರದ ಎಂ.ಎಚ್. ಕಾಲೇಜಿನಲ್ಲಿ ಸಂವಿಧಾನ ಓದು ಕರ್ನಾಟಕ ಮತ್ತು ನಮ್ಮವರು ಬಳಗ ಹಮ್ಮಿಕೊಂಡಿದ್ದ ಸಂವಿಧಾನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ದೇಶದಲ್ಲಿ ಕೃಷಿ, ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಲ್ಲಿ ಬಿಕ್ಕಟ್ಟಿದೆ. ಕೋಮುವಾದ ಸೇರಿದಂತೆ ವಿಭಜಕ ಶಕ್ತಿಗಳು ಬೆಳೆಯುತ್ತಿವೆ. ಅದಕ್ಕೆ ಸಂವಿಧಾನ ಕಾರಣವಲ್ಲ. ಬದಲಿಗೆ ನಾವೇ ಅದಕ್ಕೆಲ್ಲಾ ಕಾರಣ. ನಮ್ಮ ಈಗಿನ ಎಲ್ಲಾ ಸಮಸ್ಯೆಗಳಿಗೆ ಸಂವಿಧಾನ ಕಾರಣ ಎಂದು ಅದನ್ನು ಬದಲಿಸುವ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ಸಂವಿಧಾನ ಬದಲಿಬೇಕು ಎನ್ನುವವರಿಗೆ ಅದಕ್ಕೆ ಪರ್ಯಾಯ ಮಾರ್ಗವೇನು ಎಂದರೆ ಉತ್ತರ ಇಲ್ಲ. ನಮ್ಮ ತಪ್ಪು ತಿದ್ದಿಕೊಳ್ಳದೆ ಸಂವಿಧಾನ ದೂರುವುದು ತರವಲ್ಲ. ಈ ದೇಶದ ಕಡೆಯ ನಂಬಿಕೆ‌ ಸಂವಿಧಾನ ಆಗಿದೆ. ಯುವಜನರೇ ಈ ದೇಶದ ಭವಿಷ್ಯ. ಅವರೇ ನಮ್ಮ ಸಂವಿಧಾನದ ರಕ್ಷಕರು. ‌ಅವರಿಂದಾಗಿ ಸುರಕ್ಷಿತ ಎಂಬ ಭಾವ ಮೂಡಿದೆ. ಅದಕ್ಕಾಗಿ ವಿದ್ಯಾರ್ಥಿಗಳಿಗಾಗಿ ಸಂವಿಧಾನ ಕುರಿತು ಪ್ರಬಂಧ ಸ್ಪರ್ಧೆ, ಅಧ್ಯಯನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಅಭಿಯಾನ ನಡೆಸುತ್ತಿದ್ದೇವೆ ಎಂದು ನಾಗಮೋಹನ್ ದಾಸ್ ಹೇಳಿದರು.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಮಾತನಾಡಿ, ನಮ್ಮ ಮುಂದಿರುವ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸವಾಲುಗಳಿಗೆ ಸಂವಿಧಾನವೇ ಪರಿಹಾರ. ಇತ್ತೀಚೆಗೆ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಸಂವಿಧಾನವು ದೇಶದ ಪ್ರಥಮ ಪ್ರಜೆಯಿಂದಿಡಿದು ಸಾಮಾನ್ಯ ವ್ಯಕ್ತಿಗೂ ಒಂದೇ ತೆರನಾದ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಿದೆ. ಅದೇ ಕಾರಣಕ್ಕೆ ನಮ್ಮ ದೇಶವು ಇಷ್ಟೊಂದು ಸುಭದ್ರವಾಗಿದೆ. ಅನೇಕತೆಯಲ್ಲಿ ಏಕತೆ ತಂದಿರುವುದು ಸಂವಿಧಾನ ಎಂದು ತಿಳಿಸಿದರು.


ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಪಿ.ವಿ.ಸ್ನೇಹಾ ಮಾತನಾಡಿ, ರಾಮಾಯಣ, ಮಹಾಭಾರತ ಸೇರಿದಂತೆ ಎಲ್ಲಾ ಧರ್ಮಗಳಿಗಿಂತಲೂ ಶ್ರೇಷ್ಠವಾದ ಗ್ರಂಥ ಸಂವಿಧಾನ. ಪ್ರತಿ ಮನೆಗಳಲ್ಲಿ ಸಂವಿಧಾನದ ಪ್ರತಿ ಇರಬೇಕು. ಶಿಕ್ಷಕರು ಮಕ್ಕಳಿಗೆ ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ಅದರ ಮಹತ್ವ ತಿಳಿಸಬೇಕು ಎಂದು ಸಲಹೆ ನೀಡಿದರು.

ಸಂವಿಧಾನ ಓದು‌ ಕರ್ನಾಟಕ ಅಭಿಯಾನದ ಸಂಚಾಲಕ ಬಿ.‌ ರಾಜಶೇಖರಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜಶೇಖರ‌ ಕಿಗ್ಗ ಪ್ರಬಂಧಗಳ ಕುರಿತು ಮಾತನಾಡಿದರು. ಎಸ್‌. ಪದ್ಮರೇಖಾ ಸಂವಿಧಾನದ ಪೀಠಿಕೆ ಬೋಧಿಸಿದರು.

ಎಂ.ಎಚ್. ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಎಚ್. ಚಂದ್ರಶೇಖರ್ ಘನ ಉಪಸ್ಥಿತಿ ವಹಿಸಿದ್ದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪಯ್ಯ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ

ಡಾ. ದೊಡ್ಡಬೋರಯ್ಯ, ಅಭಿಯಾನ ಎಚ್.ಎನ್. ಹರಿ, ನಮ್ಮವರು ಬಳಗದ ಆರ್. ನಾಗರಾಜು, ಡಾ. ಕೃಷ್ಣ, ಡಾ. ನರಸಿಂಹಸ್ವಾಮಿ, ಡಾ. ನಾಗೇಶ್, ಕೊತ್ತಿಪುರ ಶಿವಣ್ಣ, ಶಿವಶಂಕರ್, ಸಿದ್ದರಾಜು ಉಪಸ್ಥಿತರಿದ್ದರು.

ಬಾಕ್ಸ್ .................

ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

ರಾಮನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಟಿ.ಎಂ.ನಂದಿನಿ ಪ್ರಥಮ ಸ್ಥಾನ, ಚನ್ನಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸೌಮ್ಯಶ್ರೀ ಕೆ. ದ್ವಿತೀಯ ಸ್ಥಾನ ಹಾಗೂ ಕೆಂಗಲ್‌ನ ಶ್ರೀ ಕುವೆಂಪು ಮಹಾ ವಿದ್ಯಾಲಯದ ಲಿಖಿತ ಎಸ್.ತೃತೀಯ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದವರ ಪೈಕಿ 25 ಮಂದಿಯನ್ನು ಸಮಾಧಾನಕರ ಬಹುಮಾನ ನೀಡಲಾಯಿತು. ಪ್ರಥಮ ಸ್ಥಾನ ಪಡೆದವರಿಗೆ 15 ಸಾವಿರ, ದ್ವಿತೀಯ ಸ್ಥಾನಕ್ಕೆ 10 ಸಾವಿರ, ತೃತೀಯ 5 ಸಾವಿರ ಹಾಗೂ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದವರಿಗೆ 1 ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಪ್ರಮಾಣಪತ್ರ ನೀಡಲಾಯಿತು.

4ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಎಂ.ಎಚ್.ಕಾಲೇಜಿನಲ್ಲಿ ಸಂವಿಧಾನ ಓದು ಕರ್ನಾಟಕ ಮತ್ತು ನಮ್ಮವರು ಬಳಗ ಹಮ್ಮಿಕೊಂಡಿದ್ದ ಸಂವಿಧಾನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ಗಣ್ಯರು ಪಾಲ್ಗೊಂಡಿರುವುದು.