ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಅಣವಾರ -ಗಂಗನಪಳ್ಳಿ ಗ್ರಾಮಗಳ ಮಧ್ಯೆ ಹರಿಯುವ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದಾಗಿ ರೈತರ ಹೊಲಗಳಿಗೆ ಹೋಗಲು ಅನುಕೂಲವಾಗಿರುವುದರಿಂದ ಎರಡು ಗ್ರಾಮಗಳ ರೈತರು ಅನೇಕ ವರ್ಷಗಳಿಂದ ಕಂಡಿದ್ದ ಕನಸು ನನಸಾಗಿದ್ದು ರೈತರಲ್ಲಿ ಸಂತಸವನ್ನುಂಟು ಮಾಡಿದೆ.ತಾಲೂಕಿನ ಅಣವಾರ ಮತ್ತು ಗಂಗನಪಳ್ಳಿ ತುಂಬಿ ಹರಿಯುವ ಮುಲ್ಲಾಮಾರಿ ನದಿ ನೀರಿನ ಪ್ರವಾಹದಿಂದ ರೈತರು ತಮ್ಮ ಹೊಲಗಳಿಗೆ ಹೋಗುವುದಕ್ಕಾಗಿ ಕಷ್ಟ ಪಡುತ್ತಿದ್ದರು. ಈ ಹಿನ್ನೆಲೆ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ ಬಿಜೆಪಿ ಶಾಸಕ ಡಾ.ಅವಿನಾಶ ಜಾಧವ್ ೨೦೨೩-೨೪ನೇ ಸಾಲಿನ ಕೆ.ಕೆ.ಆರ್.ಡಿ.ಬಿ ವತಿಯಿಂದ ೯.೯೧ ಕೋಟಿ ರು. ಮಂಜೂರಿಗೊಳಿಸಿದ್ದು, ಕಾಮಗಾರಿ ಕಳೆದ ನಾಲ್ಕು ತಿಂಗಳಿಂದ ಭರದಿಂದ ಸಾಗಿದ್ದು, ಇದೀಗ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ.
ಜುಲೈ ಅಂತ್ಯಕ್ಕೆ ಪೂರ್ಣ:ಮುಲ್ಲಾಮಾರಿ ನದಿಗೆ ಅಡ್ಡಲಾಗಿ ೧೦೮ ಮೀ. ಉದ್ದ, ೫ ಮೀ. ಎತ್ತರ, ೫.೫ ಮೀ. ಅಗಲ, ೨೦ ಪಿಲ್ಲರ್‌ಗಳನ್ನು ಒಳಗೊಂಡಿರುವ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದ ಕೆಲಸ ನಡೆಸಲಾಗುತ್ತಿದೆ. ಕಾಮಗಾರಿಯು ಜುಲೈ ಅಂತ್ಯದವರೆಗೆ ಪೂರ್ಣಗೊಳಿಸಲಾಗುತ್ತಿದೆ ಎಂದು ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ರಾಜಶೇಖರ ಅಲಗೂಡಕರ ತಿಳಿಸಿದ್ದಾರೆ.
ಈ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದಾಗಿ ಕಲ್ಲೂರ, ಭಕ್ತಂಪಳ್ಳಿ, ಕುಂಚಾವರಂ ಕ್ರಾಸ್‌ವರೆಗೆ ಅಂತರ ಕಡಿಮೆ ಆಗುವುದರಿಂದ ವ್ಯಾಪಾರಿಗಳಿಗೆ, ಶಾಲೆ ಕಾಲೇಜು ಮಕ್ಕಳಿಗೆ, ಸಾರ್ವಜನಿಕರಿಗೆ ಉಪಯೋಗ ಆಗಲಿದೆ ಎಂದು ಅಣವಾರ ಗ್ರಾಮದ ನಾರಾಯಣ ನಾಟೀಕಾರ ಹರ್ಷ ವ್ಯಕ್ತಪಡಿಸಿದ್ದಾರೆ.ಮುಲ್ಲಾಮಾರಿ ನದಿ ಅಡ್ಡಲಾಗಿ ನಿರ್ಮಿಸುವ ಬ್ಯಾರೇಜ್ ನಿರ್ಮಾಣದಿಂದ ರೈತರಿಗೆ ತೆಲಂಗಣಾ ರಾಜ್ಯಕ್ಕೆ ಹೋಗಿ ಬರಲು ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ. ಅಲ್ಲದೇ ರೈತರ ಕೊಳವೆಬಾವಿ ಮತ್ತು ಬಾವಿಗಳಲ್ಲಿ ಅಂರ್ತಜಲಮಟ್ಟ ಹೆಚ್ಚಾಗಲಿದೆ. ತಾಲೂಕಿನಲ್ಲಿ ರೈತರ ಜಮೀನುಗಳು ನೀರಾವರಿ ಆಗಬೇಕು ಆರ್ಥಿಕವಾಗಿ ಸಮೃದ್ದಿಗೊಳ್ಳಬೇಕೆಂಬುದು ನನ್ನ ಉದ್ದೇಶವಾಗಿದೆ ಎಂದು ಶಾಸಕ ಡಾ. ಉಮೇಶ್ ಜಾಧವ್ ತಿಳಿಸಿದ್ದಾರೆ.