ಸಾರಾಂಶ
ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯವನ್ನು ತಹಸೀಲ್ದಾರ್ ಕೆ.ವಿಜಯಕುಮಾರ, ಬಸಲಿಂಗಪ್ಪ ನಾಯ್ಕೋಡಿ, ವೈದ್ಯಾಧಿಕಾರಿ ಡಾ.ಆರ್.ವಿ.ನಾಯಕ ವಿಚಾರಿಸಿದರು.
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಕೆಂಭಾವಿ ಸಮೀಪದ ಮುದನೂರ(ಬಿ) ಗ್ರಾಮದಲ್ಲಿ ವಾಂತಿ ಭೇದಿ ಉಂಟಾಗಿ, ಮೂವರು ಮಕ್ಕಳು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.ಗ್ರಾಮದ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದ್ದು, ನೀರು ಕುಡಿದ ನಂತರ ವಾಂತಿ ಭೇದಿ ಉಂಟಾಗಿದೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.
ಜನರಿಗೆ ವಾಂತಿ ಭೇದಿ ಉಂಟಾಗುತ್ತಲೆ, ಕೆಲವರು ಗ್ರಾಮದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಇನ್ನೂ ಕೆಲವು ಜನ ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ಸುದ್ದಿ ತಿಳಿಯುತ್ತಲೆ ಸುರಪುರ ಹಾಗೂ ಹುಣಸಗಿ ತಾಲೂಕು ಮಟ್ಟದ ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿ ದಾಖಲಾದ ಎಲ್ಲ ರೋಗಿಗಳ ಆರೋಗ್ಯ ವಿಚಾರಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು.
ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ಸುರಪುರ ತಹಸೀಲ್ದಾರ್ ಕೆ.ವಿಜಯಕುಮಾರ, ತಾಪಂ ಅಧಿಕಾರಿ ಬಸವರಾಜ ಸ್ವಾಮಿ, ತಾಲೂಕು ಆರೋಗ್ಯಧಿಕಾರಿ ಡಾ.ಆರ್.ವಿ.ನಾಯಕ, ಶಾಸಕರ ಸಹೋದರ ರಾಜಾ ಕುಶಾಲ ನಾಯಕ, ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ, ಡಾ.ಸಿದ್ದು ನ್ಯಾಮಗೊಂಡ, ಡಾ.ಪ್ರಿಯಾಂಕ, ಕೃಷ್ಣಾರೆಡ್ಡಿ ಮುದನೂರ ಭೇಟಿ ನೀಡಿದ್ದಾರೆ.* ಮುದನೂರ ಗ್ರಾಮಕ್ಕೆ ಅಧಿಕಾರಿಗಳ ಭೇಟಿ :
ಘಟನೆ ನಡೆದ ಮುದನೂರ ಗ್ರಾಮಕ್ಕೆ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಆರ್.ವಿ.ನಾಯಕ, ಗ್ರಾಮೀಣ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಆನಂದ, ಸಹಾಯಕ ಎಂಜಿನೀಯರ್ ಎಚ್.ಡಿ.ಪಾಟೀಲ್ ತಂಡ ಭೇಟಿ ನೀಡಿ ನೀರು ಸರಬರಾಜು ಆಗುತ್ತಿರುವ ಕೊಳವೆ ಬಾವಿ ಮತ್ತು ವಾಟರ್‌ಟ್ಯಾಂಕ್‌ಗಳನ್ನು ಪರಿಶೀಲಿಸಿದ್ದಾರೆ.ಕಳೆದ 15 ದಿನಗಳ ಹಿಂದೆ ಇದೇ ಕೊಳವೆ ಬಾವಿಯ ನೀರು ಕುಡಿಯಲು ಯೋಗ್ಯವಿದೆ ಎಂದು ವರದಿ ಬಂದಿದ್ದು, ಈಗ ಈ ಘಟನೆ ನಡೆದಿದೆ. ಈಗ ನೀರನ್ನು ಮತ್ತೆ ತಪಾಸಣೆಗೆ ಕಳುಸಿದ್ದು, ವರದಿ ಬಂದ ನಂತರ ವಾಂತಿ ಭೇದಿಗೆ ಕಾರಣ ತಿಳಿಯಲಿದೆ. ಆಸ್ಪತ್ರೆಗೆ ದಾಖಲಾದ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಡಾ.ಆರ್. ವಿ.ನಾಯಕ ತಿಳಿಸಿದರು.
ಜನತಾ ಕಾಲೋನಿ ನಿವಾಸಿಗಳಿಗೆ ವಾಂತಿ-ಭೇದಿ ಉಂಟಾಗಲು ಕಾರಣ ಏನು ಎಂಬುದು ಪತ್ತೆಯಾಗಬೇಕಿದೆ. ನೀರು ಪೂರೈಸುವ ಕೊಳವೆ ಬಾವಿ ಕೃಷ್ಣಾ ಕಾಲುವೆಯ ಪಕ್ಕದಲ್ಲೇ ಇದ್ದು, ಜಲಾಶಯದಿಂದ ಗುರುವಾರ ಕಾಲುವೆಗೆ ನೀರು ಹರಿಬಿಟ್ಟಿದ್ದರಿಂದ ಕಲುಷಿತ ನೀರು ಕೊಳವೆ ಬಾವಿಯಲ್ಲಿ ಕೂಡಿ ವಾಂತಿ-ಭೇದಿ ಆಗಿದೆ ಎಂಬುದು ಅಲ್ಲಿಯ ಜನತೆಯ ಹೇಳಿಕೆಯಾಗಿದೆ. ಆರೋಗ್ಯ ಇಲಾಖೆ ನೀರನ್ನು ತಪಾಸಣೆಗೆ ಕಳುಹಿಸಿದ್ದು, ವರದಿ ಬಂದ ನಂತರವಷ್ಟೆ ಘಟನೆಗೆ ಕಾರಣ ತಿಳಿಯಲಿದೆ.