ರಾಂ ಅಜೆಕಾರು ಕಾರ್ಕಳ: ಹೆಬ್ರಿ ತಾಲೂಕಿಗೆ ಪ್ರತ್ಯೇಕ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸುಮಾರು ಮೂರು ಕೋಟಿ ರು. ಅನುದಾನ ಬಿಡುಗಡೆಯಾದರೂ, ಠಾಣೆ ಕಟ್ಟಡ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಹೀಗಾಗಿ ಪ್ರಸ್ತುತ ಕಾರ್ಕಳ ಅಗ್ನಿಶಾಮಕ ಠಾಣೆಯನ್ನೇ ಕಾರ್ಕಳ ಹಾಗೂ ಹೆಬ್ರಿ ಎರಡೂ ತಾಲೂಕುಗಳ ಅಗ್ನಿಶಾಮಕ ಸೇವೆಗೆ ಅವಲಂಬಿಸಬೇಕಾಗಿದೆ.

ಕಾರ್ಕಳದಿಂದ ಹೆಬ್ರಿ ತಾಲೂಕಿನ ಮಡಾಮಕ್ಕಿ, ಅಮಾವಾಸೆಬೈಲು, ಆಗುಂಬೆ, ಪೆರ್ಡೂರು ಸೇರಿದಂತೆ ಸುಮಾರು 67 ಕಿ.ಮೀ. ದೂರದ ಪ್ರದೇಶಗಳಿಗೂ ಕಾರ್ಕಳ ಅಗ್ನಿಶಾಮಕ ವಾಹನ ತೆರಳಬೇಕಾದ ಅನಿವಾರ್ಯತೆ ಇದೆ. ಕೆಲವೊಮ್ಮೆ ಕಾಪು ಕುಂದಾಪುರ ಭಾಗಕ್ಕೂ ಸೇವೆ ನೀಡಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.ಕಾರ್ಕಳ-ಹೆಬ್ರಿ ಎರಡೂ ತಾಲೂಕುಗಳ ವಿಶಾಲ ವ್ಯಾಪ್ತಿಗೆ ಪ್ರಸ್ತುತ ಒಂದೇ ಅಗ್ನಿಶಾಮಕ ಠಾಣೆ ಹಾಗೂ ಒಂದೇ ವಾಹನ ಇರುವುದರಿಂದ ತುರ್ತು ಸಂದರ್ಭಗಳಲ್ಲಿ ಸಿಬ್ಬಂದಿ ಮೇಲೆ ಹೆಚ್ಚಿನ ಒತ್ತಡ ಬೀಳುತ್ತಿದೆ. ಒಂದೇ ಸಮಯದಲ್ಲಿ ವಿವಿಧೆಡೆ ಬೆಂಕಿ ಅವಘಡಗಳು ಸಂಭವಿಸಿದರೆ ತಕ್ಷಣ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸುವುದು ಕಷ್ಟಕರವಾಗುತ್ತಿದೆ.ವಿಶೇಷವಾಗಿ ಬೇಸಿಗೆ ಅವಧಿಯಲ್ಲಿ ಕಾಡ್ಗಿಚ್ಚಿನ ಘಟನೆಗಳು ಸಂಭವಿಸಿದಾಗ ಪರಿಸ್ಥಿತಿ ಮತ್ತಷ್ಟು ಸವಾಲಾಗುತ್ತದೆ. ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳು ಹಾಗೂ ಗ್ರಾಮೀಣ ಭಾಗಗಳನ್ನು ಹೊಂದಿರುವ ಹೆಬ್ರಿ ತಾಲೂಕಿಗೆ ಸ್ಥಳೀಯವಾಗಿ ಅಗ್ನಿಶಾಮಕ ಸೇವೆ ಅವಶ್ಯವಾಗಿದೆ. ಹೆಬ್ರಿ ತಾಲೂಕು ಚಾರ ಗ್ರಾಮದ ಸರ್ವೇ ನಂಬರ್ 186/6ರಲ್ಲಿ 1.44 ಎಕರೆ ಜಾಗವನ್ನು ಅಗ್ನಿಶಾಮಕ ಠಾಣೆ ನಿರ್ಮಾಣಕ್ಕಾಗಿ ಪ್ರಸ್ತಾಪಿಸಲಾಗಿದೆ. ಈ ಜಾಗ ಸಾಮಾಜಿಕ ಅರಣ್ಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಅರಣ್ಯ ಇಲಾಖೆಯಿಂದ ಅಗ್ನಿಶಾಮಕ ಇಲಾಖೆಗೆ ಜಮೀನು ಕ್ಲಿಯರೆನ್ಸ್ ಸಿಕ್ಕಿಲ್ಳ.ಅನುದಾನ ಬಿಡುಗಡೆಯಾಗಿ ಠಾಣೆ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದರೂ, ಜಮೀನು ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಕಾಮಗಾರಿ ಆರಂಭವಾಗಿಲ್ಲ. ಇದರಿಂದ ಅನುದಾನ ಬಿಡುಗಡೆಯಾದರೂ ಹೆಬ್ರಿಯ ಅಗ್ನಿಶಾಮಕ ಠಾಣೆ ನಿರ್ಮಾಣ ಕಾರ್ಯಕ್ಕೆ ವೇಗ ಸಿಗದೆ ಉಳಿದಿದೆ.

ಸರ್ಕಾರದಿಂದ ಮೂರು ಕೋಟಿ ರು. ಹಣ ಬಿಡುಗಡೆಯಾಗಿದ್ದು, ಅರಣ್ಯ ಇಲಾಖೆಯಿಂದ ಕ್ಲಿಯರೆನ್ಸ್‌ ಸಿಕ್ಕಿಲ್ಲ. ಇದರಿಂದಾಗಿ ಕಟ್ಟಡ ಕಾಮಗಾರಿ ವಿಳಂಬವಾಗಿದೆ. -ವಿನಾಯಕ ಕಲ್ಕುಟುಗಾರ್ ಡಿಎಫ್‌ಒ ಉಡುಪಿ