ಪ್ರಯಾಣಿಕರ ಕಾಯುವಿಕೆಗೆ, ಟಿಕೆಟ್‌ ಖರೀದಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ನಗರದ ಬೈಯಪ್ಪನಹಳ್ಳಿಯಲ್ಲಿರುವ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ (ಎಸ್‌ಎಂವಿಟಿ) ರೈಲು ನಿಲ್ದಾಣ ಕಟ್ಟಡವನ್ನು ವಿಸ್ತರಿಸುವ ಕೆಲಸ ಪ್ರಾರಂಭವಾಗಿದೆ.

ಮಯೂರ್‌ ಹೆಗಡೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಪ್ರಯಾಣಿಕರ ಕಾಯುವಿಕೆಗೆ, ಟಿಕೆಟ್‌ ಖರೀದಿ ಹಾಗೂ ವಾಣಿಜ್ಯ ಉದ್ದೇಶಕ್ಕಾಗಿ ನಗರದ ಬೈಯಪ್ಪನಹಳ್ಳಿಯಲ್ಲಿರುವ ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌ (ಎಸ್‌ಎಂವಿಟಿ) ರೈಲು ನಿಲ್ದಾಣ ಕಟ್ಟಡವನ್ನು ವಿಸ್ತರಿಸುವ ಕೆಲಸ ಪ್ರಾರಂಭವಾಗಿದೆ.

ಆಧುನಿಕ ಶೈಲಿಯಲ್ಲಿ ನಿರ್ಮಾಣಗೊಂಡ ರಾಜ್ಯದ ಮೊದಲ ಮಾದರಿ ರೈಲ್ವೆ ನಿಲ್ದಾಣ ಸಂಪೂರ್ಣ ಹವಾ ನಿಯಂತ್ರಿತ ದೇಶದ ಮೊದಲ ನಿಲ್ದಾಣ ಎಂಬ ಹೆಗ್ಗಳಿಕೆಯೂ ಈ ನಿಲ್ದಾಣಕ್ಕಿದೆ. ಆದರೆ, ಎಸ್‌ಎಂವಿಟಿ ಅಸಮರ್ಪಕ ನಿರ್ವಹಣೆಯಿಂದ ದೂಷಣೆಗೆ ಒಳಗಾಗುತ್ತಿದೆ. ಪ್ರತಿನಿತ್ಯ ನಿಲ್ದಾಣದ ಹೊರಭಾಗದಲ್ಲಿ ನೂರಾರು ಜನ ರೈಲಿಗಾಗಿ ಕಾಯುತ್ತ ಕುಳಿತಿರುವ, ಮಲಗಿರುವ ದೃಶ್ಯ ದಿನನಿತ್ಯ ಕಂಡು ಬರುತ್ತಿತ್ತು. ಇದರಿಂದ ರೈಲ್ವೆ ನಿಲ್ದಾಣದ ಸ್ವಚ್ಛತೆ ಕೆಟ್ಟು ಅಂದಕ್ಕೂ ಧಕ್ಕೆಯಾಗಿತ್ತು.

ಜತೆಗೆ ನಿಲ್ದಾಣದ ಎಡ ಭಾಗದ ಮೂಲೆಯಲ್ಲಿ ಟಿಕೆಟ್‌ ಕೌಂಟರ್‌ ಇದ್ದುದರಿಂದ ಪ್ರಯಾಣಿಕರ ದಟ್ಟಣೆ, ಸಂಕೀರ್ಣ ಸ್ಥಿತಿ ಉಂಟಾಗುತ್ತಿತ್ತು. ಆಗಾಗ ಇಲ್ಲಿ ಪ್ರಯಾಣಿಕರ ನಡುವೆ ಸಣ್ಣಪುಟ್ಟ ಗಲಾಟೆಗಳೂ ಆಗುತ್ತಿದ್ದವು. ದೀಪಾವಳಿ ಸೇರಿ ಇತರೆ ಹಬ್ಬದಲ್ಲಿ ವಿಶೇಷ ರೈಲುಗಳ ಸಂಚಾರ ಆರಂಭಿಸಿದಾಗ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ತಾತ್ಕಾಲಿಕವಾಗಿ ನಿಲ್ದಾಣದ ಆವರಣದಲ್ಲಿ ಟೆಂಟ್‌ಗಳನ್ನು ನಿರ್ಮಿಸುವ ಅನಿವಾರ್ಯತೆ ಉಂಟಾಗಿತ್ತು. ಈಗ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ನೈಋತ್ಯ ರೈಲ್ವೆ ಮುಂದಾಗಿದೆ.

ಈಗ ಮೊದಲ ಹಂತದಲ್ಲಿ ನಿಲ್ದಾಣ ಕಟ್ಟಡ ವಿಸ್ತರಿಸುವ ಕಾರ್ಯ ನಡೆಯುತ್ತಿದೆ. ನಿಲ್ದಾಣ ಪ್ರವೇಶ ಕಟ್ಟಡದ ಬಲಭಾಗಕ್ಕೆ ಹೊಂದಿಕೊಂಡೆ ವಿಸ್ತರಿತ ಕಟ್ಟಡ ತಲೆ ಎತ್ತುತ್ತಿದೆ. ಜಿ+2 ಮಾದರಿಯಲ್ಲಿರಲಿದೆ. ನೆಲ ಮಹಡಿ ಟಿಕೆಟ್ ಬುಕ್ಕಿಂಗ್ ಕಚೇರಿ, ಮೊದಲ ಮಹಡಿ ಮಹಿಳೆಯರಿಗೆ ಹಾಗೂ ಜನರಲ್‌ ವೇಟಿಂಗ್‌ ಹಾಲ್‌ಗಳನ್ನು ಒಳಗೊಂಡಿರಲಿದೆ. ಜತೆಗೆ ವಸತಿ ನಿಲಯಗಳನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಜತೆಗೆ ವಾಣಿಜ್ಯ ಮಳಿಗೆಗಳು ಇರಲಿದ್ದು, ಒಟ್ಟಾರೆ ₹ 17 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸದ್ಯ ಅಡಿಪಾಯ, ಕೇಬಲ್‌ ತೆರವು ಸೇರಿ ಹಲವು ಕಾರ್ಯ ನಡೆಯುತ್ತಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ವಹಣೆ ಅಸಮರ್ಪಕ:

ಉದ್ಘಾಟನೆಗೊಂಡ ನಂತರದ ಮಳೆಗಾಲದಲ್ಲೇ ನಿಲ್ದಾಣದ ರೂಫ್‌ಟಾಪ್‌ ಕಿತ್ತುಹೋಗಿ ಹಾನಿಗೊಳಗಾಗಿತ್ತು. ಇದಲ್ಲದೆ ಆಗಾಗ ನಿಲ್ದಾಣದಲ್ಲಿ ವಿದ್ಯುತ್‌ ವ್ಯತ್ಯಯ, ಸಂಪೂರ್ಣ ಹವಾನಿಯಂತ್ರಿತ ಇದ್ದರೂ ಎಸಿ ಬಂದ್‌ ಆಗುವುದು, ಸ್ವಚ್ಛತೆ ಕೊರತೆ, ದುರ್ವಾಸನೆ ಬಗ್ಗೆ ಪ್ರಯಾಣಿಕರು ದೂರುತ್ತಲೇ ಇರುತ್ತಾರೆ. ಜತೆಗೆ ಶೌಚಾಲಯಗಳಂತಹ ಸೌಕರ್ಯಗಳನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ, ಮತ್ತು ಪ್ಲಾಟ್‌ಫಾರ್ಮ್‌ಗಳು ಭಗ್ನಾವಶೇಷಗಳಿಂದ ತುಂಬಿವೆ, ಸ್ವಚ್ಛತೆ ಇಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ, ನಿಯಮಿತವಾಗಿ ಭದ್ರತೆ ಕಾರ್ಯಗಳು ನಡೆಯುತ್ತಿಲ್ಲ. ತಪಾಸಣೆ ಮಾಡದೆ ಬ್ಯಾಗ್‌ಗಳನ್ನು ಒಳಬಿಡುತ್ತಾರೆ. ಸ್ಕ್ಯಾನರ್‌ಗಳನ್ನು ಸುಮ್ಮನೆ ಇಡಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸನಿಹದ ಬೈಯಪ್ಪನಹಳ್ಳಿ ಹಾಗೂ ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದಿಂದ ಇಲ್ಲಿಗೆ ತೆರಳಲು ಆಟೋದವರು ₹100- ₹ 150 ತೆಗೆದುಕೊಳ್ಳುತ್ತಾರೆ. ರಾತ್ರಿ ವೇಳೆ ನಿಲ್ದಾಣಕ್ಕೆ ಹೋಗಿ ಬರುವುದು ಕಷ್ಟ ಎಂದು ಪ್ರಯಾಣಿಕ ರಾಜೇಶ್ ಪಾಟೀಲ್‌ ಹೇಳಿದರು.

ಪ್ರಸ್ತುತ 77 ರೈಲು ಸಂಚಾರ

₹314 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ನಿಲ್ದಾಣವನ್ನು 2022ರಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಎಸ್‌ಎಂವಿಟಿ ಏಳು ಪ್ಲಾಟ್‌ಫಾರ್ಮ್‌ ಹೊಂದಿದೆ. ಕಲಬುರಗಿಗೆ ಹೋಗುವುದು ಸೇರಿದಂತೆ ಒಟ್ಟು 4 ವಂದೇ ಭಾರತ್‌, ಪಶ್ಚಿಮ ಬಂಗಾಳದ ಮಾಲ್ಡಾಕ್ಕೆ ತೆರಳುವ 1 ಅಮೃತ್ ಭಾರತ್‌ ರೈಲು ಸಂಚರಿಸುತ್ತಿವೆ. ಇಲ್ಲಿಂದಲೆ ಹೊರಡುವ 49 ಸೇರಿದಂತೆ 77ಕ್ಕೂ ಅಧಿಕ ರೈಲುಗಳು ಸಂಚರಿಸುತ್ತವೆ. ಸುಮಾರು 20 ರೈಲುಗಳು ಹಾಲ್ಟ್‌ ಆಗುತ್ತಿವೆ. ಉತ್ತರ ಭಾರತಕ್ಕೆ ಹೋಗಿ ಬರುವ ಬಹುತೇಕ ಪ್ರಮುಖ ರೈಲುಗಳು ಇಲ್ಲಿಂದಲೇ ಹೋಗುತ್ತಿವೆ. ಒಳಾಂಗಣ 500 ಆಸನ ವ್ಯವಸ್ಥೆ ಹೊಂದಿದೆ. ಪ್ರತಿನಿತ್ಯ 40ಸಾವಿರಕ್ಕೂ ಜನ ಇಲ್ಲಿಂದ ಪ್ರಯಾಣಿಕರು ಸಂಚರಿಸುತ್ತಾರೆ. ಹಬ್ಬದ ವಿಶೇಷ ವೇಳೆ ಈ ಸಂಖ್ಯೆ ದ್ವಿಗುಣವಾಗುತ್ತದೆ.