ಕನ್ನಡಪ್ರಭ ವಾರ್ತೆ ವಿಜಯಪುರ
ಸುಪ್ರೀಂಕೋರ್ಟ್ ಛಿಮಾರಿ ಹಾಕಿದರೂ ಸಹ ಕನ್ಹೇರಿ ಶ್ರೀಗಳು ಬಸವಾದಿ ಶರಣರನ್ನು ನಿಂದಿಸುವ, ವಚನಗಳ ಸಾರವನ್ನು ಅಪಾರ್ಥ ಮಾಡುವ ಹಾಗೂ ಬಸವಾದಿ ಅನುಯಾಯಿಗಳನ್ನು ಬಸವ ತಾಲಿಬಾನಿ ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿದ್ದಾರೆ ಎಂದು ಬಸವಾದಿ ಚಿಂತಕ ಬಸನಗೌಡ ಹರನಾಳ ಅಸಮಾಧಾನ ಹೊರಹಾಕಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿಯಾಗಿ ಬಸವಾದಿ ಚಿಂತಕರ ಬಗ್ಗೆ ಅವಹೇಳಕನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ, ಬಸವಾದಿ ಶರಣರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಕೋರ್ಟ್ ಸಹ ಸ್ವಾಮೀಜಿಗೆ ಛಿಮಾರಿ ಹಾಕಿದೆ. ಆದರೂ ಸಹ ಶರಣರ ವಚನ ತಿರುಚುವುದು, ಬಸವಾದಿ ಶರಣರನ್ನು ಬೈಯುತ್ತಿದ್ದಾರೆ. ಬಸವ ತಾಲಿಬಾನಿ ಎಂದು ಹೇಳುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಲಿದ್ದಾರೆ. ನಿಂದನೆ ಮಾಡುವುದು ಸಲ್ಲದ ಕೆಲಸ, ಮಾಡುತ್ತಿರುವ ಉದ್ದೇಶ ಸರಿಯಿಲ್ಲ. ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುತ್ತಿರುವುದು ಬಸವಣ್ಣನ ವಿರೋಧಿ ನಡೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲ ಜಿಲ್ಲೆಗಳಲ್ಲಿ ಕನ್ಹೇರಿ ಶ್ರೀಗಳ ವಿರುದ್ಧ ಪ್ರತಿಭಟನೆ ಆಯೋಜಿಸಲಾಗಿದೆ. ಜಿಲ್ಲಾಡಳಿತ, ತಾಲೂಕು ಆಡಳಿತಗಳಿಗೆ ಮನವಿ ಸಲ್ಲಿಸಿ, ಅವರಿಗೆ ಕಾರ್ಯಕ್ರಮ ಆಯೋಜನೆಗೆ ಅವಕಾಶ ನೀಡಬಾರದು ಆಗ್ರಹಿಸಲಾಗುವುದು ಎಂದರು.ತಮ್ಮ ಮಠದಲ್ಲಿ ಪ್ರವಚನ ನೀಡಲಿ. ಅದು ಬಿಟ್ಟು ಹಿಂದೂ ಶರಣ ಸಮಾವೇಶ ಹೆಸರಲ್ಲಿ ವಚನಗಳನ್ನು ತಿರುಚುವುದು, ಬಸವಪರ ಸಂಘಟನೆಗಳು, ಸ್ವಾಮೀಜಿಗಳು ಹಾಗೂ ಮುಖ್ಯಮಂತ್ರಿಗಳನ್ನೂ ಬೈಯುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಂಘ ಪರಿವಾರದಿಂದ ಕನ್ಹೇರಿ ಸ್ವಾಮೀಜಿಗಳ ದುರ್ಬಳಕೆ:
ವೈದ್ಯ ಡಾ.ರವಿಕುಮಾರ ಬಿರಾದಾರ ಮಾತನಾಡಿ, ಜೂನ್ ೨೮ರಂದು ಬಸವ ಕಲ್ಯಾಣದಲ್ಲಿ ಸಮಾವೇಶಕ್ಕೆ ಮುಂದಾಗಿದ್ದಾರೆ. ಹಿಂದೂ ಶಿವಶರಣರ ಸಮಾವೇಶ ಎಂದು ಕಲಬೆರಕೆ ಸಮಾವೇಶ ಮಾಡಬೇಡಿ. ಬೇಕಾದರೆ ಪ್ರತ್ಯೇಕ ಹಿಂದೂ ಸಮಾವೇಶ ಮಾಡಿ, ಇಲ್ಲವೆ ಶಿವಶರಣರ ಸಮಾವೇಶವನ್ನಾದರೂ ಮಾಡಿ ಎಂದರು.
ಕನ್ಹೇರಿ ಸ್ವಾಮೀಜಿ ಅಸಂಬದ್ಧ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ, ಕನ್ಹೇರಿ ಸ್ವಾಮೀಜಿ ಅವರನ್ನು ಬಿಜೆಪಿ-ಸಂಘಪರಿವಾರದವರು ಬಿಜೆಪಿ, ಆರ್‌ಎಸ್‌ಎಸ್ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸ್ವಾಮೀಜಿ ಇಷ್ಟು ವರ್ಷಗಳ ಕಾಲ ಯಾಕೆ ಸುಮ್ಮನಿದ್ದರು. ಈಗ ಯಾಕೆ ಹಿಂದೂ, ಲಿಂಗಾಯತ ಬಗ್ಗೆ ಮಾತನಾಡುತ್ತಿದ್ದಾರೆ?, ಇದರ ಉದ್ದೇಶವೇನು?, ಇದನ್ನು ಗಮನಿಸಿದರೆ ದ್ವೇಷ ಬಿತ್ತುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.ಬಸವಣ್ಣನ ಚಿಂತನೆ ಜಾಗತಿಕವಾಗಿ ಬೆಳೆಯುತ್ತಿದೆ. ಇದನ್ನು ದುರ್ಬಳಕೆ ಮಾಡಿಕೊಳ್ಳಲು ಬಸವಣ್ಣನ ಹೆಸರು ಹೇಳುತ್ತಿದ್ದಾರೆ. ಇದಕ್ಕಾಗಿ ಶರಣರ ವಚನಗಳನ್ನು ತಿರುಚಿ ಹೇಳುವ ಕೆಲಸ ಮಾಡುತ್ತಿದ್ದಾರೆ. ಬಸವಣ್ಣ ಹಿಂದೂ ಧರ್ಮ ತಿರಸ್ಕರಿಸಿದರು. ಆಗಲೇ ಲಿಂಗಾಯತ ಧರ್ಮ ಸ್ಥಾಪಿಸಿದರು. ಆದರೆ, ಸಮಾಜ ಸುಧಾರಣೆ ಮಾಡಿದರು, ಹಿಂದೂ ಧರ್ಮವನ್ನು ಪ್ರತಿಪಾದಿಸಿದರು ಎಂದು ಕತೆ ಕಟ್ಟುತ್ತಿದ್ದಾರೆ. ಹಿಂದೂ ಧರ್ಮವನ್ನು ಬಸವಣ್ಣ ಪ್ರತಿಪಾದಿಸಿದ್ದೇ ನಿಜವಾದರೆ, ಶರಣರ ಲಕ್ಷಾಂತರ ವಚನಗಳನ್ನು ಸುಟ್ಟಿದ್ದು ಯಾಕೆ, ಶರಣರನ್ನು ಯಾಕೆ ಕೊಲೆ ಮಾಡಲಾಯಿತು. ಅವರನ್ನು ಕೊಂದಿದ್ದು ಯಾರು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಭುಗೌಡ ಬಿರಾದಾರ, ಚೆನ್ನು ಕಟ್ಟಿಮನಿ, ಅಡಿವೆಪ್ಪ ಸಾಲಗಲ್ಲ, ನಾಗರಾಜ ಲಂಬು ಇದ್ದರು.