ಕನ್ನಡಪ್ರಭ ವಾರ್ತೆ ಮದ್ದೂರು
ಯೋಗವು ಕೇವಲ ವ್ಯಾಯಾಮವಲ್ಲ. ಅದು ಆರೋಗ್ಯಕರ ಜೀವನದತ್ತ ಕರೆದೊಯ್ಯುವ ಸಮಗ್ರ ಜೀವನವಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ 1 ನೇ ಅಪರ ಸಿವಿಲ್ ನ್ಯಾಯಾಧೀಶ ಕೆ.ಗೋಪಾಲಕೃಷ್ಣ ಹೇಳಿದರು.ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯ ಆವರಣದಲ್ಲಿ ಭಾನುವಾರ ನ್ಯಾಯಾಂಗ ಇಲಾಖೆ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆದ ಯೋಗಾಭ್ಯಾಸಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದ ಪ್ರಾಚೀನ ಸಂಸ್ಕೃತಿಗೆ ಯೋಗ ಕೊಡುಗೆಯಾಗಿದೆ. ಆರೋಗ್ಯ, ನೆಮ್ಮದಿ ಮತ್ತು ಸಮತೋಲನ ಯುಕ್ತ ಜೀವನದ ಸಂದೇಶವನ್ನು ಸಾರುವ ಜಾಗತಿಕ ಬಳುವಳಿಯಾಗಿದೆ ಎಂದರು.2ನೇ ಹಿರಿಯ ಅಪರ ನ್ಯಾಯಾಧೀಶೆ ಎಸ್.ಆರ್.ನಂದಿನಿ ಮಾತನಾಡಿ, ಉದ್ಯೋಗ ಕ್ಷೇತ್ರದಲ್ಲಿರುವ ಜನರಿಗೆ ಯೋಗದ ಮಹತ್ವ ಪ್ರಮುಖವಾಗಿದೆ. ದಿನವಿಡೀ ಕುಳಿತು ಕೆಲಸ ಮಾಡುವ ಜೀವನ ಶೈಲಿ, ನಿರಂತರ ಒತ್ತಡ ಮತ್ತು ಸಮಯದ ಅಭಾವ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರತಿದಿನ ಸ್ವಲ್ಪ ಸಮಯವನ್ನು ಯೋಗಾಭ್ಯಾಸಕ್ಕೆ ಮೀಸಲಿಡುವುದು ಅತ್ಯಗತ್ಯವಾಗಿದೆ ಎಂದರು.
ಹಿರಿಯ ಅಪರ ಸಿವಿಲ್ ನ್ಯಾಯಾಧೀಶೆ ಎನ್.ಬಿ.ಮೋಹನ್ ಕುಮಾರಿ ಮಾತನಾಡಿ, ಇಂದಿನಮಕ್ಕಳು ಕಂಪ್ಯೂಟರ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಇದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಅವರಲ್ಲಿ ಯೋಗದಿಂದ ಆಗುವ ಪ್ರಯೋಜನಗಳ ಬಗ್ಗೆ ಪೋಷಕರು ಮತ್ತು ಶಾಲಾ ಶಿಕ್ಷಕರು ಅರಿವು ಮೂಡಿಸಬೇಕು ಎಂದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಸಿ.ಎಂ.ಪಾರ್ವತಿ, 3ನೇ ಹೆಚ್ಚುವರಿ ನ್ಯಾಯಾಧೀಶೆ ಶೃತಿ, ವಕೀಲರ ಸಂಘದ ಅಧ್ಯಕ್ಷ ಎಂ. ಎನ್. ಶಿವಣ್ಣ, ಕಾರ್ಯದರ್ಶಿ ಎಂ.ಜೆ.ಸುಮಂತ್, ಯೋಗ ಶಿಕ್ಷಕ ಸುನಿಲ್ ಹಾಗೂ ನ್ಯಾಯಾಲಯದ ಸಿಬ್ಬಂದಿ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.