ಕನ್ನಡಪ್ರಭ ವಾರ್ತೆ ಬೆಂಗಳೂರು:
ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಎರಡನೇ ಬಾರಿ ನಡೆದ ನೀಟ್ ಪ್ರವೇಶ ಪರೀಕ್ಷೆ ರಾಜ್ಯದಲ್ಲಿ ಯಾವುದೇ ತೊಂದರೆ ಇಲ್ಲದೇ ಸುಸೂತ್ರವಾಗಿ ನಡೆದಿದೆ.ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ಪ್ರಶ್ನೆಪತ್ರಿಕೆಗಳ ಸಾಗಣೆ, ಸ್ಟ್ರಾಂಗ್ ರೂಮ್, ಪರೀಕ್ಷಾ ಕೇಂದ್ರಗಳ ಬಳಿ ಸ್ಥಳೀಯ ಪೊಲೀಸರ ಭದ್ರತೆ ಜೊತೆಗೆ ಕೇಂದ್ರೀಯ ಭದ್ರತಾ ಪಡೆಗಳ ನೆರವನ್ನೂ ಪಡೆಯಲಾಗಿತ್ತು. ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಯನ್ನು ಪರೀಕ್ಷಾ ಕೇಂದ್ರಗಳ ಬಳಿ ನಿಯೋಜಿಸಲಾಗಿತ್ತು. ಅಭ್ಯರ್ಥಿಗಳ ಖಚಿತತೆಗಾಗಿ ಬೆರಳಚ್ಚು ಗುರುತು, ಮುಖ ಚಹರೆ ಗುರುತು ಹಿಡಿಯುವ ಬಯೋಮೆಟ್ರಿಕ್ ವ್ಯವಸ್ಥೆ ಮಾಡಲಾಗಿತ್ತು.
ಮಧ್ಯಾಹ್ನ 2ರಿಂದ 5.15ರವರೆಗೆ ಪರೀಕ್ಷಾ ಸಮಯ ನಿಗದಿಯಾಗಿತ್ತು. ಪರೀಕ್ಷಾ ಕೇಂದ್ರದ ಆವರಣದೊಳಗೆ ಪ್ರವೇಶಕ್ಕೆ ಅಂತಿಮ ಸಮಯ 1.30 ಗಂಟೆ. ನಂತರ ಬರುವ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಬಿಡುವುದಿಲ್ಲ ಎಂಬ ಸ್ಪಷ್ಟ ಫಲಕವನ್ನು ಅಳವಡಿಸಲಾಗಿತ್ತು. ಆದರೂ, ಕೆಲ ಅಭ್ಯರ್ಥಿಗಳು ತಡವಾಗಿ ಬಂದು ಕಣ್ಣೀರಿಟ್ಟರು.ಬೆಂಗಳೂರಿನ ಆರ್.ಸಿ.ಕಾಲೇಜು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿನಿಯೊಬ್ಬಳು ವಿಳಂಬವಾಗಿ ಬಂದರು. ರಾಜಕೀಯ ಪಕ್ಷದ ಕಾರ್ಯಕ್ರಮದಿಂದಾಗಿ ಬಳ್ಳಾರಿ ರಸ್ತೆಯಲ್ಲಿ ಉಂಟಾಗಿದ್ದ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕಿ ಕೆಲ ನಿಮಿಷ ವಿಳಂಬವಾಗಿದೆ. ಒಳಗೆ ಬಿಡಿ ಎಂದು ವಿದ್ಯಾರ್ಥಿನಿ ಮಾಡಿದ ಮನವಿಯನ್ನು ಭದ್ರತಾ ಸಿಬ್ಬಂದಿ ಪರಿಗಣಿಸಲಿಲ್ಲ. ಇದೇ ವೇಳೆ, ಮತ್ತೊಬ್ಬ ವಿದ್ಯಾರ್ಥಿನಿ ಹಳೇ ಹಾಲ್ ಟಿಕೆಟ್ ತಂದು ಪರೀಕ್ಷೆಯಿಂದ ವಂಚಿತರಾದರು. ಒಳಗೆ ಬಿಡುವಂತೆ ಕಣ್ಣೀರಿಟ್ಟು ಗೋಗರೆದ ವಿದ್ಯಾರ್ಥಿನಿಯರಿಬ್ಬರು ಕಾಂಪೌಂಡ್ ದಾಟಿ ಒಳಗೆ ಹೋಗಲು ಯತ್ನಿಸಿದರು. ಆದರೆ, ಆಕೆಯನ್ನು ಪೊಲೀಸರು ಕೆಳಗಿಳಿಸಿ ವಾಪಸ್ ಕಳುಹಿಸಿದರು.
ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಮಧ್ಯಾಹ್ನ 1.53ಕ್ಕೆ ಬಂದ ಗಂಗಾವತಿ ಮೂಲದ ಬಿ.ಬಿ.ಫಾತೀಮಾ ಎಂಬುವರಿಗೆ ಪರೀಕ್ಷಾ ಕೇಂದ್ರದೊಳಕ್ಕೆ ಪ್ರವೇಶ ನಿರಾಕರಿಸಲಾಯಿತು.
ಕೈ ದಾರಕ್ಕೆ ಆಕ್ಷೇಪ:
ಬೆಂಗಳೂರಿನ ಮಲ್ಲೇಶ್ವರದ ಪಿಯು ಕಾಲೇಜಿನಲ್ಲಿನ ನೀಟ್ ಪರೀಕ್ಷಾ ಕೇಂದ್ರಕ್ಕೆ ಅಭ್ಯರ್ಥಿಯೊಬ್ಬರು ಕಟ್ಟಿಕೊಂಡು ಬಂದಿದ್ದ ದಾರವನ್ನು ಪರೀಕ್ಷಾ ಸಿಬ್ಬಂದಿ ಬಿಚ್ಚಿಸಿ ಒಳಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಅಭ್ಯರ್ಥಿಯ ಪಾಲಕರು ಆಕ್ಷೇಪಿಸಿದ್ದಾರೆ. ಅನುಮತಿಸುವ ಪಟ್ಟಿಯಲ್ಲಿ ಕೈದಾರ ಇಲ್ಲದ ಕಾರಣ ಅನುಮತಿಸುವುದಿಲ್ಲ ಎಂದು ಅಭ್ಯರ್ಥಿಯ ಪಾಲಕರಿಗೆ ಪರೀಕ್ಷಾ ಸಿಬ್ಬಂದಿ ಸ್ಪಷ್ಟಪಡಿಸಿದರು.ಇನ್ನು, ಬಳ್ಳಾರಿಯ ಎಎಸ್‌ಎಂ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಉಡದಾರವನ್ನು ಪರೀಕ್ಷಾ ಕೇಂದ್ರದ ಬಳಿ ಸಿಬ್ಬಂದಿ ಕಟ್ ಮಾಡಿದ್ದು, ಇದಕ್ಕೆ ಕೆಲ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ದಾವಣಗೆರೆಯ ಪರೀಕ್ಷಾ ಕೇಂದ್ರವೊಂದರಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕೊರಳಲಿದ್ದ ದಾರಗಳನ್ನು ತೆಗೆಸಲಾಯಿತು. ಪ್ರವೇಶ ದ್ವಾರದಲ್ಲಿದ್ದ ಸಿಬ್ಬಂದಿ ಕೊರಳಲ್ಲಿ, ಕೈಯಲ್ಲಿ ಧರಿಸಿದ್ದ ಶಿವದಾರ, ಚೌಕ, ರುದ್ರಾಕ್ಷಿ, ಜನಿವಾರ ತೆಗೆಯುವಂತೆ ಸೂಚನೆ ನೀಡಿದ್ದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಒಲ್ಲದ ಮನಸ್ಸಿನಿಂದಲೇ ಅವುಗಳನ್ನು ತೆಗೆದರು.