ಕನ್ನಡಪ್ರಭ ವಾರ್ತೆ ಅರಸೀಕೆರೆ

ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರುಗಳು ಕೈತಪ್ಪದಂತೆ ನೋಡಿಕೊಳ್ಳುವುದು ಪಕ್ಷದ ಕಾರ್ಯಕರ್ತರ ಪ್ರಮುಖ ಜವಾಬ್ದಾರಿಯಾಗಿದ್ದು, ಮತದಾರರ ಹಕ್ಕುಗಳ ರಕ್ಷಣೆಗೆ ಎಲ್ಲರೂ ಜಾಗೃತರಾಗಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಎಂ. ರೇವಣ್ಣ ಹೇಳಿದರು.

ನಗರದ ಆದರ್ಶ ಫಾರಂ ಹೌಸ್‌ನಲ್ಲಿ ನಡೆದ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಸಮಿತಿ ಹಾಗೂ ಬಿಎಲ್‌ಎ-2 ಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವೇಳೆ ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ವಿಶೇಷ ಗಮನ ಹರಿಸಬೇಕು. ಪ್ರತಿಯೊಬ್ಬ ಅರ್ಹ ನಾಗರಿಕ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಬದುಕಿಗೆ ಆಸರೆಯಾಗಿದ್ದು, ಅವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಸರ್ಕಾರ ಬದ್ಧವಾಗಿದೆ. ಯೋಜನೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವ ನಿಟ್ಟಿನಲ್ಲಿ ಅಗತ್ಯ ಪರಿಷ್ಕರಣೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಶಾಸಕ ಕೆ. ಎಂ. ಶಿವಲಿಂಗೇಗೌಡ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ನ್ಯಾಯಸಮ್ಮತತೆ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕಾರ್ಯಕರ್ತರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.

ಹಾಸನ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತಕ್ಕೂ ಮಹತ್ವವಿದೆ. ಆದ್ದರಿಂದ ಮತದಾರರ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ ಕಾರ್ಯದಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು. ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಶಾಸಕ ಕೆ. ಎಂ. ಶಿವಲಿಂಗೇಗೌಡ ಅವರಿಗೆ ಸಚಿವ ಸ್ಥಾನ ನೀಡುವಂತೆ ಘೋಷಣೆಗಳನ್ನು ಕೂಗಿದರು. ಈ ವೇಳೆ ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸಿ ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುವಂತೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಿ.ಬಿ. ಶಶಿಧರ್‌, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಸೇರಿದಂತೆ ಹಲವಾರು ಮುಖಂಡರು ಸಭೆಯಲ್ಲಿ ಮಾತನಾಡಿದರು.


ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿಳಿಚೌಡಯ್ಯ, ಜಿಲ್ಲಾ ಮುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ನಗರಸಭಾ ಮಾಜಿ ಅಧ್ಯಕ್ಷ ಸಮೀವುಲ್ಲಾ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್‌ ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.