ಕನ್ನಡಪ್ರಭ ವಾರ್ತೆ ಶಿರಸಿ

ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಹಾಗೂ ಅವ್ಯವಸ್ಥಿತ ಕಾಮಗಾರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ ಎಂದು ಆರೋಪಿಸಿ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆ ಎದುರು ಭಾನುವಾರ ಆಟೋ ಚಾಲಕರು ರಸ್ತೆ ತಡೆದು ಪ್ರತಿಭಟನೆ ಮಾಡಿದರು.

ಈ ಅವೈಜ್ಞಾನಿಕ ಕಾಮಗಾರಿಯನ್ನು ತಕ್ಷಣವೇ ಮರುಪರಿಶೀಲಿಸಿ, ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಅಗತ್ಯ ಬದಲಾವಣೆ ಮಾಡಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವವರೆಗೆ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಆಟೋ ಚಾಲಕ ಮತ್ತು ಮಾಲೀಕರ ಸಂಘದ ಅದ್ಯಕ್ಷ ಉಪೇಂದ್ರ ಪೈ ತಿಳಿಸಿದರು.

ಪ್ರತಿಭಟನಾಕಾರರ ಅಹವಾಲು ಆಲಿಸಿದ ಪಿಡಬ್ಲ್ಯೂಡಿ ಎಇಇ ಅರುಣ್ ಡಿ. ಮಾತನಾಡಿ, ಅವೇ ಮರಿಯಾ ಶಾಲೆಯ ಪಕ್ಕದ ಭೂ ಮಾಲೀಕರಿಗೆ ಸರ್ಕಾರದಿಂದ ಪರಿಹಾರ ಬರದೇ ಇದ್ದ ಕಾರಣ ಭೂಮಾಲೀಕರು ಜಾಗವನ್ನು ತೆರವು ಮಾಡಿ ಕೊಟ್ಟಿರಲಿಲ್ಲ. ಇದರಿಂದ ಅಲ್ಲಿಯ ರಸ್ತೆ ಅಗಲೀಕರಣ ಮಾಡಿರಲಿಲ್ಲ ಈಗ ಅಲ್ಲಿಯ ಭೂಮಾಲೀಕರಿಗೆ ಸರಕಾರದಿಂದ ಪರಿಹಾರ ಬಂದಿದೆ. ಈ ಹಿನ್ನೆಲೆ ನಾವು ಭೂ ಮಾಲೀಕರಿಗೆ ಈಗಾಗಲೇ ಜಾಗ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದೇವೆ. ಈ ಸಂಬಂಧ ಸರ್ಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಭೂಮಾಲೀಕರು ಜಾಗ ತೆರವು ಮಾಡಿ ಕೊಟ್ಟ ತಕ್ಷಣ ರಸ್ತೆ ಅಗಲೀಕರಣ ಮಾಡಲಾಗುವುದು ಎಂದರು.

ಈ ಸಂದರ್ಭ ನಗರಸಭೆ ಮಾಜಿ ಅಧ್ಯಕ್ಷ ಪ್ರದೀಪ್ ಶೆಟ್ಟಿ, ನಗರ ಠಾಣೆ ಪಿಎಸ್ಐ ನರಸಿಂಹಲು, ಆಟೋ ಚಾಲಕರು ಹಾಗೂ ಮಾಲೀಕರು ಸೇರಿದಂತೆ ಸಾರ್ವಜನಿಕರಿದ್ದರು.