ಸ್ಥಳೀಯ ಭಾಷೆಯನ್ನು ವಿರೋಧಿಸಿ ಕನ್ನಡವನ್ನು ಎತ್ತಿ ಹಿಡಿಯಲು ಹೊರನಾಡ ಕನ್ನಡಿಗರು ತುಂಬ ತೊಂದರೆ ಪಡುತ್ತಿದ್ದಾರೆ. ಅಂತಹ ತೊಂದರೆಗಳನ್ನು ಕರ್ನಾಟಕ ಸರ್ಕಾರ ಸರಿಪಡಿಸಬೇಕು ಎಂದು ಹೊರನಾಡು ಕನ್ನಡ ಸಂಘಗಳ ಪ್ರತಿನಿಧಿಗಳು ಪ್ರತಿಪಾದನೆ ಮಾಡಿದರು.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಸೋಲಾಪುರ (ಜಯದೇವಿ ತಾಯಿ ಲಿಗಾಡೆ ಮಹಾದ್ವಾರ)

ಕರ್ನಾಟಕದಲ್ಲಿ ಕನ್ನಡದ ಅಭಿಮಾನದಿಂದ ಕನ್ನಡ ಮಾಧ್ಯಮದಲ್ಲಿ ಓದಬೇಕಾದ ಮಕ್ಕಳು ಆಂಗ್ಲ ಮಾಧ್ಯಮಕ್ಕೆ ಸೇರುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಗಡಿನಾಡು-ಹೊರನಾಡು ಕನ್ನಡಿಗರ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಬೇಕು, ಹೊರನಾಡಿನಲ್ಲಿ ಕನ್ನಡ ವೃದ್ಧಿಸಬೇಕೆಂಬ ಆಗ್ರಹ ನ್ಯಾಯವೇ?

ಇಂತಹದೊಂದು ಪ್ರಶ್ನೆ ಎದ್ದಿದ್ದು, ಕರ್ನಾಟಕ ವಿದ್ಯಾವರ್ಧಕ ಸಂಘವು ಸೋಲಾಪುರ ಜಿಲ್ಲೆಯ ಕನ್ನಡ ಸಂಘಗಳ ಸಹಯೋಗದಲ್ಲಿ ಸೋಲಾಪುರದಲ್ಲಿ ಆಯೋಜಿಸಿರುವ 10ನೇ ಮಹಾಮೇಳದ ಹೊರನಾಡು ಕನ್ನಡಿಗರ ಸುಖ-ದುಃಖಗಳು ಗೋಷ್ಠಿಯಲ್ಲಿ.

ಭಾಷೆ, ಉದ್ಯೋಗ, ಶಿಕ್ಷಣ ಸೇರಿದಂತೆ ಅನೇಕ ಸವಾಲುಗಳನ್ನು ಎದುರಿಸಿಯೂ ಸಮರ್ಥವಾಗಿ ಬದುಕುತ್ತಿರುವ ಗಡಿನಾಡು ಹಾಗೂ ಹೊರನಾಡು ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಹೃದಯದಲ್ಲಿಟ್ಟುಕೊಂಡಿದ್ದಾರೆ. ಆದರೆ, ಸ್ಥಳೀಯ ಭಾಷೆಯನ್ನು ವಿರೋಧಿಸಿ ಕನ್ನಡವನ್ನು ಎತ್ತಿ ಹಿಡಿಯಲು ತುಂಬ ತೊಂದರೆ ಪಡುತ್ತಿದ್ದಾರೆ. ಅಂತಹ ತೊಂದರೆಗಳನ್ನು ಕರ್ನಾಟಕ ಸರ್ಕಾರ ಸರಿಪಡಿಸಬೇಕು ಎಂದು ಹೊರನಾಡು ಕನ್ನಡ ಸಂಘಗಳ ಪ್ರತಿನಿಧಿಗಳು ಪ್ರತಿಪಾದನೆ ಮಾಡಿದರು.

ಪಠ್ಯಪುಸ್ತಕ ಬೇಕು:ಆಂಧ್ರಪ್ರದೇಶದ ಅಧೋನಿಯ ಎಂ. ಓಂಕಾರ, ಕನ್ನಡ ಶಾಲೆಗಳಿಗೆ ಪಠ್ಯಪುಸ್ತಕಗಳು ಬರುತ್ತಿಲ್ಲ. ಆತ್ಮಸಾಕ್ಷಿ ಕೊಲೆ ಮಾಡಿ ತೆಲುಗು ಕಲಿಯಬೇಕಾದ ಸ್ಥಿತಿ ಇದೆ. ತೆಲುಗು ಭಾಷೆಯ ಒತ್ತಡಕ್ಕೆ ಶರೀರ ಅಂಜಿದರೂ ಮನಸ್ಸು ಮಾತ್ರ ಕನ್ನಡ ಎನ್ನುತ್ತಿದೆ. ಇತ್ತ ಕನ್ನಡವೂ ಅಲ್ಲ, ತೆಲುಗೂ ಅಲ್ಲದೇ ಶಿಕ್ಷಣ, ಉದ್ಯೋಗ ಸಿಗದಂತಾಗಿದೆ ಎಂದರು.

ಅಸ್ತಿತ್ವ ಅಲುಗಾಡುತ್ತಿದೆ:

ಕೇರಳದ ಕಾಸರಗೋಡಿನ ರಾಧಾಕೃಷ್ಣ ಮಾತನಾಡಿ, ಕಾಸರಗೋಡಿನ ಕನ್ನಡಿಗರಿಗೆ ಸಂವಿಧಾನಬದ್ಧ ಸವಲತ್ತುಗಳು ಸಿಗುತ್ತಿಲ್ಲ. ಕನ್ನಡದ ಶಾಲೆಗಳು, ಸರ್ಕಾರಿ ಕಚೇರಿಗಳಲ್ಲಿ ಮಲೆಯಾಳಿ ಅಧಿಕಾರಯನ್ನು ನೇಮಿಸಿ ಸವಲತ್ತು ದೊರೆಯದಂತೆ ಮಾಡಲಾಗುತ್ತಿದೆ. ಹಂತ ಹಂತವಾಗಿ ಮಲೆಯಾಳ ಭಾಷಿಕರು ಕನ್ನಡಿಗರ ಅಸ್ತಿತ್ವ ಅಲುಗಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಿಭೆ, ಪಾಂಡಿತ್ಯ ಎಲ್ಲವೂ ಇದ್ದರೂ ಅನಿವಾರ್ಯವಾಗಿ ಇನ್ನೊಂದು ಭಾಷೆ ಅವಲಂಬಿಸುವ ದುರಂತ ನಮ್ಮದಾಗಿದೆ ಎಂದು ನೋವು ತೋಡಿಕೊಂಡರು.

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸವನ್ನು ಕೇರಳ-ಕರ್ನಾಟಕ ಸರ್ಕಾರ ಗಿಳಿವಿಂಡು ಹೆಸರಿನಲ್ಲಿ ಸ್ಮಾರಕವಾಗಿ ನಿರ್ಮಿಸಿವೆ. ಕೆಲವು ಸೌಲಭ್ಯಗಳು ಅಪೂರ್ಣವಾಗಿದ್ದು, ಅರೆಕಾಲಿಕ ಸಿಬ್ಬಂದಿಗೆ ಸಂಬಳ ನೀಡುತ್ತಿಲ್ಲ ಎಂದು ಕಾಸರಗೋಡಿನ ಶಿವರಾಮ ಅವರು ಕಳವಳ ವ್ಯಕ್ತಪಡಿಸಿದರು. ಕೇರಳ-ಕನ್ನಡ ಅಕಾಡೆಮಿ ಸ್ಥಾಪಿಸಿ ₹1 ಕೋಟಿ ಅನುದಾನ ನೀಡಬೇಕು ಎಂಬ ಒತ್ತಾಯ ಮಾಡಿದರು.

ಕಾಸರಗೋಡಿನ ಮತ್ತೊಬ್ಬ ಕನ್ನಡಿಗ ಕೆ. ಗುರುಪ್ರಸಾದ, 2025ರಲ್ಲಿ ಮಲಯಾಳ ಭಾಷಾ ಮಸೂದೆ ಜಾರಿಗೊಳಿಸಿದ್ದು, ಈ ಮಸೂದೆಗೆ ತಿದ್ದುಪಡಿ ತರಬೇಕು. ಕಾಸರಗೋಡು ಸೇರಿದಂತೆ ಹೊರನಾಡಿನಲ್ಲಿ ರಂಗಭೂಮಿ, ಸಂಗೀತ, ಯಕ್ಷಗಾನ, ಸಾಹಿತಿಗಳಿದ್ದು, ಅಕಾಡೆಮಿಗಳಿಗೆ ಸದಸ್ಯರ ನೇಮಕ ಹಾಗೂ ಪ್ರಶಸ್ತಿಗಳಿಗೆ ನಮ್ಮನ್ನೂ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಇನ್ನು ಗೋವಾದ ಕನ್ನಡಗ ಪ್ರೊ. ಪ್ರಭುಲಿಂಗ ದಂಡಿನ, ಸೋಲಾಪುರ ಭಾಗದಿಂದ ವಾಸ್ಕೋಗೆ ಸಾಕಷ್ಟು ಕಾರ್ಮಿಕ ವರ್ಗ ಬರುತ್ತಿದ್ದು, ಕೂಡಲೇ ವಾಸ್ಕೋದಿಂದ ಸೋಲಾಪುರ ರೈಲು ಬಿಡಬೇಕು. ವಾಸ್ಕೋದಲ್ಲಿ ಕನ್ನಡ ಶಾಲೆ ಇದ್ದು, 150ರಿಂದ ಮಕ್ಕಳ ಸಂಖ್ಯೆ 20ಕ್ಕೆ ಇಳಿದಿದೆ. ಕಾರಣ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಕಾರವಾರದಲ್ಲಿರುವುದು. ಆದ್ದರಿಂದ ವಾಸ್ಕೋದಲ್ಲಿಯೇ ಎಸ್‌ಎಸ್‌ಎಲ್‌ಸಿ ಕೇಂದ್ರ ಸ್ಥಾಪಿಸಲು ಆಗ್ರಹಿಸಿದರು.

ಅಧೋನಿ, ಆಲೂರು, ರಾಯದುರ್ಗ, ಮಗಡಸೇರಾ ಆಂಧ್ರ ಸೇರಿಸಲು ಕನ್ನಡಿಗರೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದ ಆಂಧ್ರಪ್ರದೇಶ ಜಿ. ದೊಡ್ಡಬಸಪ್ಪ, ಇಷ್ಟಾಗಿಯೂ ಕನ್ನಡವನ್ನು ಹೃದಯದಲ್ಲಿಟ್ಟು ಪೂಜಿಸುತ್ತಿದ್ದೇವೆ. ಗಡಿನಾಡು-ಹೊರನಾಡು ವ್ಯಾಖ್ಯಾನ ತಪ್ಪಾಗಿದ್ದು, ಈ ವ್ಯಾಖ್ಯಾನ ಸರಿಪಡಿಸಲು ಆಗ್ರಹಿಸಿದರು.

ಮಹಾರಾಷ್ಟ್ರದ ಬಸವರಾಜ ಮಸೂತಿ, ಗಡಿನಾಡು-ಹೊರನಾಡು ಸಮಸ್ಯೆಗಳನ್ನು ಸೃಷ್ಟಿ ಮಾಡಿದ್ದೇ ಕರ್ನಾಟಕ ಸರ್ಕಾರ. ಪಿಯುಸಿ ಹಾಗೂ ನಂತರದ ತರಗತಿಗಳಿಗೆ ಕನ್ನಡದ ಪುಸ್ತಗಳು ಮಹಾರಾಷ್ಟ್ರದಲ್ಲಿ ಸಿಗುತ್ತಿಲ್ಲ. ಮರಾಠಿಯಲ್ಲಿಯೇ ಕನ್ನಡ ಕಲಿಯುವಂತಾಗಿದೆ. ಗಡಿನಾಡು-ಹೊರನಾಡು ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರಕ್ಕೆ ಮುಖ್ಯಮಂತ್ರಿಗಳ ಸಮ್ಮುಖ ಹಾಗೂ ಸಂಘದ ನಾಯಕತ್ವದಲ್ಲಿ ಪ್ರತ್ಯೇಕ ಸಭೆ ಕರೆಯಬೇಕು. ಅಲ್ಲಿ ಸಂಬಂಧಿಸಿದ ಅಧಿಕಾರಿಗಳು ಇರಬೇಕು ಎಂದರು.

ಪ್ರತ್ಯೇಕ ಸಮಸ್ಯೆಗಳಿವೆ:

ತಮಿಳುನಾಡು ಮದ್ರಾಸ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ತಮಿಳು ಸೆಲ್ವಿ, ಎಲ್ಲ ರಾಜ್ಯಗಳ ಗಡಿ ಭಾಗಳಲ್ಲಿರುವ ಕನ್ನಡಿಗರ ಸಮಸ್ಯೆಗಳು ಭಿನ್ನವಾಗಿವೆ. ಆದ್ದರಿಂದ ಈ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಆಲಿಸಿ ಅವುಗಳಿಗೆ ಪರಿಹಾರ ಒದಗಿಸಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು ಭಿನ್ನವಾಗಿರುವ ಸಮಸ್ಯೆಗಳಿಗೆ ಏಕರೀತಿಯ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಗಂಭೀರ ಚಿಂತನೆ ನಡೆಯಬೇಕು ಎಂದರು.

ಗುಜರಾತಿನ ವಾಪಿ ಕನ್ನಡ ಸಂಘದಿಂದ ಮಲ್ಲಿಕಾ ಕಾರಂತ, ಕಾಸರಗೋಡಿನ ಕೆ. ಜಗದೀಶ ಕೂಡ್ಲ, ಮಾರಾಷ್ಟ್ರದ ಅನಿಲ ಬೋಜೆ ಮಾತನಾಡಿದರು.

ಕನ್ನಡ ಕಲಿಸುವ ಪ್ರಯತ್ನ:

ಈ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ, ನಾಲ್ಕು ತಿಂಗಳಲ್ಲಿ ಧಾರವಾಡದಲ್ಲಿ ಮೂರು ದಿನಗಳ ವಿಚಾರ ಸಂಕಿರಣ ಆಯೋಜಿಸುತ್ತಿದ್ದು, ಅಲ್ಲಿ ಗಡಿನಾಡು-ಹೊರನಾಡು ಹೊರ ದೇಶಗಳಲ್ಲಿನ ಕನ್ನಡಿಗರನ್ನು ಕರೆಯಿಸಿ ಅವರ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಕನ್ನಡದ ದೊಡ್ಡ ಮನೆಯೊಳಗೆ ಅವರನ್ನು ಹೇಗೆ ಇಟ್ಟುಕೊಳ್ಳಬೇಕು ಎಂಬ ಚಿಂತನೆ ಇದೆ. ಜತೆಗೆ ಕರ್ನಾಟಕ ವಿದ್ಯಾವರ್ಧಕ ಸಂಘವು ತಂತ್ರಜ್ಞಾನ ಬಳಸಿ ಹೊರನಾಡು-ಗಡಿನಾಡ ಕನ್ನಡಿಗರ ಮಕ್ಕಳಿಗೆ ಆನ್‌ಲೈನ್‌ ಮೂಲಕ ಕನ್ನಡ ಕಲಿಸುವ ಪ್ರಯತ್ನ ಮಾಡಲು ಯೋಜಿಸಿದೆ ಎಂದರು.