ನೀರು ಸಂರಕ್ಷಣೆ, ಕೃಷಿ ಅಭಿವೃದ್ಧಿಗೆ ಸಹಕಾರಿ ರೈತ ಬಂಧು ಯೋಜನೆ

| Published : Mar 22 2025, 02:06 AM IST

ಸಾರಾಂಶ

ಮುಂಡರಗಿ ಮತ್ತು ಡಂಬಳ ಹೋಬಳಿಯ‌ ಗ್ರಾಮಗಳಲ್ಲಿ ಎಸ್‌ಬಿಐ ಫೌಂಡೇಶನ್, ಸಂಕಲ್ಪ ಸಂಸ್ಥೆ ಸಹಾಯದಿಂದ ರೈತ ಬಂಧು ಯೋಜನೆಯಡಿ ಕೃಷಿ ಹೊಂಡಗಳು ಮತ್ತು ಬದುವುಗಳನ್ನು ನಿರ್ಮಿಸಿ, ರೈತರ ಭೂಮಿಯಲ್ಲಿ ನೀರು ಸಂರಕ್ಷಣೆ ಮತ್ತು ಕೃಷಿ ಅಭಿವೃದ್ಧಿಗೆ ಸಹಾಯ ಮಾಡಲಾಗಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಕನ್ನಡಪ್ರಭ ವಾರ್ತೆ ಡಂಬಳ

ಮುಂಡರಗಿ ಮತ್ತು ಡಂಬಳ ಹೋಬಳಿಯ‌ ಗ್ರಾಮಗಳಲ್ಲಿ ಎಸ್‌ಬಿಐ ಫೌಂಡೇಶನ್, ಸಂಕಲ್ಪ ಸಂಸ್ಥೆ ಸಹಾಯದಿಂದ ರೈತ ಬಂಧು ಯೋಜನೆಯಡಿ ಕೃಷಿ ಹೊಂಡಗಳು ಮತ್ತು ಬದುವುಗಳನ್ನು ನಿರ್ಮಿಸಿ, ರೈತರ ಭೂಮಿಯಲ್ಲಿ ನೀರು ಸಂರಕ್ಷಣೆ ಮತ್ತು ಕೃಷಿ ಅಭಿವೃದ್ಧಿಗೆ ಸಹಾಯ ಮಾಡಲಾಗಿದೆ.

ಈ ಯೋಜನೆ 2022ರ ಮಾ. 13ರಂದು ಜಾರಿಗೊಂಡಿದ್ದು, 2023ರ ಮಾ. 22ರಂದು ಉದ್ಘಾಟನೆಯಾಗಿದೆ. ಇಂದಿಗೆ ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಅವಧಿಯಲ್ಲಿ ಒಟ್ಟು 36 ಕೃಷಿ ಹೊಂಡಗಳು ಮತ್ತು 148 ಬದುಗಳು ನಿರ್ಮಾಣ ಮಾಡಲಾಗಿದ್ದು, 132 ರೈತರು ಇದರ ಲಾಭ ಪಡೆಯುತ್ತಿದ್ದಾರೆ. ಇದರಿಂದ 713 ಎಕರೆ ಕೃಷಿ ಭೂಮಿಯಲ್ಲಿ 11.40 ಲಕ್ಷ ಲೀಟರ್ ಅಂತರ್ಜಲ ಮಟ್ಟ ಹೆಚ್ಚಳ ಕಂಡು ಬಂದಿದೆ. ಇದರ ಜತೆಗೆ 2 ಇಂಚು ಮಣ್ಣಿನ ಸವಕಳಿ ತಡೆಗಟ್ಟಿ ಫಲವತ್ತಾದ ಬೆಳೆಯನ್ನು ಬೆಳೆಸಲು ಸಹಾಯ ಮಾಡಲಾಗಿದೆ. ಈ ವರ್ಷದಲ್ಲಿ ಮುಂಡರಗಿ ತಾಲೂಕಿನಲ್ಲಿ 200 ಕೆರೆಗಳನ್ನು ನಿರ್ಮಿಸಲು ಸಂಕಲ್ಪ ಮಾಡಲಾಗಿದೆ.

ಯೋಜನೆಯಲ್ಲಿನ ಎಲ್ಲ ಕಾರ್ಯಗಳು ಇತರರಿಗೆ ಸ್ಫೂರ್ತಿ ನೀಡುವಂತಾಗಿದ್ದು, ಇದು ಯಾರೊಂದಿಗೂ ಸ್ಪರ್ಧೆ ಅಲ್ಲ, ನೀರು ಸಂರಕ್ಷಣೆ ಕಾರ್ಯದಲ್ಲಿ ಒಂದು ಮಹತ್ವದ ಹಂತವಾಗಿದೆ. ಎಸ್‌ಬಿಐ ಫೌಂಡೇಶನ್‌ಗೆ ತನ್ನ ಸಿ‌ಎಸ್‌ಆರ್ ಯೋಜನೆಯಡಿ ಇನ್ನೂ ಮುಂಬರುವ ವರ್ಷದಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ, ಲಕ್ಷ್ಮೇಶ್ವರ ಮತ್ತು ಗದಗ ತಾಲೂಕುಗಳಲ್ಲಿ 25ಕ್ಕಿಂತ ಹೆಚ್ಚು ಹಳ್ಳಿಗಳಲ್ಲಿ ಈ ಕಾರ್ಯ ವಿಸ್ತರಿಸುವ ಯೋಚನೆ ಇದೆ. ರೈತರಿಗಾಗಿ, ಸದಾ ರೈತ ಬಂಧುವಾಗಿ ಸೇವೆ ಸಲ್ಲಿಸುತ್ತಿರುವ ಸಂಕಲ್ಪ ಸಂಸ್ಥೆ ಮತ್ತು ಎಸ್‌ಬಿಐ ಫೌಂಡೇಶನ್ ಈ ಕಾರ್ಯಕ್ಕೆ ನಿರಂತರ ಬೆಂಬಲ ನೀಡುತ್ತಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಲು ಮುಂದಾಗಬೇಕು ಎನ್ನುತ್ತಾರೆ ಸಂಕಲ್ಪ ಸಂಸ್ಥೆಯ ಸಿಇಒ ಸಿಕಂದರ ಮೀರಾನಾಯಕ.ಗ್ರಾಮದ ಜನರು ನಮ್ಮ ರೈತ ಬಂಧು ಯೋಜನೆಗೆ ಕೈಜೋಡಿಸಿದರೆ ಹೆಚ್ಚು ಕೆಲಸ ಮಾಡಲು ಸಾಧ್ಯವಾಗುತ್ತದೆ. ಸಂಕಲ್ಪ ಸಂಸ್ಥೆ ಅದ್ಭುತ ಕೆಲಸ ಮಾಡುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಂಡು, ಅಂತರ್ಜಲ ಮಟ್ಟ ಹೆಚ್ಚಿಸಿ ಉತ್ತಮ ಬೆಳೆಗಳನ್ನು ಬೆಳೆಸಿ ದೇಶಕ್ಕೆ ಉತ್ತಮ ಆಹಾರ ಒದಗಿಸಬೇಕು ಎಂದು ಎಸ್‌ಬಿಐ ಫೌಂಡೇಶನ್‌ ಮ್ಯಾನೇಜಿಂಗ್ ಡೈರೆಕ್ಟರ್ ಸಂಜಯ್ ಪ್ರಕಾಶ್ ಹೇಳಿದರು.ನಮ್ಮನ್ನು ಗುರುತಿಸಿ ನಮ್ಮ ಜಿಲ್ಲೆಯಲ್ಲಿಯೇ ಕೆಲಸ ಮಾಡಲು ನಮಗೆ ಅವಕಾಶ ಕೊಟ್ಟ ಎಸ್‌ಬಿಐ ಫೌಂಡೇಶನ್‌ಗೆ ಕೃತಜ್ಞತೆಗಳು. ಈ ಯೋಜನೆಯ ಯಶಸ್ಸು ಭವಿಷ್ಯದ ಪೀಳಿಗೆಗೆ ಕೃಷಿ ಅಭಿವೃದ್ಧಿಯ ಮಹತ್ವವನ್ನು ಸಾರಲಿದೆ ಎಂದು ಸಂಕಲ್ಪ ಸಂಸ್ಥೆಯ ಸಿಇಒ ಸಿಕಂದರ ಮೀರಾನಾಯಕ ಹೇಳಿದರು.