ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಬೆಂಗಳೂರು ನಗರದ ವಾಹನ ದಟ್ಟಣೆಯನ್ನು ಗಣನೀಯವಾಗಿ ತಗ್ಗಿಸುವ ಉಪ ನಗರ ವರ್ತುಲ ರಸ್ತೆ ಯೋಜನೆ (ಎಸ್ ಟಿಆರ್ ಆರ್) ಕೇಂದ್ರ ಸಂಪುಟ ಸಭೆಯ ಮುಂದೆ ಬರಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ತಾಲೂಕುಗಳ ಮೂಲಕ ಹಾದು ಹೋಗುವ ರಸ್ತೆ ಯೋಜನೆಗೆ ''''ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿ'''' ಒಪ್ಪಿಗೆ ನೀಡಿದೆ ಎನ್ನಲಾಗಿದೆ.ಈ ಬಗ್ಗೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದು, ಶೀಘ್ರವೇ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಯೋಜನೆಗೆ ಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಸಂಸತ್ ಭವನದ ಕಚೇರಿಯಲ್ಲಿ ಗಡ್ಕರಿ ಅವರನ್ನು ಭೇಟಿಯಾದ ಸಚಿವ ಕುಮಾರಸ್ವಾಮಿ ಅವರು, ಈ ಯೋಜನೆಯ ಬಗ್ಗೆ ಮಹತ್ವದ ಚರ್ಚೆ ನಡೆಸಿದರು. ಯೋಜನೆಗೆ ''''ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೌಲ್ಯಮಾಪನ ಸಮಿತಿ'''' ಒಪ್ಪಿಗೆ ನೀಡಿದ್ದು, ಈಗ ಸಂಪುಟದ ಮುಂದೆ ಬರಲಿದೆ. ಸಂಪುಟದಲ್ಲಿ ಯೋಜನೆಗೆ ಒಪ್ಪಿಗೆ ಕೊಡಿಸಲಾಗುವುದು ಎಂಬ ಭರವಸೆ ದೊರೆತಿದೆ.ಗಡ್ಕರಿ ಅವರ ಸಕಾರಾತ್ಮಕ ಸ್ಪಂದನೆ ಬಗ್ಗೆ ಸಂತಸ ವ್ಯಕ್ತಪಡಿಸಿದ ಕುಮಾರಸ್ವಾಮಿ, ಉಪನಗರ ವರ್ತುಲ ರಸ್ತೆ ಯೋಜನೆ 2013ರಲ್ಲಿಯೇ ಚಾಲನೆ ಪಡೆದಿತ್ತು. ಆದರೆ, ಹಲವಾರು ಕಾರಣಗಳಿಂದ ಅದು ನೆನೆಗುದಿಗೆ ಬಿದ್ದಿತ್ತು. ಬೆಂಗಳೂರು ಸುತ್ತಮುತ್ತ ಇರುವ ಎಂಟು ಕೈಗಾರಿಕಾ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದೆ. ಈ ಯೋಜನೆಯ ಕಾರ್ಯಗತಕ್ಕೆ ಮಾಜಿ ಪ್ರಧಾನಿಗಳಾದ ದೇವೇಗೌಡರು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಅವರು ಬರೆದಿದ್ದ ಪತ್ರವನ್ನು ಗಡ್ಕರಿ ಅವರಿಗೆ ನೀಡಲಾಯಿತು ಎಂದು ಹೇಳಿದರು.
4 ರಿಂದ 6 ಪಥಗಳ ಈ ಯೋಜನೆಯು ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಆನೇಕಲ್, ಕನಕಪುರ, ರಾಮನಗರ ಮತ್ತು ಮಾಗಡಿ ಸೇರಿದಂತೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಉಪನಗರ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಬೆಂಗಳೂರು - ಚೆನ್ನೈ ಎಕ್ಸ್ ಪ್ರೆಸ್ ಹೈವೇಯನ್ನು ಕೂಡುತ್ತದೆ. ಜತೆಗೆ ತಮಿಳುನಾಡಿನ ಹೊಸೂರನ್ನೂ ಸಂಪರ್ಕಿಸುತ್ತದೆ. ಈ ಉಪನಗರ ವರ್ತುಲ ರಸ್ತೆಯನ್ನು ಬೆಂಗಳೂರು - ಚೆನ್ನೈ ಎಕ್ಸ್ ಪ್ರೆಸ್ ಹೆದ್ದಾರಿಯ ಸಂಪರ್ಕಗೊಳಿಸಲಾಗುವುದು. ಕೈಗಾರಿಕೆಗಳಿಗೆ ಸರಕು ಸಾಗಿಸುವ ಯಾವುದೇ ಬೃಹತ್ ವಾಹನ ಬೆಂಗಳೂರು ನಗರದೊಳಕ್ಕೆ ಪ್ರವೇಶ ಮಾಡದಂತೆ ತಡೆಯುವುದೇ ಈ ಯೋಜನೆಯ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಿಗೆ ಈ ಯೋಜನೆಯಿಂದ ಹೆಚ್ಚು ಲಾಭವಾಗಲಿದೆ. ಈ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ಸುಮಾರು 135 ಕಿ.ಮೀ. ದೂರ ಹಾದು ಹೋಗಲಿದ್ದು, ಯೋಜನೆಯ ಸುಮಾರು ₹4,750 ಕೋಟಿ ವೆಚ್ಚದಲ್ಲಿ ಕಾರ್ಯಗತ ಆಗುತ್ತಿದೆ. 4 ರಿಂದ 6 ಪಥ ಹೊಂದಿರುವ ಸಂಪೂರ್ಣ ನಿಯಂತ್ರಿತ ಪ್ರವೇಶ ವ್ಯವಸ್ಥೆಯನ್ನು ಹೊಂದಿರುವ ಈ ಹೆದ್ದಾರಿಯು ಯಾವುದೇ ಅಡೆತಡೆಗಳಿಲ್ಲದೆ ಸಂಚಾರ ಸೌಲಭ್ಯ ಕಲ್ಪಿಸಲಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
;Resize=(128,128))
;Resize=(128,128))
;Resize=(128,128))