ಕನ್ನಡಪ್ರಭ ವಾರ್ತೆ ಮಂಗಳೂರು

ಸಹಕಾರಿ ಸಂಘಗಳಿಂದ ಸಮಾಜಮುಖಿಯಾದ ಕೆಲಸಗಳು ನಡೆಯಬೇಕು. ಸಹಕಾರ ತತ್ವದ ಸಾರವನ್ನು ತಿಳಿದುಕೊಂಡು ಅದನ್ನು ಸರಿಯಾಗಿ ಬಳಸಿಕೊಂಡರೆ ಬದುಕು ಉತ್ತಮವಾಗಿ ರೂಪುಗೊಳ್ಳುತ್ತದೆ. ಮಾನವೀಯ ಮೌಲ್ಯಗಳನ್ನು ಬದುಕಿನಲ್ಲಿ ಆಳವಡಿಸಿಕೊಂಡು ಮುಂದೆ ಸಾಗಬೇಕು. ಸನಾತನವನ್ನು ಉಳಿಸಿ ಬೆಳೆಸುವ ಪ್ರಯತ್ನವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಎಸ್‌.ಕೆ. ಗೋಲ್ಡ್‌ ಸ್ಮಿತ್‌ ಇಂಡಸ್ಟ್ರಿಯಲ್‌ ಕೋ ಆಪರೇಟಿವ್‌ ಸೊಸೈಟಿ ವತಿಯಿಂದ ನಗರದ ಬಾಳಂಭಟ್‌ ಸಭಾಂಗಣದಲ್ಲಿ

ಭಾನುವಾರ ನಡೆದ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ವಿದ್ಯೆಯಿಂದ ಜ್ಞಾನ ಹೆಚ್ಚಾಗಬೇಕು ಹೊರತು ಅಹಂಕಾರ ಹೆಚ್ಚಾಗಬಾರದು. ಇದು ಮುಂದೆ ವಿಷಕ್ಕೆ ಸಮಾನವಾಗಿ ಬಿಡುತ್ತದೆ. ಜ್ಞಾನದಿಂದ ಅಹಂಕಾರ ಮೂಡಿದರೆ ಇದರಿಂದ ಸಮಾಜಕ್ಕೆ ಒಳಿತಾಗದು. ವಿದ್ಯೆಯಿಂದ ಗಳಿಸಿದ ಜ್ಞಾನದಿಂದ ವಿನಯತೆ ಹೆಚ್ಚಿದಂತೆ ಸಮಾಜಕ್ಕೆ ಒಳಿತು ಉಂಟಾಗುತ್ತದೆ ಎಂದರು.


ಕಾರ್ಕಳ ಜ್ಞಾನಸುಧಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ.ಸುಧಾಕರ ಶೆಟ್ಟಿ ಮಾತನಾಡಿ, ಪಾಲ್ಕೆ ಬಾಬುರಾಯ ಆಚಾರ್ಯ ಅವರ ಬದುಕು ಇಂದಿನ ವಿದ್ಯಾರ್ಥಿಗಳಿಗೆ ಆದರ್ಶವಾಗಿದೆ. ಎಸ್‌.ಕೆ. ಗೋಲ್ಡ್‌ ಸ್ಮಿತ್‌ ಇಂಡಸ್ಟ್ರಿಯಲ್‌ ಕೋ ಆಪರೇಟಿವ್‌ ಸೊಸೈಟಿ ಮೂಲಕ ನೂರಾರು ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರವನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಮತ್ತಷ್ಟು ಬಲ ನೀಡಿದಂತಾಗಿದೆ ಎಂದರು.

ಎಸ್‌ಎಸ್‌ಎಲ್‌ಸಿಯ 181 ಮಂದಿ, ಪಿಯುಸಿಯ 221 ಮಂದಿ ಸೇರಿದಂತೆ 402 ವಿದ್ಯಾರ್ಥಿಗಳಿಗೆ 15,17,500 ರು. ಮೊತ್ತದ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ, ಸಹಾಯಧನ ನೀಡಲಾಯಿತು. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಎಸ್‌.ಕೆ. ಗೋಲ್ಡ್‌ ಸ್ಮಿತ್‌ ಇಂಡಸ್ಟ್ರಿಯಲ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.

ಆಡಳಿತ ಮಂಡಳಿ ನಿರ್ದೇಶಕರಾದ ಕೆ.ಯಜ್ಞೇಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ, ವಿಜಯ ಆಚಾರ್‌, ಕೆ.ಶಶಿಕಾಂತ್‌ ಆಚಾರ್ಯ, ಮಲ್ಲಪ್ಪ ಎನ್‌. ಪತ್ತಾರ್‌, ರೋಹಿಣಿ ಎಂ.ಪಿ, ಜ್ಯೋತಿ ಎಂ.ವಿ, ರಮೇಶ್‌ ರಾವ್‌ ಯು., ಮಂಜುನಾಥ ಆಚಾರ್ಯ, ಚಂದ್ರಶೇಖರ ಎ.ಎಸ್‌. ಇದ್ದರು.

ಉಪಾಧ್ಯಕ್ಷ ಎ.ಆನಂದ ಆಚಾರ್ಯ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಪ್ರಸ್ತಾವಿಕ ಮಾತನಾಡಿದರು. ಕೆ.ಪ್ರಕಾಶ್‌ ಆಚಾರ್ಯ ವಂದಿಸಿದರು. ಉಷಾ ಮನೋಜ್‌ ಹಾಗೂ ಶ್ರೀಕಾಂತ್‌ ನಿರೂಪಿಸಿದರು.