ಇಲ್ಲಿಯ ಗ್ರಾಮದೇವಿ ಮಾರಿಕಾಂಬಾ (ದ್ಯಾಮವ್ವ) ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಆಚರಿಸಲಾಗುವ ೫ ಹೊರಬೀಡು ಆಚರಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ.
ಗ್ರಾಮದೇವಿ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆ ಆಚರಣೆಸಂತೋಷ ದೈವಜ್ಞ
ಕನ್ನಡಪ್ರಭ ವಾರ್ತೆ ಮುಂಡಗೋಡಇಲ್ಲಿಯ ಗ್ರಾಮದೇವಿ ಮಾರಿಕಾಂಬಾ (ದ್ಯಾಮವ್ವ) ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಆಚರಿಸಲಾಗುವ ೫ ಹೊರಬೀಡು ಆಚರಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ.
ಲೋಕ ಕಲ್ಯಾಣ ಹಾಗೂ ಸುಭಿಕ್ಷಾರ್ಥವಾಗಿ, ಜನತೆಯ ಆಯುರಾರೋಗ್ಯ, ಪ್ರತಿಷ್ಠೆ, ಕೀರ್ತಿ ಗೌರವ ಹೆಚ್ಚಿಸಿ ಜನತೆಯ ಏಳ್ಗೆ ಮತ್ತು ಸಕಾಲಕ್ಕೆ ಸಮರ್ಪಕ ಮಳೆ ಬೆಳೆಯಾಗಿ ದನ-ಕರು ಸೇರಿದಂತೆ ಜೀವ ಕುಲ ಸಮೃದ್ಧಿಯಾಗಲು ದೇವಿಯ ಅನುಗ್ರಹ ಪ್ರಾಪ್ತಿಸಿಕೊಳ್ಳುವ ಉದ್ದೇಶದಿಂದ ಗ್ರಾಮದೇವಿ ಮಾರಿಕಾಂಬೆಯನ್ನು ಭಕ್ತರು ಪ್ರಾರ್ಥಿಸುತ್ತಾರೆ.ಜ. ೧೩ರಂದು ೧ನೇ, ೧೬ರಂದು ೨ನೇ, ೨೦ರಂದು ೩ನೇ, ೨೩ರಂದು ೪ನೇ, ೨೭ರಂದು ೫ನೇ ಹೊರಬೀಡು ನಡೆಯಲಿದೆ. ಇಲ್ಲಿಯ ಗ್ರಾಮದೇವಿ ಜಾತ್ರೆಗೆ ಶತಮಾನಗಳ ಇತಿಹಾಸವಿದೆ. ೮೦ ವರ್ಷಗಳಿಂದ ಜಾತ್ರೆ ಸ್ಥಗಿತಗೊಂಡಿತ್ತು. ಇಪ್ಪತ್ತು ವರ್ಷಗಳ ಹಿಂದೆ ಮತ್ತೆ ಆರಂಭಿಸಲಾಯಿತು. ೩ ವರ್ಷಕ್ಕೊಂದು ಬಾರಿ ಜಾತ್ರೆ ನಡೆಯುತ್ತದೆ. ಜಾತ್ರೆ ಪ್ರಾರಂಭವಾಗುವ ೨೦ ದಿನದ ಮುನ್ನ ಮೂರು ಮಂಗಳವಾರ ಹಾಗೂ ೨ ಶುಕ್ರವಾರ ಹೀಗೆ ೫ ಹೊರಬೀಡು ಆಚರಿಸಲಾಗುತ್ತದೆ. ಬೆಳಗ್ಗೆ ೧೦ ಗಂಟೆಯೊಳಗಾಗಿ ಎಲ್ಲ ಕೆಲಸ ಮುಗಿಸಿಕೊಂಡು ರಂಗೋಲಿ ಹಾಕಿ ದೇವಿಗೆ ನೈವೇದ್ಯ ತೆಗೆದಿಟ್ಟು ಮನೆಗೆ ಬೀಗ ಜಡಿದು ಊರು ಬಿಟ್ಟು ಹೋದವರು ಸಂಜೆ ೪ ಗಂಟೆಯ ಆನಂತರ ಗ್ರಾಮ ಪ್ರವೇಶಿಸುವ ನಿಯಮ ಹೊರಬೀಡಿನದ್ದು. ಅದರಂತೆ ಹೊರಬೀಡು ಆಚರಿಸುವವರಲ್ಲಿ ಹಲವರು ಬೇರೆ ಬೇರೆ ಊರಿಗೆ ಹೋದರೆ, ಬಹುತೇಕರು ಊಟ-ಉಪಾಹಾರ ಸಿದ್ಧಪಡಿಸಿಕೊಂಡು ಸುತ್ತಮುತ್ತಲಿನ ಪ್ರವಾಸಿ ತಾಣ, ತೋಟ-ಗದ್ದೆಗಳಿಗೆ ತೆರಳಿ ಇಡೀ ದಿನ ಕಳೆದು ಸಂಜೆ ಮರಳಿ ಬರುತ್ತಾರೆ. ಇನ್ನ ಕೆಲವರು ದೇವಾಲಯ ಮುಂತಾದ ಕಡೆ ಹೋಗಿ ದಿನ ಕಳೆಯುತ್ತಾರೆ.ಹೊರಬೀಡಿನಲ್ಲಿ ನಿರ್ಜನವಾಗುವ ಗ್ರಾಮದಲ್ಲಿ ಗ್ರಾಮದೇವಿ ಮಾರಿಕಾಂಬೆ ಸಂಚರಿಸಿ ಹೋಗುತ್ತಾಳೆ ಎಂಬ ಪ್ರತೀತಿ ಇದೆ. ಹೊರಬೀಡಿನಲ್ಲಿ ಗ್ರಾಮ ತೊರೆಯದವರು ಒಂದಿಲ್ಲೊಂದು ತೊಂದರೆ ಅನುಭವಿಸಿದ ಉದಾಹರಣೆ ಕೂಡ ಇವೆ. ಇದರಿಂದಾಗಿ ಯಾರು ಕೂಡ ನಿಯಮ ಉಲ್ಲಂಘಿಸುವ ಧೈರ್ಯ ಮಾಡುವುದಿಲ್ಲ.ಹೊರಬೀಡಿನ ದಿನಗಳಲ್ಲಿ ಮನೆಗಳು ಬೀಗ ಜಡಿದುಕೊಂಡರೆ, ಅಂಗಡಿ-ಮುಂಗಟ್ಟು ಸಂಪೂರ್ಣ ಬಂದ್ ಆಗಿ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಂಡಿರುತ್ತವೆ. ಬ್ಯಾಂಕ್ ಮುಂತಾದ ಸರ್ಕಾರಿ ಕಚೇರಿಗಳು ಸಂಪ್ರದಾಯದಂತೆ ಕಾರ್ಯನಿರ್ವಹಿಸಿದರೂ ವಹಿವಾಟಿನ ಕೊರತೆಯಿಂದ ಖಾಲಿ ಖಾಲಿಯಾಗಿ ಭಾಸವಾಗುತ್ತವೆ.ಆಧುನಿಕ ಯುಗದಲ್ಲಿ ಸಹ ಸಂಪ್ರದಾಯ, ಕಟ್ಟುಪಾಡುಗಳಿಗೆ ಒಳಪಟ್ಟು, ೫ ಹೊರಬೀಡಿನಲ್ಲಿ ಪಟ್ಟಣದ ಜನತೆ ಒಂದು ದಿನ ಒಂದೊಂದು ಕಡೆಗೆ ತೆರಳಿ ಕಾಲ ಕಳೆದು ಬರುವುದು ವಿಶೇಷವಾಗಿದ್ದು, ನಗರದ ಜನರೆಲ್ಲ ಹೊರಬೀಡು ಆಚರಿಸುತ್ತಾರೆ. ಆ ದಿನದಂದು ಪಟ್ಟಣದ ಬೀದಿಗಳು ಜನ ಹಾಗೂ ವಾಹನ ಸಂಚಾರ ಇಲ್ಲದೆ ಬಿಕೊ ಎನ್ನುತ್ತವೆ.