ಗುಡಿಯೊಳಗೆ ಶ್ರೀರಾಮನ ಪ್ರತಿಷ್ಠಾಪಿಸಿದರೆ ಸಾಲದು, ನಮ್ಮ ಮಕ್ಕಳ ಹೃದಯದಲ್ಲೂ ಶ್ರೀರಾಮನನ್ನು ಪ್ರತಿಷ್ಠಾಪಿಸಬೇಕಿದೆ ಎಂದು ಉಡುಪಿಯ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.

ಹುಬ್ಬಳ್ಳಿ: ಗುಡಿಯೊಳಗೆ ಶ್ರೀರಾಮನ ಪ್ರತಿಷ್ಠಾಪಿಸಿದರೆ ಸಾಲದು, ನಮ್ಮ ಮಕ್ಕಳ ಹೃದಯದಲ್ಲೂ ಶ್ರೀರಾಮನನ್ನು ಪ್ರತಿಷ್ಠಾಪಿಸಬೇಕಿದೆ ಎಂದು ಉಡುಪಿಯ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಹೇಳಿದರು.

ಇಲ್ಲಿನ ಭವಾನಿ ನಗರದ ರಾಯರಮಠದ ಆವರಣದಲ್ಲಿ ಭಾನುವಾರ ಸಂಜೆ ಅಶೋಕನಗರದ ಹಿಂದೂ ಸಮ್ಮೇಳನ ಸಮಿತಿ ವತಿಯಿಂದ ಆಯೋಜಿಸಿದ್ದ "ಹಿಂದೂ ಸಮ್ಮೇಳನ "ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾವು ಶುದ್ಧ ನ್ಯಾಯದ ಹೋರಾಟದ ಮೂಲಕ ಜಯ ಸಾದಿಸಿದ್ದೇವೆ. ಇಲ್ಲಿಗೆ ನಮ್ಮ ಜವಾಬ್ದಾರಿ ಮುಗಿದಿಲ್ಲ. ಕಟ್ಟಿದ ಮಂದಿರವನ್ನು ಮಂದಿರವನ್ನಾಗಿಯೇ ಉಳಿಸಿಕೊಳ್ಳಬೇಕು. ಮುಂದೆಂದೂ ಪರಕಿಯ ದಾಳಿಗೆ ತುತ್ತಾಗದಂತೆ ರಕ್ಷಣೆ ಮಾಡಬೇಕಿದೆ ಎಂದರು.

ಹಿಂದೂ ಜಾಗೃತಿ ಏಕೆ ಬೇಕು ಎನ್ನುವುದಕ್ಕೆ ಅಕ್ಕಪಕ್ಕದ ದೇಶದ ನೋಡಿದರೆ ಉತ್ತರ ಗೊತ್ತಾಗುತ್ತದೆ. ಅಲ್ಲಿನ ಸನಾತನಿಗಳ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇಷ್ಟಾದರೂ ನಾವು ಜಾಗ್ರತರಾಗದಿದ್ದರೆ ಇದೇ ಸ್ಥಿತಿ ಮುಂದುವರಿಯುತ್ತದೆ. ನಮ್ಮ ಸಂತತಿ, ಸನಾತನ ಸಂತತಿ ಬಹುಸಂತತಿಯಾಗಿ ಉಳಿದರೆ ಮಾತ್ರ ಮಂದಿರ ಮಂದಿರವಾಗಿ ಉಳಿಯುತ್ತದೆ ಎಂದರು.

ಜಾಗೃತರಾಗಿ

ನಮ್ಮ ಒಳಿತಗಲ್ಲ ವಿಶ್ವದ ಒಳಿತಿಗಾಗಿ ನಾವು ಜಾಗ್ರತರಾಗಬೇಕು. ಸಂಕುಚಿತ ಭಾವನೆ ಕೈಬಿಟ್ಟು ಒಳ್ಳೆಯ ವಿಚಾರ ಮಾಡಬೇಕು. ನಮ್ಮ ನಾಡು ಶ್ರೀ ರಾಮನ ಆದರ್ಶದ ನಾಡು. ಮಾತೃಭೂಮಿ ಬಗ್ಗೆ ಪ್ರತಿಯೊಬ್ಬರೂ ಗೌರವ ಭಾವನೆ ಹೊಂದಬೇಕು. ಶ್ರೀರಾಮ ತೋರಿದ ಆದರ್ಶವನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ನಮ್ಮ ನೆಲ, ಜಲ, ವೇಷಭೂಷಣ, ಸಂಸ್ಕೃತಿ, ನಡೆ ನುಡಿ, ಆಚಾರ, ವಿಚಾರಗಳನ್ನೇ ಮಾತೆ ಎಂಬಂತೆ ಗೌರವಿಸಿ ಬದುಕಿನಲ್ಲಿ ರೂಢಿಸಿಕೊಂಡು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು ಎಂದರು.

ಸಾತ್ವಿಕ ಹೋರಾಟ

ಮಕ್ಕಳಿಗೆ ದೇವರ, ಸಾಹಿತ್ಯ, ಪುರಾಣ, ಮಹಾಭಾರತದ ಹೆಸರನ್ನು ಇಡುವ ಮೂಲಕ ನಮ್ಮ ಸಂಸ್ಕೃತಿ, ಹಿನ್ನೆಲೆ ತಿಳಿಸುವ ಕಾರ್ಯವಾಗಬೇಕು. ಈಗಿನಿಂದಲೇ ಅಭಿಯಾನ ಪ್ರಾರಂಭಿಸಬೇಕು. ಹಿಂದೂ ಸಮಾಜ ಒಗ್ಗಟ್ಟಿನಿಂದ ಮುಂದೆ ಸಾಗಬೇಕು. ನಮ್ಮ ಧರ್ಮ, ಧರ್ಮದವರ ಮೇಲೆ ಆಕ್ರಮಣವಾದಾಗ ಒಗ್ಗೂಡಿ ಸಾತ್ವಿಕ ಹೋರಾಟ ಮಾಡೋಣ ಎಂದರು.

ಒಗ್ಗಟ್ಟಾಗಬೇಕು

ದಕ್ಷಿಣ ಮಧ್ಯ ಪ್ರಾಂತದ ಕ್ಷೇತ್ರೀಯ ಬೌದ್ಧಿಕ ಪ್ರಮುಖ ಶ್ರೀಧರ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜ ನಮ್ಮ ಹಿಂದಿನ ಆಚಾರ ವಿಚಾರ ನೆನಪು ಮಾಡಿಕೊಳ್ಳಬೇಕಿದೆ. ಮಕ್ಕಳಿಗೆ ಮೌಲ್ಯಗಳನ್ನು ತಿಳಿಸಬೇಕು. ಎಲ್ಲರಿಗೂ ಒಳ್ಳೆಯದನ್ನು ಮಾಡುವವರು, ಎಲ್ಲರ ಕಲ್ಯಾಣ ಬಯಸುವವರೇ ಹಿಂದೂಗಳು. ಹೀಗಾಗಿ ದೇಶದ ಜನರಿಗೆ ಗೌರವ ಸಿಗುತ್ತಿದೆ. ಈ ನಾಡು ನಾಗರಿಕತೆಯ ತೊಟ್ಟಿಲಾಗಿದ್ದು, ನಾವೆಲ್ಲರೂ ಒಗ್ಗಟ್ಟಾಗಬೇಕು. ಅವಿಭಕ್ತ ಕುಟುಂಬ, ಪರಿಸರ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಆಚರಣೆ, ನಾಗರಿಕ ಕರ್ತವ್ಯ ಅರಿಯಬೇಕು. ಅವುಗಳನ್ನು ಅಳವಡಿಸಿಕೊಂಡು ಮುಂದೆ ಸಾಗಬೇಕು ಎಂದರು.

ಈ ಸಂದರ್ಭದಲ್ಲಿ ಅವಿಭಕ್ತ ಕುಟುಂಬದಲ್ಲಿ ಜೀವನ ನಡೆಸುತ್ತಿರುವ ನೀಲವ್ವ ಸಂಕಪ್ಪ ವಡ್ಡರ ಕುಟುಂಬವನ್ನು ಸನ್ಮಾನಿಸಲಾಯಿತು. ಇದಕ್ಕೂ ಮೊದಲು ತಾಯಿ ಭಾರತಮಾತೆಯ ಭಾವಚಿತ್ರ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

ಅಶೋಕನಗರ ಹಿಂದೂ ಸಮಿತಿ ಅಧ್ಯಕ್ಷ ಶಿವಾನಂದ ಗುಂಜಾಳ, ವೇದಮೂರ್ತಿ ವೇಣುಗೋಪಾಲಚಾರ್, ಭವಾನಿನಗರ ರಾಯರ ಮಠದ ವಿಚಾರಣಕರ್ತ ಎ.ಸಿ. ಗೋಪಾಲ, ವೀಣಾ ಅಠವಲೆ, ಧೀರೇಂದ್ರ ಠಕ್ಕರ್, ವಿಜಯೇಂದ್ರ ಭಾಗಲ್, ಚೇತನರಾವ್, ವಿವೇಕ್ ಪವಾರ್, ವಿಶ್ವನಾಥ ರಾನಡೆ, ಪರ್ವತ್‌ಸಿಂಗ್ ಕಂಚಿ, ಜಿ.ಐ. ಅಂಗಡಿ, ಜಯರಾಜ್, ಸಂಧ್ಯಾ ದೀಕ್ಷಿತ್, ವಂದನಾ ಪುರೋಹಿತ್, ರಂಗಾ ಬದ್ದಿ, ದತ್ತಮೂರ್ತಿ ಕುಲಕರ್ಣಿ ಸೇರಿದಂತೆ ಹಲವರಿದ್ದರು.