ಹುಟ್ಟಿದ ಒಂದೇ ದಿನಕ್ಕೆ ಮಗುವನ್ನು ಸಾಂತ್ವನ ಕೇಂದ್ರಕ್ಕೆ ನೀಡಿದ ದಂಪತಿ..!

| Published : Aug 08 2025, 01:01 AM IST

ಸಾರಾಂಶ

ಹುಟ್ಟಿದ ಒಂದೇ ದಿನಕ್ಕೆ ಆರೈಕೆ ಮಾಡಲು ಶಕ್ತಿ ಇಲ್ಲ ಎಂಬ ಕಾರಣ ನೀಡಿ ದಂಪತಿ ಮಗುವನ್ನು ಸಾಂತ್ವನ ಕೇಂದ್ರಕ್ಕೆ ನೀಡಿದ ಅಪರೂಪದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ. ಮಗುವಿನ ತಂದೆ-ತಾಯಿ ನಮಗೆ ಮಗುವಿನ ಆರೈಕೆ ಮಾಡಲು ಶಕ್ತಿ ಇಲ್ಲ. ನಮಗೆ ಈಗಾಗಲೇ ನಾಲ್ಕೂವರೆ ವರ್ಷದ ಗಂಡು ಮಗುವಿದೆ. ಹೀಗಾಗಿ ಈ ಮಗುವನ್ನು ಬೇರೆಯವರಿಗೆ ದತ್ತು ನೀಡುವುದಾಗಿ ವೈದ್ಯರಿಗೆ ತಿಳಿಸಿದ್ದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಹುಟ್ಟಿದ ಒಂದೇ ದಿನಕ್ಕೆ ಆರೈಕೆ ಮಾಡಲು ಶಕ್ತಿ ಇಲ್ಲ ಎಂಬ ಕಾರಣ ನೀಡಿ ದಂಪತಿ ಮಗುವನ್ನು ಸಾಂತ್ವನ ಕೇಂದ್ರಕ್ಕೆ ನೀಡಿದ ಅಪರೂಪದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.

ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡ ಕೂಡಲೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಬೆಳಗ್ಗೆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ತಂದೆ-ತಾಯಿ ನಮಗೆ ಮಗುವಿನ ಆರೈಕೆ ಮಾಡಲು ಶಕ್ತಿ ಇಲ್ಲ. ನಮಗೆ ಈಗಾಗಲೇ ನಾಲ್ಕೂವರೆ ವರ್ಷದ ಗಂಡು ಮಗುವಿದೆ. ಹೀಗಾಗಿ ಈ ಮಗುವನ್ನು ಬೇರೆಯವರಿಗೆ ದತ್ತು ನೀಡುವುದಾಗಿ ವೈದ್ಯರಿಗೆ ತಿಳಿಸಿದ್ದರು.

ಕೂಡಲೇ ಎಚ್ಚೆತ್ತ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್ ಅವರು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಕ್ಕಳ ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಗುರುವಾರ ಮಧ್ಯಾಹ್ನ ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್, ಮಕ್ಕಳ ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿ ಸಿ.ಬಿ.ರಾಜು, ಆಪ್ತ ಸಮಲೋಚನಾಧಿಕಾರಿ ವಿನುತಾ ಕುಮಾರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂಜಮಣಿ ದಂಪತಿಯೊಂದಿಗೆ ಮಾತುಕತೆ ನಡೆಸಿ ಮಗುವಿನ ಆರೈಕೆಗೆ ಬೇಕಾದ ಎಲ್ಲ ನೆರವು ನೀಡುವುದಾಗಿ ಮನವೊಲಿಸಲು ಯತ್ನಿಸಿದರು.

ಆದರೆ, ಮಗು ಸಾಕಲು ನಮಗೆ ಸಾಧ್ಯವಿಲ್ಲ ಎಂದು ಹಟ ಹಿಡಿದ ದಂಪತಿ ಕೊನೆಗೂ ಹುಟ್ಟಿದ ಒಂದೇ ದಿನಕ್ಕೆ ಮಗುವನ್ನು ಸಾಂತ್ವನ ಕೇಂದ್ರಕ್ಕೆ ನೀಡಿದ್ದಾರೆ. ಇಲಾಖೆ ನಿಯಮಾನುಸಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಗುವನ್ನು ತಮ್ಮ ವಶಕ್ಕೆ ಪಡೆದು ಮಂಡ್ಯದ ಸಾಂತ್ವನ ಕೇಂದ್ರಕ್ಕೆ ರವಾನಿಸಿದ್ದಾರೆ.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಂಜಮಣಿ ಮಾತನಾಡಿ, ದಂಪತಿಗೆ ಮಗುವಿಗೆ ಆರೈಕೆಗೆ ಬೇಕಾದ ನೆರವು ನೀಡುವ ಭರವಸೆಗೆ ಅವರು ಒಪ್ಪಲಿಲ್ಲ. ಹೀಗಾಗಿ ಮಗುವಿನ ಸಂಪೂರ್ಣ ಜವಾಬ್ದಾರಿ ನಮ್ಮ ಇಲಾಖೆ ಮೇಲಿದೆ. ಮಗುವನ್ನು ಸಾಂತ್ವನ ಕೇಂದ್ರಕ್ಕೆ ರವಾನಿಸಲಾಗಿದೆ ಎಂದರು.

ಈ ಬಗ್ಗೆ ಮಕ್ಕಳ ಜಿಲ್ಲಾ ರಕ್ಷಣಾ ಘಟಕದ ಅಧಿಕಾರಿ ಸಿ.ಬಿ.ರಾಜು ಮಾತನಾಡಿ, ಇದೊಂದು ಅಪರೂಪ ಪ್ರಕರಣ. ನಮ್ಮ ಸಾಂತ್ವನ ಕೇಂದ್ರದಲ್ಲಿ ಮಗುವಿನ ಆರೈಕೆ ನಡೆಸಲಾಗುತ್ತದೆ. 60 ದಿನದೊಳಗೆ ಪೋಷಕರು ಬಯಸಿದರೆ ಮಗುವನ್ನು ವಾಪಸ್ ನೀಡಲಾಗುವುದು. ಇಲ್ಲದಿದ್ದರೆ ಮಗುವನ್ನು ಕಾನೂನಿನ ಪ್ರಕಾರ ದತ್ತು ಸ್ವೀಕರಿಸಿ ಆರೈಕೆ ಮಾಡಲಾಗುವುದು ಎಂದು ಹೇಳಿದ್ದಾರೆ.