ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಶ್ರಾವಣ ಮಾಸದ ಮೂರನೇ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಗೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಂಭ್ರಮ ಸಡಗರದ ಸಿದ್ಧತೆಗಳು ನಡೆಯುತ್ತಿವೆ.ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನ ಗುರುವಾರ ಪಟ್ಟಣದ ಹೃದಯ ಭಾಗದಲ್ಲಿ ಪೂಜೆಗೆ ಬೇಕಾದ ಸಾಮಗ್ರಿ ಖರೀದಿ ಭರಾಟೆ ಜೋರಾಗಿತ್ತು. ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗದ ರಸ್ತೆ ಎರಡೂಬದಿಯಲ್ಲಿ ವಿವಿಧ ಬಗೆಯ ಹಣ್ಣುಗಳು, ಹೂವು, ಬಾಳೆ ಕಂದು, ಮಾವಿನಸೊಪ್ಪು ಮತ್ತು ವಿಶೇಷವಾಗಿ ತಾವರೆ ಹೂವುಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರ ನಡೆಸಿದರು.
ಪುರಸಭೆ ಕಚೇರಿ ವಾಣಿಜ್ಯ ಮಳಿಗೆ ಕಟ್ಟಡ ಸೂಪರ್ ಮಾರ್ಕೆಟ್ ಆಸುಪಾಸಿನಲ್ಲಿಯೂ ಕೂಡ ವಿವಿಧ ಬಗೆಯ ಹಣ್ಣು ಹೂವುಗಳ ಮಾರಾಟ ಭರದಿಂದ ನಡೆಯಿತು. ತಮಗಿಷ್ಟವಾದ ಬಗೆ ಬಗೆಯ ಹೂವು ಮತ್ತು ಹಣ್ಣುಗಳನ್ನು ಖರೀದಿಸಲು ಜನರ ದಂಡೇ ಸೇರಿತ್ತು. ಬಟ್ಟೆ ಅಂಗಡಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಹೊಸಬಟ್ಟೆ ಖರೀದಿಯಲ್ಲಿ ಮುಳುಗಿದ್ದರೆ, ಮನೆಯಲ್ಲಿ ವರಮಹಾಲಕ್ಷ್ಮಿ ವಿಗ್ರಹವನ್ನು ಪ್ರತಿಷ್ಠಾಪಿಸುವವರು ಬೆಳ್ಳಿ ಮಾದರಿಯ ಮುಖವಾಡ ಮತ್ತು ಅದರ ಅಲಂಕಾರಕ್ಕೆ ಬೇಕಾಗುವ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.ಹೂವು ಹಣ್ಣು ದುಬಾರಿ:
ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೂವು ಮತ್ತು ಹಣ್ಣಿನ ಬೆಲೆ ದುಬಾರಿಯಾಗಿತ್ತು. ಮಿಕ್ಸ್ ಹಣ್ಣು ಪ್ರತಿ ಕೆಜಿಗೆ 150 ರು. ಎರಡು ಅನಾನಸ್‌ಗೆ 100 ರು. ಏಲಕ್ಕಿ ಬಾಳೆಹಣ್ಣು ಪ್ರತಿ ಕೆಜಿಗೆ 100 ರಿಂದ 150 ರು. ಒಂದು ಮಾರು ಸೇವಂತಿಗೆ 150 ರು. ಬೆಲೆಯಲ್ಲಿ ಚೌಕಾಸಿಗೆ ಅವಕಾಶವಿಲ್ಲದೆ ಮಾರಾಟವಾಗುತ್ತಿದ್ದವು. ಬೆಲೆ ಹೆಚ್ಚಾದರೂ ಸಹ ಗ್ರಾಹಕರು ವಿಧಿಯಿಲ್ಲದೆ ಖುಷಿಯಿಂದಲೇ ಖರೀದಿಸುತ್ತಿದ್ದರು.ಶುಕ್ರವಾರ ಮುಂಜಾನೆ ವೇಳೆಗೆ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸುವ ಹಿನ್ನೆಲೆಯಲ್ಲಿ ಬಹುತೇಕ ಮನೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಲಕ್ಷ್ಮಿ ಕಲಶಕ್ಕೆ ಸೀರೆಯುಡಿಸಿ ಮಖವಾಡ ಧರಿಸಿ ಅಲಂಕರಿಸಲು ಪೂರ್ವ ತಯಾರಿ ನಡೆಯುತ್ತಿತ್ತು. ಪೂಜೆಯ ನೈವೇದ್ಯಕ್ಕಾಗಿ ರವೆ ಉಂಡೆ, ಖರ್ಜಿಕಾಯಿ, ಒಬ್ಬಟ್ಟು ಸೇರಿದಂತೆ ಇನ್ನಿತರೆ ತಿಂಡಿ ತಿನಿಸುಗಳ ತಯಾರಿಕೆಯ ಘಮಘಮಿಕೆ ಹೊರಹೊಮ್ಮುತ್ತಿತ್ತು.
ಹಬ್ಬದ ಖರೀದಿ ಭರಾಟೆ ಜೋರುಹಲಗೂರು:
ವರಮಹಾಲಕ್ಷ್ಮಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಗುರುವಾರ ಜನರಿಂದ ಖರೀದಿ ಭರಾಟೆ ಜೋರಾಗಿ ನಡೆಯಿತು.ಮಹಿಳೆಯರು ಬೆಳಗ್ಗಿನಿಂದ ಸಂಜೆಯವರೆಗೂ ಹೂ, ವಿವಿಧ ಬಗೆಯ ಹಣ್ಣುಗಳು ತಾವರೆ ಹೂ, ಬಾಳೆ ಕಂದು, ಕಬ್ಬಿನ ಸೋಗು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಉತ್ಸಾಹದಿಂದ ಖರೀದಿಸಿದರು. ಬಾಳೆ ಹಣ್ಣು ಮತ್ತು ಹೂ ದರ ದುಬಾರಿಯಾದರೂ, ಮಹಿಳೆಯರು ಖರೀದಿಸಲು ಹಿಂದೆ ಬೀಳಲಿಲ್ಲ.
ಹಲಗೂರು ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಮಹಿಳೆಯರು ರಾತ್ರಿ 8 ಗಂಟೆವರೆಗೂ ಖರೀದಿಯಲ್ಲಿ ತೊಡಗಿದ್ದ ದೃಶ್ಯ ಕಂಡು ಬಂತು. ಜನದಟ್ಟಣೆ ಹೆಚ್ಚಾದ ಕಾರಣ ಪೊಲೀಸರು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಲ್ಲಿ ನಿರತರಾಗಿದ್ದರು.