ಗದಗ: ಇಂದಿನ ಯುವ ಸಮುದಾಯ ಮೊಬೈಲ್‌ ಗೀಳಿನಿಂದ ಹೊರಬಂದು ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಪ್ರಾ. ಡಾ. ವಿ.ಟಿ. ನಾಯ್ಕರ ತಿಳಿಸಿದರು.

ನಗರದ ಆದರ್ಶ ಶಿಕ್ಷಣ ಸಮಿತಿಯ ವಿ.ಆರ್. ಕುಷ್ಟಗಿ ಮೆಮೋರಿಯಲ್ ಕಾಲೇಜ್ ಆಫ್ ಕಾಮರ್ಸ್ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ನಡೆದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇವತ್ತು ಪುಸ್ತಕಗಳನ್ನು ಓದುವ ರೂಢಿ ಬಹಳಷ್ಟು ಕಡಿಮೆಯಾಗಿದೆ. ವಿಶೇಷವಾಗಿ ಯುವ ಜನತೆ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಇಡೀ ಜೀವನವನ್ನು ಅಳವಡಿಸಿಕೊಂಡು ತಮ್ಮ ಸುಂದರವಾದ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ವಿದ್ಯಾರ್ಥಿಗಳು ಮೊಬೈಲ್‌ನಿಂದ ದೂರ ಉ‍ಳಿದು ಹೆಚ್ಚು ಸಮಯವನ್ನು ಪುಸ್ತಕ ಓದಲು ಮೀಸಲಿಡಬೇಕು. ಓದುವ ಹವ್ಯಾಸ ಹೆಚ್ಚಿಸುವ ದೃಷ್ಟಿಯಿಂದ ಪ್ರತಿವರ್ಷ ವಿಶ್ವ ಪುಸ್ತಕ ದಿನ ಆಚರಿಸಿಕೊಳ್ಳುತ್ತ ಬರುತ್ತಿದ್ದೇವೆ. ಈ ದಿನ ಪುಸ್ತಕಗಳ ಮಹತ್ವ, ಓದುವ ಹವ್ಯಾಸವನ್ನು ಬೆಳೆಸುವುದಕ್ಕೆ ಸಮರ್ಪಿತವಾಗಿದೆ ಎಂದರು.

ಪುಸ್ತಕಗಳು ಮಾನವನ ಅತ್ಯುತ್ತಮ ಸ್ನೇಹಿತರು ಎಂದು ಹೇಳಲಾಗುತ್ತದೆ. ಅವು ಜ್ಞಾನವನ್ನು ಹೆಚ್ಚಿಸುವುದಷ್ಟೇ ಅಲ್ಲ, ಜೀವನದ ಮೌಲ್ಯಗಳನ್ನು, ಸಂಸ್ಕೃತಿಯನ್ನು ಮತ್ತು ಚಿಂತನೆಗಳನ್ನು ವಿಸ್ತರಿಸುತ್ತವೆ.

ವಿಶ್ವ ಪುಸ್ತಕ ದಿನದ ಅಂಗವಾಗಿ ಕಾಲೇಜುಗಳು ಮತ್ತು ಗ್ರಂಥಾಲಯಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪುಸ್ತಕ ಪ್ರದರ್ಶನ, ಓದುವ ಸ್ಪರ್ಧೆ, ಕಥಾ ವಾಚನ ಕಾರ್ಯಕ್ರಮಗಳು ಮತ್ತು ಲೇಖಕರ ಪರಿಚಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿಯನ್ನು ಹೆಚ್ಚಿಸುತ್ತವೆ ಎಂದು ತಿಳಿಸಿದರು.


ಮುಂಬರುವ ದಿನಮಾನಗಳಲ್ಲಿ ಮಹಾವಿದ್ಯಾಲಯದ ಗ್ರಂಥಾಲಯ ವಿಭಾಗದಿಂದ ಜಿಲ್ಲಾ ಮಟ್ಟದಲ್ಲಿ ನಾನು ನನ್ನ ಪುಸ್ತಕ ಎಂಬ ಒಂದು ದಿನದ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳುತ್ತಿದ್ದು ಎಲ್ಲ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ವೇಳೆ ಗ್ರಂಥಾಲಯ ವಿಭಾಗದ ಚೇರ್ಮನ್ ಪ್ರೊ. ಬಿ.ಪಿ. ಜೈನರ, ಡಾ. ಎಸ್.ಡಿ. ಬಂಡಾರ್ಕರ್, ಪ್ರಶಾಂತ್ ಹೊಂಬಾಳಿ, ಡಾ. ಸುನಿಲ್ ನಾಗರಬೆಟ್ಟ, ರವೀಶ್, ಸವಿತಾ, ರಾಧಿಕಾ ಪುರೋಹಿತ್ ಸೇರಿದಂತೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.