ಮಂಗಳೂರು: ಸಹಕಾರ ರಂಗದ ಅಗ್ರಗಣ್ಯ ನಾಯಕ, ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರಕುಮಾರ್ ಮಾರ್ಗದರ್ಶನದಲ್ಲಿ ಅಭಿವೃದ್ಧಿಯ ಪಥದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘವು ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ. 2025-26ನೇ ಆರ್ಥಿಕ ವರ್ಷದಲ್ಲಿ 1.09 ಕೋಟಿ ರು. ಲಾಭಗಳಿಸಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಜಗದೀಶ್ಚಂದ್ರ ಅಂಚನ್ ತಿಳಿಸಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ನೌಕರರು ತಮ್ಮ ಆರ್ಥಿಕ ಬಲವರ್ಧನೆಗಾಗಿ ಸ್ಥಾಪಿಸಿದ ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರಿ ಸಂಘವು ಇದೀಗ 95 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಆರಂಭಿಕ 71 ವರ್ಷಗಳ ಕಾಲ ಅರೆಕಾಲಿಕವಾಗಿ ಕಾರ್ಯನಿರ್ವಹಿಸಿದ್ದ ಸಂಘವು 2001ರವರೆಗೆ ಕೇವಲ 3.84 ಲಕ್ಷ ರು. ಠೇವಣಿ ಹಾಗೂ 3.13 ಲಕ್ಷ ರು. ಮುಂಗಡದೊಂದಿಗೆ ಕಾರ್ಯ ನಿರ್ವಹಿಸುತ್ತಿತ್ತು. ಆದರೆ, ಕಳೆದ 25 ವರ್ಷಗಳಲ್ಲಿ ಸಂಘವು ಅದ್ಭುತ ಬೆಳವಣಿಗೆಯನ್ನು ಕಂಡು, ಇಂದು ಸಹಕಾರಿ ನೌಕರರ ಆರ್ಥಿಕ ಶಕ್ತಿಯಾಗಿ ರೂಪಾಂತರಗೊಂಡಿದೆ.100 ಕೋಟಿ ರು. ದಾಟಿದ ಠೇವಣಿ: ಶನಿವಾರ ನಡೆದ ಸಂಘದ ಸಭೆಯಲ್ಲಿ ಪ್ರಕಟಿಸಿದ ಆರ್ಥಿಕ ತಖ್ತೆಯ ಪ್ರಕಾರ , 2024-25ರ ಆರ್ಥಿಕ ವರ್ಷದಲ್ಲಿ 94.33 ಕೋಟಿ ರು. ಠೇವಣಿ ಹೊಂದಿದ್ದ ಸಂಘವು 2025-26ರ ಆರ್ಥಿಕ ವರ್ಷದಲ್ಲಿ 100 ಕೋಟಿ ರು.ಗಳ ಮೈಲಿಗಲ್ಲನ್ನು ದಾಟಿ 108.10 ಕೋಟಿ ರು. ಠೇವಣಿಯನ್ನು ಹೊಂದಿದೆ.ಇದು ಸಂಘದ 95 ವರ್ಷಗಳ ಇತಿಹಾಸದಲ್ಲಿ ಅತ್ಯಂತ ದೊಡ್ಡ ಸಾಧನೆ. ಠೇವಣಿ ಸಂಗ್ರಹಣೆಯ ಜೊತೆಗೆ ಸಾಲ ಮುಂಗಡದಲ್ಲೂ ಏರಿಕೆಯಾಗಿದ್ದು 82.91 ಕೋಟಿ ರು.ಯಿಂದ ವರದಿ ವರ್ಷದಲ್ಲಿ 91.91 ಕೋಟಿ ರು.ಗೆ ಏರಿಕೆಯಾಗಿದೆ. ಸಂಘದ ಒಟ್ಟು ವ್ಯವಹಾರವೂ ವರದಿ ವರ್ಷದಲ್ಲಿದ್ದ 77.23 ಕೋಟಿ ರು.ಯಿಂದ ಇದೀಗ 200.01 ಕೋಟಿ ರು.ಗೆ ವೃದ್ಧಿಯಾಗಿದೆ. ಇದು ಸಂಘದ ಸ್ಥಿರತೆ ಮತ್ತು ಸದಸ್ಯರ ವಿಶ್ವಾಸವನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದರು.ಸಂಘವು ಪ್ರಸ್ತುತ 1140 ‘ಎ’ ತರಗತಿ ಸದಸ್ಯರನ್ನು ಹೊಂದಿದ್ದು, ಅವರ ಬೆಂಬಲವೇ ಸಂಘದ ಪ್ರಗತಿಯ ಮೂಲವಾಗಿದೆ. ಸಂಘವು 2024-25ನೇ ಸಾಲಿನಲ್ಲಿ 95.32 ಲಕ್ಷ ರು. ಲಾಭ ಗಳಿಸಿತ್ತು. 2025-26ನೇ ಸಾಲಿನಲ್ಲಿ 108.10ಕೋಟಿ ರು.ಲಾಭ ಗಳಿಸಿ ಸಾಧನೆಯ ಪಥವನ್ನು ಕಂಡಿದೆ.ಸಂಘವು 29.12 ಲಕ್ಷ ರು. ಪಾಲು ಬಂಡವಾಳವನ್ನು ಹೊಂದಿದ್ದು, 6.31 ಕೋಟಿ ರು. ವಿವಿಧ ನಿಧಿಗಳನ್ನು ಹೊಂದಿದೆ ಎಂದು ತಿಳಿಸಿದ್ದಾರೆ.ಸಂಘದ ಸಭೆಯಲ್ಲಿ ಉಪಾಧ್ಯಕ್ಷ ರಾಘವ ಆರ್ ಉಚ್ಚಿಲ್, ನಿರ್ದೇಶಕರಾದ ದಿವಾಕರ ಶೆಟ್ಟಿ ಕೆ, ವಿಶ್ವೇಶ್ವರ ಐತಾಳ್ , ಜಯಪ್ರಕಾಶ್ ರೈ ಸಿ, ಗಿರಿಧರ್ ಕೆ, ವಿಶ್ವನಾಥ ಕೆ ಟಿ, ಶಿವಾನಂದ ಪಿ, ಚಂದ್ರಕಲಾ ಕೆ., ಮೋಹನ್ ಎನ್ , ವಿಶ್ವನಾಥ್ ಎನ್. ಅಮೀನ್ , ಗೀತಾಕ್ಷಿ , ಕಿರಣ್ ಕುಮಾರ್ ಶೆಟ್ಟಿ , ನಿಶಿತಾ ಜಯರಾಮ್, ಪ್ರೇಮ್ ರಾಜ್ ಭಂಡಾರಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಇದ್ದರು.
ಸಂಘವು ಮಂಗಳೂರು ನಗರದ ಕೊಡಿಯಾಲ್ ಬೈಲ್ ನಲ್ಲಿ ಮೂರು ಮಹಡಿಯ ಸುಸಜ್ಜಿತ ‘ಉನ್ನತಿ’ ಸ್ವಂತ ಆಡಳಿತ ಕಟ್ಟಡವನ್ನು ಹೊಂದಿದೆ. ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಘವು ಈಗಾಗಲೇ ನಾಲ್ಕು ಶಾಖೆಗಳನ್ನು ಹೊಂದಿದ್ದು , ಈ ಪೈಕಿ ಮಂಗಳೂರಿನಲ್ಲಿ ಎರಡು, ಉಡುಪಿ ಹಾಗೂ ಪುತ್ತೂರಿನಲ್ಲಿ ತಲಾ ಒಂದು ಶಾಖೆ ಕಾರ್ಯ ನಿರ್ವಹಿಸುತ್ತಿದೆ. ಸಂಘದ ಪ್ರಗತಿಯನ್ನು ಗುರುತಿಸಿ ಎಸ್‌ಸಿಡಿಸಿಸಿ ಬ್ಯಾಂಕ್ ನೀಡುವ ಪ್ರತಿಷ್ಠಿತ ಸಾಧನಾ ಪ್ರಶಸ್ತಿಯನ್ನು ಸಂಘವು ಸತತ 8 ಬಾರಿ (2017-18 ರಿಂದ 2024-25) ಪಡೆದುಕೊಂಡಿದೆ. ಇದು ಸಂಘದ ಸ್ಥಿರ ಸಾಧನೆಗೆ ಸಾಕ್ಷಿಯಾಗಿದೆ ಎಂದು ಎಸ್.ಜಗದೀಶ್ಚಂದ್ರ ಅಂಚನ್ ತಿಳಿಸಿದ್ದಾರೆ.