ಕುಶಾಲನಗರ: ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದಲ್ಲಿ 9 ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹಸುಗಳಿಗೆ ಗೋಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಉದ್ಯಮಿ, ರಾಜಕೀಯ ಮುಖಂಡ ನಾಪಂಡ ಮುತ್ತಪ್ಪ ಮತ್ತು ಮುದ್ದಪ್ಪ ಅವರ ನಿವಾಸದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಯಾನ ಕರಪತ್ರಗಳನ್ನು ಬಿಡುಗಡೆ ಮಾಡಿದರು.ಗ್ರಾಮಾಂತರ ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ರೈತರು ಹೈನುಗಾರಿಕೆಯಲ್ಲಿ ತೊಡಗಿರುವುದು ಸಂತಸದ ವಿಷಯ. ರಾಸುಗಳಿಗೆ ಇಲಾಖೆಯಿಂದ ಉಚಿತವಾಗಿ ನೀಡುವ ಕಾಲುಬಾಯಿ ರೋಗದ ಲಸಿಕೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರಾಸುಗಳಿಗೆ ಹಾಕಿಸಿ ಅವುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಅಗಾಧ ಪ್ರಮಾಣದಲ್ಲಿ ಗ್ರಾಮಸ್ಥರು ಹೈನುಗಾರಿಕೆಗೆ ಆದ್ಯತೆ ನೀಡಿದ್ದಾರೆ. ಅವುಗಳ ರಕ್ಷಣೆ ಮತ್ತು ಚಿಕಿತ್ಸೆ ಕಡೆಗೆ ಹೆಚ್ಚು ಗಮನ ಹರಿಸುವಂತೆ ಕಿವಿಮಾತು ಹೇಳಿದರು.ಸನ್ಮಾನ: ಇದೇ ಸಂದರ್ಭ ದೊಡ್ಡಮಟ್ಟದಲ್ಲಿ ಮಟ್ಟದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಸಿದ್ದಲಿಂಗಪುರದ ‌ ಉದ್ಯಮಿ ಹಾಗೂ ರಾಜಕಾರಣಿ ನಾಪಂಡ ಮುತ್ತಪ್ಪ, ನಾಪಂಡ ಮುದ್ದಪ್ಪ ಅವರನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸನ್ಮಾನಿಸಿದರು. ಹಸುವಿಗೆ ಲಸಿಕೆ ನೀಡುವ ಮೂಲಕ ಪಶುವೈದ್ಯಾಧಿಕಾರಿ ಡಾ. ಸಿಂಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲೆಯ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಲಿಂಗರಾಜ್ ದೊಡ್ಡಮುನಿ ಇಲಾಖೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಒದಗಿಸಿದರು.

ಕುಶಾಲನಗರ ತಾಲೂಕು ಪಶುವೈದ್ಯಾಧಿಕಾರಿ ಡಾ. ಸಂಜಯ ಕುಮಾರ್ ಆರ್.ಸಿಂಧೆ, ಡಾ. ಅಮೃತ್, ಪರಿವೀಕ್ಷಕರಾದ ಎನ್.ಎಂ. ಸುರೇಶ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಂಖ್ಯೆಯಲ್ಲಿ ರೈತಪಿ ವರ್ಗ ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.